ಬೆಂಗಳೂರು, ಅ.3-ಶನಿವಾರ ನಡೆದ 70ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ವೀಣೆ ಬಹ್ಮ ಎಂದೇ ಖ್ಯಾತರಾಗಿದ್ದ ಪೆನ್ನ ಓಬಳಯ್ಯ(103) ಅವರು ನಿಧನರಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಮಧುರೈ ಸಮೀಪದ ಸಿಂಪಾಡಿ ಪುರದ ನಿವಾಸಿಯಾಗಿದ್ದ ಅವರು ಇಡೀ ದೇಶಕ್ಕೆ ಸಾಂಪ್ರದಾಯಿಕ ವೀಣೆ ತಯಾರಿಸಿ ಸರಬರಾಜು ಮಾಡುತ್ತಿದ್ದರು. ಅವರಿಂದ ನೂರಾರು ಜನ ವೀಣೆ ತಯಾರಿಸುವುದನ್ನು ಕಲಿತಿದ್ದಾರೆ.
103 ವರ್ಷದ ಪೆನ್ನ ಓಬಳಯ್ಯ ಅವರ ಈ ಸಾಧನೆಯನ್ನು ಗುರುತಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿತ್ತು. ಪ್ರಶಸ್ತಿ ಸ್ವೀಕರಿಸಲು ಬಂದ ಪೆನ್ನ ಓಬಳಯ್ಯ ಅಸ್ವಸ್ಥರಾಗಿದ್ದರು. ಅವರ ಪರವಾಗಿ ಅವರ ಮಕ್ಕಳು ಪ್ರಶಸ್ತಿ ಸ್ವೀಕಾರ ಮಾಡಿದ್ದರು.
ಪ್ರಶಸ್ತಿ ಪಡೆದ ಮರುದಿನವೇ ಅವರು ದೈವಾಧೀನರಾಗಿರುವುದು ದುರಾದೃಷ್ಟಕರ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಸಿಂಪಾಡಿಪುರದ ಹೆಸರನ್ನು ತಮ ವೀಣೆಗಳ ಮೂಲಕ ರಾಷ್ಟ್ರಕ್ಕೆ ಪರಿಚಯಿಸಿದ ಪೆನ್ನ ಓಬಳಯ್ಯ ಅವರ ಸಾಂಸ್ಕೃತಿಕ ಸೇವೆಯನ್ನು ನೆನೆಯುತ್ತಾ ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.
