ಬೆಂಗಳೂರು, ಅ.29- ಆನೇಕಲ್ ತಾಲ್ಲೂಕಿನ ಜಿಗಣಿಯ ಸಮೀಪದ ಗ್ರಾಮವೊಂದರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ವೈಫೈ ಯೂಸರ್ ಐಡಿ (ಎಸ್ಎಸ್ಐಡಿ) ಪತ್ತೆಯಾಗುವ ಮೂಲಕ ಆಘಾತ ಮೂಡಿಸಿದೆ.
ಜಿಗಣಿಯ ಬಳಿ ಕಲ್ಲುಬಾಳು ಗ್ರಾಮದಲ್ಲಿ ವೈಫೈ ಸಂಪರ್ಕಗಳನ್ನು ಹುಡುಕಿದಾಗ ಯಾಂತ್ರಿಕವಾಗಿ ಕಂಡು ಬರುವ ಹೆಸರುಗಳಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಹೆಸರಿನ ಸಂಪರ್ಕವೂ ಪತ್ತೆಯಾಗಿದೆ.
ಈ ಯೂಸರ್ ಐಡಿ ಪಾಸ್ವರ್ಡ್ ಸಂರಕ್ಷಿತವಾಗಿದ್ದು, ಸಕ್ರಿಯವಾಗಿತ್ತು. ಇದನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ವೈಫೈ ಸಂಪರ್ಕ ಪಡೆದವರು ಸಹಜವಾಗಿ ತಮಗೆ ಇಷ್ಟವಾಗುವ ಹೆಸರಿನಲ್ಲಿ ಬಳಕೆದಾರರ ಶೀರ್ಷಿಕೆ (ಎಸ್ಎಸ್ಐಡಿ) ಇಟ್ಟುಕೊಳ್ಳುತ್ತಾರೆ. ಆದರೆ ಕಲ್ಲುಬಾಳು ಗ್ರಾಮದಲ್ಲಿ ಇಂಟರ್ನೆಟ್ ಸಂಪರ್ಕ ಪಡೆದ ವ್ಯಕ್ತಿಯೊಬ್ಬರು ತಮ ವೈಫೆೈಗೆ ಪಾಕಿಸ್ತಾನ್ ಜಿಂದಾಬಾದ್ ಎಂಬ ಸವೀಸ್ ಸೆಟ್ ಐಡೆಂಟಿಫೈಯರ್ಶೀರ್ಷಿಕೆ ಇಟ್ಟುಕೊಂಡಿರುವುದು ಅಚ್ಚರಿ ಮೂಡಿಸಿದೆ.
ಸಾಮಾನ್ಯವಾಗಿ ಬಳಕೆದಾರರ ಶೀರ್ಷಿಕೆಯನ್ನು ತಮಗೆ ಇಷ್ಟವಾದಂಥ ಹೆಸರಿನಲ್ಲಿ ನಮೂದಿಸಿಕೊಳ್ಳುವುದು ಸಾಮಾನ್ಯ. ಆದರೆ ಕಲ್ಲುಬಾಳು ಗ್ರಾಮದ ಸರ್ಕಾರಿ ಶಾಲೆಯ ಬಳಿಯ ಸಂಪರ್ಕದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ನಮೂದಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
6-7 ತಿಂಗಳ ಹಿಂದೆ ಜಿಗಣಿ ಪೊಲೀಸ್ ಠಾಣೆಯಲ್ಲಿ ಬಾಂಗ್ಲದೇಶ, ಪಾಕಿಸ್ತಾನದ ಪ್ರಜೆಗಳನ್ನು ಪತ್ತೆ ಹಚ್ಚಿ ಪೊಲೀಸರು ಕ್ರಮ ಕೈಗೊಂಡಿದ್ದರು. ಈಗ ದೇಶವಿರೋಧಿ ನಡವಳಿಕೆ ಎಂಬಂತೆ ವೈಫೈಗೆ ನೆರೆ ರಾಷ್ಟ್ರದ ಪರ ಘೋಷಣೆ ಕೂಗುವ ಶೀರ್ಷಿಕೆಯನ್ನಿಟ್ಟಿರುವುದು ಹಲವು ಅನುಮಾನಗಳನ್ನು ಹುಟ್ಟಿಸಿದೆ. ಇಲ್ಲಿ ಭಯೋತ್ಪಾದಕರು ನೆಲೆಸಿ ತಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ.
ಸ್ಥಳೀಯರ ಮಾಹಿತಿ ಆಧರಿಸಿ ಭಜರಂಗ ದಳದ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ ನಿಖರವಾದ ಸಂಪರ್ಕದ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಬರಿಗೈಯಲ್ಲೇ ತೆರಳಿದ್ದು, ಸಂಜೆಯ ವೇಳೆಗೆ ಭಜರಂಗ ದಳದ ಕಾರ್ಯಕರ್ತ ಗೋವರ್ಧನ್ ಅವರಿಂದ ದೂರು ಪಡೆದು ಎನ್ಸಿಆರ್ ದಾಖಲಿಸಿದ್ದಾರೆ.
ಪಾಕಿಸ್ತಾನ್ ಜಿಂದಾಬಾದ್ ಎಸ್ಎಸ್ಐಡಿ ಹೊಂದಿರುವ ಸಂಪರ್ಕವನ್ನು ಪತ್ತೆ ಹಚ್ಚಲು ತಜ್ಞರ ತಂಡ ನೆರವು ಪಡೆಯುತ್ತಿದ್ದಾರೆ. ಜೊತೆಗೆ ಆ ಭಾಗದಲ್ಲಿ ಇಂಟರ್ನೆಟ್ ಸೇವೆ ಒದಗಿಸುತ್ತಿರುವ ಕಂಪನಿಗಳನ್ನು ಸಂಪರ್ಕಿಸಿದ್ದಾರೆ. ಸಾಮಾನ್ಯವಾಗಿ ಎಸ್ಸ್ಐಡಿಯನ್ನು ರೂಪಿಸಿಕೊಂಡಿರುವ ಬಳಕೆದಾರರು ಪದೇ ಪದೇ ಅದನ್ನು ಬದಲಾಯಿಸುವ ಸಾಧ್ಯತೆಯಿದೆ.
ಪಾಕಿಸ್ತಾನ್ ಜಿಂದಾಬಾದ್ ಎಂಬ ಎಸ್ಎಸ್ಐಡಿಯನ್ನು ಯಾವ ಕಾರಣಕ್ಕೆ ಬಳಕೆ ಮಾಡುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಿ ನಂತರ ಮುಂದಿನ ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
