ಬೆಂಗಳೂರು, ಅ.30- ಮಾಜಿ ಸೈನಿಕರ ಮೇಲೆ ದಬ್ಬಾಳಿಕೆ ನಡೆಸಿರುವ ಆವಲಹಳ್ಳಿ ಪೊಲೀಸರ ವಿರುದ್ಧ ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರಿಗೆ ದೂರು ನೀಡಲಾಗಿದೆ.
ಮಾಜಿ ಸೈನಿಕ ಎಂ.ಆರ್ ರತ್ನನೋಜಿ ರಾವ್ ಅವರ ಮೇಲೆ ವಿನಾಕಾರಣ ಹಲ್ಲೆ ನಡೆಸಿರುವ ಆವಲಹಳ್ಳಿ ಇನ್ಸ್ ಪೆಕ್ಟರ್ ರಾಮಕೃಷ್ಣಾರೆಡ್ಡಿ ಹಾಗೂ ಮತ್ತಿತರ ಪೊಲೀಸರ ವಿರುದ್ಧ ಕೆಪಿಸಿಸಿ ಮಾಜಿ ಸೈನಿಕರ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸ್ವರೂಪರಾಣಿ ಮತ್ತು ಮಾಜಿ ಸೈನಿಕ ಶಿವಾನಂದ ರೆಡ್ಡಿ ಮತ್ತಿತರ ಕೆಲವು ಸಂಘಟನೆಗಳ ಕಾರ್ಯಕರ್ತರ ನೇತೃತ್ವದಲ್ಲಿ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.
ಏನೀದು ಘಟನೆ; ಕಂಪೌಂಡ್ ತೆರವು ವಿಚಾರ ಕುರಿತಂತೆ ಮಂಡೂರಿನಲ್ಲಿ ನೆಲೆಸಿರುವ ಪ್ಯಾರಾಚೂಟ್ ಕಮಾಂಡ್ ಸ್ಪೆಷಲ್ ಫೋರ್ಸ್‌ನಲ್ಲಿ ಹದಿನೆಂಟು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರತ್ನನೋಜಿ ರಾವ್ ಅವರನ್ನು ಠಾಣೆಗೆ ಕರೆಸಿಕೊಂಡು ಅವಹೇಳನಕಾರಿಯಾಗಿ ನಡೆಸಿಕೊಂಡಿದ್ದೇ ಅಲ್ಲದೆ ಅವರ ಮೇಲೆ ರಾಮಕೃಷ್ಣಾರೆಡ್ಡಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರತ್ನನೋಜಿ ರಾವ್ ಅವರಿಗೆ ಸೇರಿದ ಜಮೀನಿನಲ್ಲಿ ಗುಲಾಬಿ ಗಿಡಗಳನ್ನು ನಾಶಪಡಿಸಿದ ಪ್ರಕರಣದಲ್ಲಿ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಪೊಲೀಸರು ಶ್ರೀನಿವಾಸ್ ರಾವ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಮಾಜಿ ಸೈನಿಕನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಹೀಗಾಗಿ ಮಾಜಿ ಸೈನಿಕನ ಮೇಲೆ ದರ್ಪ ತೋರಿಸಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರುದಾರರು ಆಗ್ರಹಿಸಿದ್ದಾರೆ.
