ಬೆಂಗಳೂರು,ನ.4- ಕಬ್ಬು ಬೆಳೆಗೆ ರಾಜ್ಯ ಸರ್ಕಾರ ಬೆಲೆ ನಿಗದಿಪಡಿಸಬೇಕೆಂದು ಕಳೆದ ಐದು ದಿನಗಳಿಂದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ರೈತರು ನಡೆಸುತ್ತಿದ್ದ ಹೋರಾಟ ವಿಕೋಪಕ್ಕೆ ತಿರುಗಿದ್ದು, ಕೆಲವು ಕಡೆ ಕಲ್ಲು ತೂರಾಟ ಹಾಗೂ ಹೆದ್ದಾರಿ ಬಂದ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.
ದರ ನಿಗದಿ ಹಾಗೂ ಬಾಕಿ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಬಾಗಲಕೋಟೆ ಜಿಲ್ಲೆಯ ಮುದೋಳ ಮತ್ತು ಜಮಖಂಡಿ ತಾಲ್ಲೂಕಿನ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಮುಂದೆ ನಡೆಸುತ್ತಿದ್ದ ಪ್ರತಿಭಟನೆ ಏಕಾಏಕಿ ಹಿಂಸಾರೂಪಕ್ಕೆ ತಿರುಗಿದೆ.
ಈವರೆಗೂ ಸಹನೆಯಿಂದಲೇ ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ರೈತರು ಇಂದು ಏಕಾಏಕಿ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಿಂತಿದ್ದ ವಾಹನಗಳು ಮತ್ತು ಕಚೇರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಸರ್ಕಾರದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಳೆದ 5 ದಿನಗಳಿಂದ ನಿರಂತರ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಬ್ಬು ಬೆಳೆಗಾರರು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದಾರೆ. ಕಳೆದ 5 ದಿನಗಳಿಂದ ರೈತರು ಬಿರುಸಿನ ಗಾಳಿಯಲ್ಲೂ, ಚಳಿಯಲ್ಲೂ ಅಹೋರಾತ್ರಿ ಕುಳಿತು ಹೋರಾಟ ನಡೆಸುತ್ತಿದ್ದಾರೆ. ಕೆಲವರು ಸ್ಥಳದಲ್ಲೇ ಊಟ, ನಿದ್ದೆ ಮಾಡುತ್ತಾ ಹೋರಾಟ ಮುಂದುವರೆಸಿದ್ದಾರೆ.
ಹಸಿರು ಬಾವುಟಗಳನ್ನು ಹಿಡಿದಿರುವ ರೈತರು, ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಸರ್ಕಾರ ರೈತರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ.
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ದಿನ ಕಳೆದಂತೆ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿಭಟನಾ ಸ್ಥಳದಲ್ಲಿಯೇ ರೈತರು ತಾತ್ಕಾಲಿಕ ಅಡುಗೆ ಮನೆಗಳನ್ನು ಸ್ಥಾಪಿಸಿದ್ದು, ಪ್ರತಿಭಟನಾಕಾರರಿಗೆ ಆಹಾರ ವಿತರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ಹಲವಾರು ರೈತ ಸಂಘಟನೆಗಳು ಆಯೋಜಿಸಿರುವ ಈ ಪ್ರತಿಭಟನೆಯಲ್ಲಿ ಬೆಳಗಾವಿ ಮತ್ತು ಹತ್ತಿರದ ಜಿಲ್ಲೆಗಳಾದ್ಯಂತ ರೈತರು ಬೃಹತ್ ಪ್ರಮಾಣದಲ್ಲಿ ಭಾಗವಹಿಸಿದ್ದಾರೆ.ಮೂಡಲಗಿ, ರಾಯಬಾಗ್ ಮತ್ತು ಗೋಕಾಕ್ ವಕೀಲರ ಸಂಘದ ವಕೀಲರು, ವಿವಿಧ ಭಾಗಗಳ ಮಾಜಿ ಸೈನಿಕರು, ವಿವಿಧ ಸಂಸ್ಥೆಗಳ ಮಠಾಧೀಶರು ಕೂಡ ಪ್ರತಿಭಟನಾಕಾರರನ್ನು ಭೇಟಿ ಮಾಡಿ ತಮ ಬೆಂಬಲವನ್ನು ಘೋಷಿಸಿದ್ದಾರೆ.
ನೆರೆಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಟನ್‌ಗೆ 3,600 ರೂ. ಪಾವತಿಸುತ್ತಿದ್ದರೂ, ಕರ್ನಾಟಕ ಸರ್ಕಾರ ಮಾತ್ರ ನ್ಯಾಯಯುತ ಬೆಲೆ ನಿಗದಿಪಡಿಸುವಲ್ಲಿ ವಿಫಲವಾಗಿದೆ ಎಂದು ರೈತರು ಆರೋಪಿಸಿದ್ದಾರೆ.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಮೊಹಮದ್ ರೋಷನ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಅವರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಜಿಲ್ಲಾಡಳಿತವು ಕಾರ್ಖಾನೆ ಮಾಲೀಕರೊಂದಿಗೆ ನಡೆಸಿದ ಮಾತುಕತೆಗಳು ತೃಪ್ತಿದಾಯಕ ನಿರ್ಧಾರವನ್ನು ಕೈಗೊಂಡಿದ್ದರೆ, ನಾವು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ಕುರಿತು ಚಿಂತನೆ ನಡೆಸುತ್ತಿದ್ದೆವು. ಆದರೆ, ಅದು ಸಾಧ್ಯವಾಗಿಲ್ಲ. ಹಗಲು ರಾತ್ರಿ ಪ್ರತಿಭಟನೆ ಮುಂದುವರೆಸುತ್ತಿದ್ದೇವೆ ಎಂದು ರೈತ ಮುಖಂಡರು ಹೇಳಿದ್ದಾರೆ.
