Thursday, October 30, 2025
Homeರಾಜ್ಯಜನರ ಗಮನ ಬೇರೆಡೆ ಸಳೆಯಲು ಆರ್‌ಎಸ್‌‍ಎಸ್‌‍ ವಿವಾದದ ಅಸ್ತ್ರ ಬಳಸುತ್ತಿದೆಯಾ ಕಾಂಗ್ರೆಸ್ ಸರ್ಕಾರ..?

ಜನರ ಗಮನ ಬೇರೆಡೆ ಸಳೆಯಲು ಆರ್‌ಎಸ್‌‍ಎಸ್‌‍ ವಿವಾದದ ಅಸ್ತ್ರ ಬಳಸುತ್ತಿದೆಯಾ ಕಾಂಗ್ರೆಸ್ ಸರ್ಕಾರ..?

Is the Congress government using the RSS controversy to divert people's attention?

ಬೆಂಗಳೂರು, ಅ.29- ನಾನಾ ರೀತಿಯ ಶುಲ್ಕ, ತೆರಿಗೆ ಹಾಗೂ ದರ ಏರಿಕೆಯಿಂದಾಗಿ ಜನಾಕ್ರೋಶಕ್ಕೆ ತುತ್ತಾಗಿರುವ ಕಾಂಗ್ರೆಸ್‌‍ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಜನರ ಗಮನವನ್ನು ಬೇರೆಡೆ ಸೆಳೆಯಲು ಆರ್‌ಎಸ್‌‍ಎಸ್‌‍ ಸಂಬಂಧಿತ ವಿವಾದಗಳನ್ನು ಹುಟ್ಟುಹಾಕಿದೆ ಎಂಬ ಟೀಕೆಗಳು ಕೇಳಿ ಬರುತ್ತಿವೆ.

ಶುಲ್ಕ ಹಾಗೂ ದರ ಏರಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಅಧಿಕಾರ ಹಂಚಿಕೆಯ ಪೈಪೋಟಿಯ ಮಾದರಿಯಲ್ಲೇ ಪ್ರಬಲ ಸ್ಪರ್ಧೆ ಕಂಡು ಬಂದಿದೆ. ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ನೆಪದಲ್ಲಿ ಸಾರಿಗೆ ಬಸ್‌‍ ಪ್ರಯಾಣ ದರ, ನೀರಿನ ದರ, ವಿದ್ಯುತ್‌ ದರ, ಮದ್ಯದ ಬೆಲೆ, ಆಸ್ತಿ ನೋಂದಣಿ ಮತ್ತು ದಸ್ತಾವೇಜುಗಳ ಶುಲ್ಕಗಳನ್ನು ಎರ್ರಾಬಿರ್ರಿ ಏರಿಕೆ ಮಾಡಿದೆ.

- Advertisement -

ಕಂದಾಯ, ಸಾರಿಗೆ, ಅಬಕಾರಿ, ಇಂಧನ ಇಲಾಖೆಗಳ ಈ ಜನವಿರೋಧಿ ದರ ಹೆಚ್ಚಳದಿಂದ ಸಾರ್ವಜನಿಕರು ಹೈರಾಣಾಗಿದ್ದರು. ಇದಕ್ಕೆ ಪೈಪೋಟಿ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ ವ್ಯಾಪ್ತಿಯ ಬೆಂಗಳೂರಿನ ನಗರಾಭಿವೃದ್ಧಿ ಇಲಾಖೆಯಲ್ಲಿ ಹಲವು ರೀತಿಯ ಶುಲ್ಕಗಳನ್ನು ಹೆಚ್ಚಿಸಿ ಚಿತ್ರವಿಚಿತ್ರವಾದ ನಿಯಮಗಳನ್ನು ರೂಪಿಸಿ ಜನರಿಗೆ ಈ ಸರ್ಕಾರದ ಸಹವಾಸವೇ ಸಾಕು ಎಂಬುವಷ್ಟು ರೇಜಿಗಿಡಿಸಿದ್ದಾರೆ.

