ಬೆಂಗಳೂರು : ಆರ್ ಎಸ್ಎಸ್ ಗೆ ಕಡಿವಾಣ ಹಾಕುವ ವ್ಯರ್ಥ ಪ್ರಯತ್ನ ಬಿಟ್ಟು, ತಾಕತ್ತಿದ್ದರೆ ಇದನ್ನು ನಿಷೇಧ ಮಾಡಿ ನೋಡೋಣ ಎಂದು ರಾಜ್ಯ ಸರ್ಕಾರಕ್ಕೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಆಶೋಕ್ ಬಹಿರಂಗ ಸವಾಲು ಹಾಕಿದ್ದಾರೆ.
ತಮ್ಮ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ರಾಜ್ಯ ಸರ್ಕಾರದ ವಿರುದ್ದ ವಾಗ್ದಳಿ ನಡೆಸಿರುವ ಅವರು, ಹಿಟ್ಲರ್ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ಛಡಿಯೇಟು ಕೊಟ್ಟಿದ್ದು, ಈ ರೀತಿ ಹಿಂಬಾಗಿಲಿನಿಂದ ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹಾಕಲು ಆಗುವುದಿಲ್ಲ. ಅಲ್ಲದೆ, ಈ ಹಿಟ್ಲರ್ ಆಟ ಜಾಸ್ತಿ ದಿನ ನಡೆಯುವುದಿಲ್ಲ ಸ್ವಾಮಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಆರ್ ಎಸ್ ಎಸ್ ಪಥಸಂಚನಲಕ್ಕೆ ಅವಕಾಶ ನೀಡದಿರುವ ಕಾಂಗ್ರೆಸ್ ಸರ್ಕಾರದ ನಿರಂಕುಶವಾದಿ ನಡೆಗೆ ಮಾನ್ಯ ಹೈಕೋರ್ಟ್ ಛೀಮಾರಿ ಹಾಕಿದ್ದು, ಸಂವಿಧಾನದತ್ತ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರೇ, ನಿಮ್ಮ ಪರಮೋಚ್ಛ ನಾಯಕ ರಾಹುಲ್ ಗಾಂಧಿ ಅವರು ಸದಾ ಜೇಬಿನಲ್ಲಿಟ್ಟುಕೊಂಡು ಓಡಾಡುವ ಸಂವಿಧಾನ ಪುಸ್ತಕದಲ್ಲಿ ನಾಗರೀಕರ ಮೂಲಭೂತ ಹಕ್ಕುಗಳಿಗೆ ಸ್ಥಾನ ಇಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ ಒಂದೇ ಒಂದು ರಸ್ತೆ ಗುಂಡಿ ಮುಚ್ಚಲು ದುಡ್ಡಿಲ್ಲ. ಪಾಲಿಕೆ ಶಾಲೆಗಳ ಶಿಕ್ಷಕರಿಗೆ 6 ತಿಂಗಳಿಂದ ವೇತನ ಕೊಟ್ಟಿಲ್ಲ. 8 ತಿಂಗಳಿಂದ ಸ್ಮಶಾನ ಸಿಬ್ಬಂದಿಗೆ ಸಂಬಳವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾಮಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ, ಬೆಂಗಳೂರಿನ ಜನ ಪಾಲಿಕೆಗೆ ಕಟ್ಟುತ್ತಿರುವ ಸಾವಿರಾರು ಕೋಟಿ ತೆರಿಗೆ ಹಣ ಎಲ್ಲಿ ಸ್ವಾಮಿ? ಜನರ ತೆರಿಗೆ ಹಣ ಯಾರ ಜೇಬು ಸೇರುತ್ತಿದೆ? ಇದರ ಮೇಲೆ ಈಗ ಎ-ಖಾತಾ ಪರಿವರ್ತನೆ ನೆಪದಲ್ಲಿ ಮತ್ತೊಮ್ಮೆ ಜನ ಸಾಮಾನ್ಯರಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಲು ಇಳಿದಿದ್ದೀರಿ.
ಬ್ರ್ಯಾಂಡ್ ಬೆಂಗಳೂರು ಮಾಡ್ತೀನಿ ಅಂತ ಬೆಂಗಳೂರನ್ನ ಬರ್ಬಾದ್ ಮಾಡಿಬಿಟ್ಟರಲ್ಲ ಸ್ವಾಮಿ. ಜನ ನಿಮ್ಮನ್ನ ಖಂಡಿತ ಕ್ಷಮಿಸುವುದಿಲ್ಲ ಎಂದು ಆಶೋಕ್ ಸರ್ಕಾರ ವಿರುದ್ದ ಕಿಡಿಕಾರಿದ್ದಾರೆ
