ಬೆಂಗಳೂರು, ನ.3- ಬಿಹಾರದಲ್ಲಿ ಇಂಡಿಯಾ ಘಟಬಂಧನ್ ಗೆಲ್ಲಿಸಿ ಅಧಿಕಾರಕ್ಕೆ ತಂದರೆ, ನನಗೆ ಎಲ್ಲಾ ಹುದ್ದೆಗಳು ಸಿಕ್ಕಂತೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಸ್ತ್ರ ತ್ಯಾಗ ಮಾಡಿದ್ದಾರೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.
ನಿನ್ನೆ ಬೆಂಗಳೂರಿನಲ್ಲಿ ಬಿಹಾರಿ ಸಮುದಾಯದ ಜೊತೆ ಚರ್ಚೆ ನಡೆಸುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೋಡುವ ಬಯಕೆ ಇದೆ ಎಂದು ಬಿಹಾರದ ಮೂಲದ ಪ್ರಮುಖರು ಅಭಿಲಾಶೆೆ ವ್ಯಕ್ತಪಡಿಸಿದರು.
ಇದಕ್ಕೆ ಅಷ್ಟೇ ವಿನಮ್ರವಾಗಿ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮಹಾ ಘಟಬಂಧನ್‌ನನ್ನು ಗೆಲ್ಲಿಸಿದರೆ ತಮಗೆ ಎಲ್ಲಾ ರೀತಿಯ ಸ್ಥಾನಗಳನ್ನು ಕೊಟ್ಟಂತಾಗುತ್ತದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೇ ತಿಂಗಳ 21ರ ರೊಳಗಾಗಿ ತಮಗೆ ಅಧಿಕಾರ ಬಿಟ್ಟುಕೊಡಬೇಕೆಂದು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್‌ಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿಯ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿವೆ. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ವದ್ದಂತಿಗಳು ವ್ಯಾಪಕವಾಗಿವೆ. ಬೆಂಬಲಿಗರು ನಾನಾ ರೀತಿಯ ವ್ಯಾಖ್ಯಾನಗಳ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ.
ಇತ್ತೀಚೆಗೆ ಲಾಲ್‌ಬಾಗ್‌ನಲ್ಲಿ ಜನ ಸ್ಪಂದನ ಕಾರ್ಯಕ್ರಮ ನಡೆಸಿದ ವೇಳೆಯಲ್ಲೂ ಹಲವಾರು ಮಂದಿ ಸಾರ್ವಜನಿಕರು ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಬೇಕೆಂದು ಒತ್ತಾಯಿಸಿದರು. ಆಗಲೂ ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡಿ, ನನ್ನ ಬಗ್ಗೆ ಚರ್ಚೆ ಬೇಡ ಎಂದು ಹೇಳುವ ಮೂಲಕ ಧ್ವನಿ ಎತ್ತಿದವರನ್ನು ತಣ್ಣಗಾಗಿಸಿದರು.
ಪಕ್ಷದ ಶಾಸಕರಿಗೂ ಅನೇಕ ಬಾರಿ ಅಧಿಕಾರ ಹಂಚಿಕೆಯ ಬಗ್ಗೆ ಮಾತನಾಡಬೇಡಿ ಎಂದು ಹೇಳುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಪಕ್ಷದ ಕಚೇರಿ ತಮಗೆ ದೇವಸ್ಥಾನವಿದ್ದಂತೆ, ಯಾವುದೇ ಅವಕಾಶಗಳಾದರೂ ವರಿಷ್ಠರಿಂದಲೇ ದೊರೆಯಬೇಕು ಎಂಬುದು ಡಿ.ಕೆ.ಶಿವಕುಮಾರ್ ಅವರ ಬಲವಾದ ನಂಬಿಕೆ. ಈ ಕಾರಣಕ್ಕೆ ರಾಜಕೀಯ ಚರ್ಚೆಗಳಿಗೆ ಅವರು ಇಂಬು ನೀಡುತ್ತಿಲ್ಲ.
ಬಿಹಾರಿಗಳ ಸಮುದಾಯದ ಸಭೆಯಲ್ಲೂ ಡಿ.ಕೆ.ಶಿವಕುಮಾರ್ ಶಸ್ತ್ರ ತ್ಯಾಗದ ರೀತಿಯಲ್ಲೇ ಮಾತನಾಡುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಒಳಗೊಳಗೆ ಅಧಿಕಾರ ಹಂಚಿಕೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ರಾಜ್ಯ ರಾಜಕೀಯದಲ್ಲಿದೆ. ಹಾಗಿದ್ದರೂ ತಾವು ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿ ಅಲ್ಲ ಎಂದು ಪರೋಕ್ಷ ಸಂದೇಶದ ಮೂಲಕ ಡಿ.ಕೆ.ಶಿವಕುಮಾರ್ ಹೈಕಮಾಂಡ್‌ಗೆ ಯಾವ ರೀತಿಯ ಮಾಹಿತಿ ರವಾನೆ ಮಾಡುತ್ತಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಕಾಂಗ್ರೆಸ್‌ನ ಒಳ ವಲಯದಲ್ಲಿ ಹೇಳುತ್ತಿರುವಂತೆ ನವೆಂಬರ್ ಕ್ರಾಂತಿ ನಡೆಯಲಿದೆಯೇ ಅಥವಾ ಎಲ್ಲವೂ ಬಾಯಿ ಮಾತಿನ ವದ್ದಂತಿಗಳೇ ಎಂಬ ಅನುಮಾನ ಕಾಡಲಾರಂಭಿಸಿದೆ.
ಇತ್ತ ವಿಜಯನಗರದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸಿದ್ದರಾಮಯ್ಯ ಟಗರು ಇದ್ದಂತೆ. ಅವರಿಗೆ ಠಕ್ಕರ್ ಕೊಡಲು ಯಾರ ಕೈಯಲ್ಲೂ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರನ್ನು ಕೆಣಕಿದ್ದಾರೆ.