ಸುಪ್ರೀಂಕೋರ್ಟಿನ ತೀರ್ಪನ್ನು ನೆಪ ಮಾಡಿಕೊಂಡು ಸಿಸಿ, ಓಸಿ ಪ್ರಮಾಣ ಪತ್ರಗಳಿಲ್ಲದ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡುವುದಿಲ್ಲ ಎಂದು ಪಟ್ಟು ಹಿಡಿಯಲಾಗಿತ್ತು. ಜನ ಛೀಮಾರಿ ಹಾಕುವುದು ಹೆಚ್ಚಾದಾಗ ತಡವಾಗಿ ಸಭೆಗಳನ್ನು ನಡೆಸಿ 30×40 ಅಡಿಗಿಂತಲೂ ಕಡಿಮೆ ಅಳತೆಯ ನಿವೇಶನದಲ್ಲಿ ನಿರ್ಮಿಸಿರುವ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ಸಿಸಿ, ಓಸಿಯ ವಿನಾಯಿತಿ ನೀಡುವ ನಿರ್ಣಯ ಕೈಗೊಳ್ಳಲಾಗಿದೆ.

ಆದರೆ ವಿಳಂಬವಾದ ಈ ಗ್ಯಾಪ್‌ನಲ್ಲಿ ಅಧಿಕಾರಿಗಳು ಮನೆ ಮಾಲೀಕರಿಂದ ಸಾಕಷ್ಟು ಹಣವನ್ನು ಸುಲಿಗೆ ಮಾಡಿದ್ದಾರೆ. ಇದು ಸರ್ಕಾರದ ಸುಲಿಗೆ ಎಂಬ ಭಾವನೆ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ.

ಡಿ.ಕೆ.ಶಿವಕುಮಾರ್‌ ಅವರು ಪತ್ರಿಕಾಗೋಷ್ಠಿ ನಡೆಸಿದಾಗಲೆಲ್ಲಾ ಯಾರಿಗೂ ಒಂದು ಪೈಸೆ ಲಂಚ ಕೊಡಬೇಡಿ ಎಂದು ಜನರಿಗೆ ಎಚ್ಚರಿಕೆ ಕೊಡುತ್ತಲೇ ಇರುತ್ತಾರೆ, ಆದರೆ ಅಧಿಕಾರಿಗಳು ಪೈಸೆ ಲೆಕ್ಕದಲ್ಲಿ ಲಂಚ ಕೇಳುತ್ತಿಲ್ಲ, ಲಕ್ಷಗಳ ಪ್ರಮಾಣದಲ್ಲಿ ಹಣ ಪೀಕುತ್ತಿದ್ದಾರೆ. ಇದು ಪಂಚಖಾತ್ರಿಗಳ ಲಾಭಕ್ಕಿಂತಲೂ ದೊಡ್ಡದಾದ ಜನಾಕ್ರೋಶವನ್ನು ಸೃಷ್ಟಿಸಿದೆ.

ಜೊತೆಗೆ ಮತ್ತೊಂದು ಎಡವಟ್ಟು ಎಂಬಂತೆ ಬಿ ಖಾತಾದಿಂದ ಎ ಖಾತಾ ಪರಿವರ್ತನೆಯ ಹೆಸರಿನಲ್ಲಿ ಆಸ್ತಿಯ ಮೌಲ್ಯದ ಶೇ. 5ರಷ್ಟು ಶುಲ್ಕ ವಸೂಲಿ ಮಾಡುತ್ತಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ದಾಖಲಾತಿಗಳನ್ನು ಕ್ರಮಬದ್ಧಗೊಳಿಸಿಕೊಡುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳುತ್ತಿದ್ದಾರೆ. ಆದರೆ ಇದು ಅಕ್ರಮ ಸಕ್ರಮವಲ್ಲ ಎಂಬ ಸ್ಪಷ್ಟನೆಯನ್ನು ನೀಡಲಾಗುತ್ತಿದೆ. ಎ ಖಾತಾವಾದರೂ ಅದು ಸಕ್ರಮವೆಂದು ಪರಿಗಣಿಸುವುದಿಲ್ಲ ಎಂದಾದರೆ ಶೇ.5 ರಷ್ಟು ಹಣ ಕಟ್ಟಿಸಿಕೊಳ್ಳುವುದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ.

