ಬೆಂಗಳೂರು,ಅ.30-ಮೂರುದಿನಗಳ ಹಿಂದೆಯಷ್ಟೇ ರೋಡ್ ರೇಜ್‌ಗೆ ಬೈಕ್ ಸವಾರನ ಕೊಲೆ ಮಾಡಿದ ಘಟನೆ ಮಾಸುವ ಮುನ್ನವೇ ನಿನ್ನೆ ಬೈಕ್ ತಾಗಿತೆಂಬ ಕಾರಣಕ್ಕೆ ಇಬ್ಬರು ಅಪರಿಚಿತರು ಸಾಫ್ಟ್ ವೇರ್ ಎಂಜಿನಿಯರ್‌ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಾಫ್‌್ಟವೇರ್ ಎಂಜಿನಿಯರ್ ಹುಳಿಮಾವು ನೀವಾಸಿ ಪ್ರತೀಕ್ ಎಂಬುವವರು ಬೈಕ್‌ನಲ್ಲಿ ಕಚೇರಿಗೆ ತೆರಳುತ್ತಿದ್ದರು. ಜೆಪಿನಗರ 6ನೇ ಹಂತದ ಬಳಿ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಇಬ್ಬರಿಗೆ ದಾರಿ ಬಿಡುವಂತೆ ಹಾರ್ನ್ ಮಾಡಿದ್ದಾರೆ.ಅವರು ದಾರಿ ಬಿಡದೆ ಹೋಗುತ್ತಿರುವುದನ್ನು ಗಮನಿಸಿ ಪ್ರತೀಕ್ ಅವರು ಬೈಕ್‌ನ್ನು ನಿಧಾನವಾಗಿ ಅವರ ಪಕ್ಕ ಚಾಲನೆ ಮಾಡಿಕೊಂಡು ಹೋಗುವಾಗ ಬೈಕ್ ಅವರಿಗೆ ತಗುಲಿದೆ.
ಇದೇ ಕಾರಣಕ್ಕೆ ಆ ಇಬ್ಬರು ಪ್ರತೀಕ್ ಅವರ ಬೈಕ್ ಕೀ ಕಿತ್ತುಕೊಂಡು ತಲೆಗೆ ಮನ ಬಂದಂತೆ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಗಂಭೀರ ಗಾಯಗೊಂಡಿದ್ದಾರೆ. ನಂತರ ಪ್ರತೀಕ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಈ ಸಂಬಂಧ ಪ್ರತೀಕ್ ಅವರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಇಬ್ಬರು ಅಪರಿಚಿತ ಯುವಕರ ವಿರುದ್ಧ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇತ್ತೀಚೆಗೆ ನಗರದಲ್ಲಿ ರೋಡ್ ರೇಜ್ ಪ್ರಕರಣದಿಂದಾಗಿ ಹಲವರು ಗಾಯಗೊಂಡರೆ ಮತ್ತೆ ಕೆಲವರ ಪ್ರಾಣವೇ ಹೋಗುತ್ತಿದೆ. ಇದರಿಂದ ವಾಹನ ಸವಾರರು ಒಂದು ರೀತಿ ಆತಂಕದಲ್ಲೇ ವಾಹನ ಚಲಾಯಿಸುವಂತಾಗಿದೆ.
