ಬೆಂಗಳೂರು, ಅ.31- ಮೊಂತಾ ಚಂಡಮಾರುತದ ಬಳಿಕ ರಾಜ್ಯದಲ್ಲಿ ಹಿಂಗಾರು ಮಳೆ ದುರ್ಬಲಗೊಂಡಿದ್ದು, ನವೆಂಬರ್ ಮೂರರವರೆಗೆ ರಾಜ್ಯದಲ್ಲಿ ಒಣಹವೆ ಕಂಡುಬರಲಿದೆ. ಹಗಲಿನ ವೇಳೆ ಬಿಸಿಲು ಇರಲಿದ್ದು, ರಾತ್ರಿ ವೇಳೆ ಚಳಿಯ ಪ್ರಮಾಣ ಹೆಚ್ಚಾಗಲಿದೆ.
ನಿನ್ನೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದ್ದು, ಉಳಿದೆಡೆ ಕೆಲವೆಡೆ ಮಾತ್ರ ಮಳೆಯಾಗಿದೆ. ಮೈಸೂರು, ವಿಜಯಪುರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ.
ಹವಾಮಾನ ಮುನ್ಸೂಚನೆ ಪ್ರಕಾರ ಸದ್ಯಕ್ಕೆ ಉತ್ತಮ ಮಳೆಯಾಗುವ ಲಕ್ಷಣಗಳಿಲ್ಲ, ಆದರೆ, ಕೆಲವೆಡೆ ಮಾತ್ರ ಹಗುರದಿಂದ ಸಾಧಾರಣ ಮಳೆ ಮುಂದುವರೆಯಬಹುದು. ಇಂದಿನಿಂದ ರಾಜ್ಯದಲ್ಲಿ ಮಳೆ ಪ್ರಮಾಣ ತಗ್ಗಲಿದ್ದು, ನವೆಂಬರ್ ಮೂರರವರೆಗೂ ರಾಜ್ಯದ ಬಹುತೇಕ ಕಡೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಕರಾವಳಿ ಭಾಗದಲ್ಲಿ ನವೆಂಬರ್ 3ರವರೆಗೂ ಒಣ ಹವೆ ಮುಂದುವರೆಯಲಿದೆ. ಆನಂತರ ನವೆಂಬರ್ 6ರವರೆಗೂ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.
ಮಲೆನಾಡು, ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ನವೆಂಬರ್ ಮೂರರಿಂದ 6ರವರೆಗೆ ಕೆಲವೆಡೆ ಮಳೆಯಾಗುವ ಮುನ್ಸೂಚನೆಗಳಿವೆ. ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ನವೆಂಬರ್ 4ರಿಂದ 6ರವರೆಗೆ ಕೆಲವೆಡೆ ಸಾಧಾರಣ ಮಳೆ ಪ್ರಮಾಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಬಾರಿ ಜಲಾನಯನ ಭಾಗದಲ್ಲಿ ಉತ್ತಮ ಮುಂಗಾರು ಮಳೆ ಬಿದ್ದ ಪರಿಣಾಮ ಅಕ್ಟೋಬರ್ ಅಂತ್ಯದ ವೇಳೆಗೂ ಕೆಆರ್‌ಎಸ್, ಕಬಿನಿ, ಹೇಮಾವತಿ, ಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ, ವಾಣಿವಿಲಾಸ ಸಾಗರ ಜಲಾಶಯಗಳು ಗರಿಷ್ಠ ಪ್ರಮಾಣದಲ್ಲಿ ಭರ್ತಿಯಾಗಿವೆ. ಉಳಿದ ಜಲಾಶಯಗಳಲ್ಲೂ ಉತ್ತಮ ನೀರಿನ ಸಂಗ್ರಹವಿದೆ. ಹಿಂಗಾರು ಮಳೆಯ ಅವಧಿಯಲ್ಲೂ ಇನ್ನೂ ರಾಜ್ಯದ ಪ್ರಮುಖ ಜಲಾಶಯಗಳಿಗೆ ಸಾಕಷ್ಟು ಪ್ರಮಾಣದ ಒಳಹರಿವು ಇರುವುದರಿಂದ ಜಲಾಶಯಗಳಿಂದ ನೀರಾವರಿ ಬೆಳೆಗಳಿಗೆ ನೀರು ಹರಿಸಿದರೂ ಭರ್ತಿಯಾಗಿಯೇ ಇವೆ.