ಸರ್ಕಾರ ಆಯ್ದ ಜನರಿಗೆ ಪಂಚಖಾತ್ರಿಗಳನ್ನು ಕೊಟ್ಟು ಅದಕ್ಕೆ ಪ್ರತಿಯಾಗಿ ಪ್ರತಿಯೊಬ್ಬರಿಂದಲೂ ದುಪ್ಪಟ್ಟು ಹಣ ಸುಲಿಗೆ ಮಾಡುತ್ತಿದೆ ಎಂಬ ಟೀಕೆಗಳಿವೆ. ಗುತ್ತಿಗೆದಾರರ ಸಂಘದವರು ಕೂಡ ಆರೋಪಗಳನ್ನು ಮಾಡಿ, ಕಾಂಗ್ರೆಸ್‌‍ ಸರ್ಕಾರದಲ್ಲೂ ಕಮಿಷನ್‌ ದಂಧೆ ನಡೆಯುತ್ತಿದೆ ಎಂದಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್‌‍ ಸರ್ಕಾರಕ್ಕೆ ಗ್ರೇಟರ್‌ ಬೆಂಗಳೂರು ಪಾಲಿಕೆಗಳ ಚುನಾವಣೆ, ಜಿಲ್ಲಾ ಪಂಚಾಯತ್‌, ತಾಲ್ಲೂಕು ಪಂಚಾಯತ್‌ ಚುನಾವಣೆಗಳು ಪ್ರತಿಷ್ಠೆಯ ಪ್ರಶ್ನೆಯಾಗಿವೆ. ಆದರೆ ದರಗಳ ಏರಿಕೆ, ಹಲವಾರು ಗೊಂದಲಕಾರಿ ನೀತಿಗಳು ಕಾಂಗ್ರೆಸ್‌‍ ಸರ್ಕಾರಕ್ಕೆ ಜನ ಹಿಡಿ ಶಾಪ ಹಾಕುವಂತಹ ವಾತಾವರಣ ನಿರ್ಮಿಸಿದೆ.

ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಎಲ್ಲಾ ಜನವಿರೋಧಿ ನಿಲುವುಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಆರ್‌ಎಸ್‌‍ಎಸ್‌‍ ವಿವಾದದ ಅಸ್ತ್ರವನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಟೀಕೆಗಳಿವೆ.

ಸದ್ಯಕ್ಕೆ ಕರ್ನಾಟಕದಲ್ಲಿ ಶಾಂತಿ ಸುವ್ಯವಸ್ಥೆ ಸುಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಸಚಿವರಾದ ಪ್ರಿಯಾಂಕ ಖರ್ಗೆ ಪತ್ರ ಬರೆದು, ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌‍ಎಸ್‌‍ ಚಟುವಟಿಕೆಗಳನ್ನು ನಿಷೇಧಿಸುವಂತೆ ಶಿಫಾರಸು ಮಾಡುವ ಅಗತ್ಯವೇನಿತ್ತು ಅದರ ಬೆನ್ನಲ್ಲೇ ಈ ಹಿಂದೆ ಜಗದೀಶ್‌ಶೆಟ್ಟರ್‌ ಅವರ ಸರ್ಕಾರದ ಸುತ್ತೋಲೆಯೊಂದನ್ನು ಬಳಕೆ ಮಾಡಿಕೊಂಡು ಕಾಂಗ್ರೆಸ್‌‍ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಈ ಎಲ್ಲಾ ಪ್ರಯತ್ನಗಳು ವ್ಯವಸ್ಥಿತ ಎಂಬಂತೆ ಕಂಡು ಬರುತ್ತಿವೆ.