ಮತ್ತೊಂದೆಡೆ ಬೆಳಗಾವಿ ಜಿಲ್ಲೆ, ಹುಕ್ಕೇರಿ, ಅಥಣಿ, ಮೂಡಲಗಿ, ರಾಯಭಾಗ, ಬೈಲಹೊಂಗಲ ಸೇರಿದಂತೆ ಮತ್ತಿತರ ಕಡೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿತ್ತು. ಪೊಲೀಸರು ಎಷ್ಟೇ ಹರಸಾಹಸಪಟ್ಟು ರೈತರನ್ನು ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ರೈತರು ತಮ ಪಟ್ಟು ಸಡಿಸಲಿಲ್ಲ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ಧಾಪೂರ ಗ್ರಾಮದಲ್ಲಿನ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಯಲ್ಲಿ ಮಾಲೀಕರಿಗೆ ಸೇರಿದ ಬೊಲೆರೋ ವಾಹನ ಸೇರಿ ಇತರೇ ವಾಹನಗಳ ಗಾಜು ಪುಡಿ ಪುಡಿಯಾಗಿವೆ.ಸ್ಥಳಕ್ಕೆ ಜಮಖಂಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಕಾರ್ಖಾನೆ ಆವರಣದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಪರಿಸ್ಥಿತಿ ಹತೋಟಿಗೆ ಬಂದಿದ್ದು, ರೈತರು ಹಾಗೂ ಕಾರ್ಖಾನೆ ಮಾಲೀಕರ ಜೊತೆ ಮಾತುಕತೆ ಮುಂದುವರೆದಿದೆ.
ಇತ್ತ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್ ಬಳಿ ಸಾವಿರಾರು ರೈತರು ಕಳೆದ 5 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟ ಜಿಲ್ಲೆಯಾದ್ಯಂತ ವ್ಯಾಪಿಸಿದ್ದು, ರೈತರ ಹೋರಾಟಕ್ಕೆ ಸರಕಾರ ಸ್ಪಂದಿಸದ ಕಾರಣ ಚಿಕ್ಕೋಡಿ ಪಟ್ಟಣ ಸೇರಿ ವಿವಿಧೆಡೆ ಹೆದ್ದಾರಿ ಬಂದ್ ಮಾಡಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.
ಹುಕ್ಕೇರಿ ಜಿಲ್ಲೆಯ ಹಲವು ಕಡೆ ಬಂದ್‌ಗೆ ಕರೆ ಕೊಡಲಾಗಿತ್ತು. ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ಕಳೆದ ಒಂದು ವಾರದಿಂದ ನಡೆದಿರುವ ಪ್ರತಿಭಟನೆ ಜಿಲ್ಲಾಧಿಕಾರಿ ಮೊಹಮದ್ ರೋಷನ್ ಮಧ್ಯಸ್ಥಿಕೆ ನಂತರವೂ ನಿಲ್ಲದೇ ಹೆದ್ದಾರಿ ಬಂದ್‌ವರೆಗೂ ತಲುಪಿದೆ.
ಟನ್ ಕಬ್ಬಿಗೆ ಕನಿಷ್ಠ 3500 ಬೆಲೆ ಕೊಡಬೇಕು, ಕಾರ್ಖಾನೆಗಳೇ ಸ್ವತಃ ಕಬ್ಬು ಕಟಾವು ಮಾಡಿಕೊಳ್ಳಬೇಕು, ಡಿಜಿಟಲ್ ತೂಕದಲ್ಲಿ ಮೋಸ ಆಗಬಾರದು, ಕಬ್ಬು ನುರಿಸಿದ ನಂತರಬರುವ ಉಪ ಉತ್ಪನ್ನಗಳಲ್ಲೂ ರೈತರಿಗೆ ಸೂಕ್ತ ಹಣ ಪಾವತಿ ಆಗಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯುತ್ತಲೇ ಬಂದಿದೆ.
ಜಿಲ್ಲಾಡಳಿತ ತನ್ನ ವ್ಯಾಪ್ತಿಯಲ್ಲಿ ಬೆಲೆ ಕೊಡಿಡಲು ಸಾಕಷ್ಟು ಪ್ರಯತ್ನಿಸಿ ಕೈ ಚೆಲ್ಲಿದೆ. ಕಬ್ಬಿಗೆ ಬೆಲೆ ಕೊಡಿಸಲು ಕಾರ್ಖಾನೆಗಳಿ ಮುಂದಾಗದ್ದರಿಂದ ಇಂದು ಹುಕ್ಕೇರಿ ಪಟ್ಟಣ ಬಂದ್ ಕರೆ ಕೊಡಲಾಗಿದ್ದು, ನಗರ ಸಂಪೂರ್ಣ ಸ್ತಬ್ದವಾಗಿದೆ.ಶಾಲಾಕಾಲೇಜುಗಳಿಗೆ ರಜೆ: ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ಕೆಲವು ಕಡೆ ಹೆದ್ದಾರಿ ಬಂದ್ ಆಗಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬುಧವಾರ ಪರಿಸ್ಥಿತಿ ನೋಡಿಕೊಂಡು ತರಗತಿಗಳನ್ನು ಪ್ರಾರಂಭಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.