ಪ್ರಿಯಾಂಕ್‌ ಖರ್ಗೆ ಅವರ ಪತ್ರ ಆಧರಿಸಿ, ರಾಜ್ಯ ಸರ್ಕಾರ ಸಂಪುಟದಲ್ಲಿ ನಿರ್ಣಯ ಕೈಗೊಂಡು ಆರ್‌ಎಸ್‌‍ಎಸ್‌‍ ಮಾತ್ರವಲ್ಲದೇ ಎಲ್ಲಾ ಖಾಸಗಿ ಸಂಘ ಸಂಸ್ಥೆಗಳ ಚಟುವಟಿಕೆಗಳನ್ನು ಸರ್ಕಾರಿ ಸ್ವತ್ತುಗಳಲ್ಲಿ ನಿರ್ಬಂಧಿಸುವ ಪ್ರಯತ್ನ ಮಾಡಿತ್ತು. ಕಲಬುರಗಿ ಹೈಕೋರ್ಟ್‌ ಪೀಠ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಿರುವುದರಿಂದ ಮುಜುಗರ ಅನುಭವಿಸುವಂತಾಗಿದೆ. ಆದರೆ ಈ ಆದೇಶ ಕಾಂಗ್ರೆಸ್‌‍ ಪಾಲಿಗೆ ವರದಾನ ಎಂದು ಹೇಳಲಾಗುತ್ತದೆ. ಯಾವುದೇ ಚಟುವಟಿಕೆಗಳಾದರೂ ಪೂರ್ವಾನುಮತಿ ಅಗತ್ಯ ಎಂದು ಸರ್ಕಾರದ ಆದೇಶದಲ್ಲಿ ನಮೂದಿಸಲಾಗಿದೆ.

ಹೈಕೋರ್ಟ್‌ ತಡೆಯಾಜ್ಞೆ ಇದ್ದರೂ ಕೂಡ ಈಗಾಗಲೇ ಜಾರಿಯಲ್ಲಿರುವ ಕಾನೂನುಗಳ ಅಡಿಯೇ ಒಲ್ಲದ ಸಂಘಟನೆಗಳ ಚಟುವಟಿಕೆಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಸರ್ಕಾರ ಪೊಲೀಸರ ಮೂಲಕ ನಡೆಸಬಹುದು. ಅನ್ಯ ಧರ್ಮೀಯರು ಸರ್ಕಾರಿ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದಕ್ಕೂ ಹೊಸ ನಿಯಮದ ಪ್ರಕಾರ ಅವಕಾಶ ನೀಡುವಂತಿಲ್ಲ ಎಂಬ ಚರ್ಚೆಗಳು ಹುಟ್ಟಿಕೊಂಡಿದ್ದವು.

ಹೈಕೋರ್ಟ್‌ ತೀರ್ಪಿನ ನೆಪ ಮಾಡಿಕೊಂಡು ಈಗ ತಮಗೆ ಬೇಕಾದವರಿಗೆ ಅವಕಾಶ ನೀಡುವ, ಒಲ್ಲದವರನ್ನು ನಿಗ್ರಹಿಸುವ ಪ್ರಯತ್ನ ಮಾಡಬಹುದು ಎಂಬ ಚರ್ಚೆಗಳಿವೆ.
ಈ ಹಿಂದೆ ಬಿಜೆಪಿ ಅಭಿವೃದ್ಧಿ ವಿಚಾರಗಳನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿಯ ತಂತ್ರಗಾರಿಕೆಗಳನ್ನು ಅನುಸರಿಸುತ್ತಿತ್ತು. ಈಗ ಕಾಂಗ್ರೆಸ್‌‍ ಪಕ್ಷವೂ ಅದೇ ಪ್ರಯತ್ನ ಮಾಡುತ್ತಿದೆ ಎಂಬ ಆರೋಪಗಳಿವೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಂಚಖಾತ್ರಿಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಲು ಹೋದರೆ, ದರ ಏರಿಕೆ ಹಾಗೂ ಹಲವಾರು ಜನವಿರೋಧಿ ನೀತಿಗಳು ಪಕ್ಷವನ್ನು ಮುಜುಗರಕ್ಕೀಡು ಮಾಡಬಹುದು ಎಂಬ ಕಾರಣಕ್ಕೆ ಆರ್‌ಎಸ್‌‍ಎಸ್‌‍ ವಿವಾದವನ್ನು ಮುನ್ನೆಲೆಗೆ ತರುತ್ತಿರುವ ಅನುಮಾನಗಳಿವೆ.

- Advertisement -
RELATED ARTICLES

Latest News