ಬೆಂಗಳೂರು,ನ.4- ಸಾರ್ವಜನಿಕರಿಗೆ 0% ಬಡ್ಡಿ ಚಿನ್ನದ ಸಾಲ ನೀಡುವುದಾಗಿ ಸುಳ್ಳು ಜಾಹೀರಾತು ನೀಡಿ ವಂಚಿಸಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 1.80 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿದ್ಯಾರಣ್ಯಪುರದಲ್ಲಿರುವ ಚಿನ್ನದ ಅಂಗಡಿಯೊಂದನ್ನು ತೆರೆದಿರುವ ಆರೋಪಿ ಮತ್ತೊಬ್ಬನೊಂದಿಗೆ ಸೇರಿಕೊಂಡು 0% ಬಡ್ಡಿ ಚಿನ್ನದ ಸಾಲ ನೀಡುವುದಾಗಿ ಸುಳ್ಳು ಜಾಹೀರಾತು ನೀಡಿ ಸಾರ್ವಜನಿ ಕರನ್ನು ಆಕರ್ಷಿಸಿ ಅವರುಗಳಿಂದ ಚಿನ್ನ ಅಡಮಾನವಿಟ್ಟಿಸಿಕೊಂಡು ನಂತರ ಆ ಆಭರಣಗಳನ್ನು ಕರಗಿಸುತ್ತಿದ್ದುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಈತ ಆಮಿಷ ಒಡ್ಡುತ್ತಿದ್ದ ಜಾಹಿರಾತು ಪ್ರಚಾರವನ್ನು ನಂಬಿದ ಅನೇಕರು ತಮ ಚಿನ್ನವನ್ನು ಅಡಮಾನವಿಡಲು ಮುಂದೆ ಬಂದು ಸಾಲ ಪಡೆದರು. ಆದರೆ ಅವರಿಗೆ ಚಿನ್ನದ ನಿಜವಾದ ಮೌಲ್ಯದ ಕೇವಲ ಶೇ.50-60 ರಷ್ಟು ಮೊತ್ತ ಮಾತ್ರ ಸಾಲವಾಗಿ ನೀಡಲಾಗುತ್ತಿತ್ತು ಮತ್ತು ಕನಿಷ್ಠ 11 ತಿಂಗಳುಗಳ ಅವಧಿಯ ವರೆಗೆ ಚಿನ್ನವನ್ನು ಬಿಡಿಸಿಕೊಳ್ಳಬಾರದೆಂದು ಷರತ್‌ನ್ನು ಆರೋಪಿ ವಿಧಿಸಿದ್ದನು.
ತದ ನಂತರದಲ್ಲಿಆರೋಪಿ ಅಡಮಾನವಿಟ್ಟುಕೊಂಡಿದ್ದ ಚಿನ್ನವನ್ನು ಅಕ್ರಮವಾಗಿ ಎಚ್‌ಆರ್‌ಬಿಆರ್ ಲೇಔಟ್‌ನ ಜ್ಯೂವೆಲರಿ ಅಂಗಡಿಯೊಂದಕ್ಕೆ ಮಾರಾಟ ಮಾಡಿ, ಸುಮಾರು ಶೇ.40ರಿಂದ 50 ರಷ್ಟು ಲಾಭ ಗಳಿಸುತ್ತಿದ್ದನು. ಒಟ್ಟಾರೆಯಾಗಿ ಈ ಯೋಜನೆಯಡಿ ಸುಮಾರು 4 ಕೆ.ಜಿ. ಚಿನ್ನ ವಂಚಿಸಲ್ಪಟ್ಟಿದೆ. 11 ತಿಂಗಳ ಬಳಿಕ ಆರೋಪಿಯು ಅಂಗಡಿಯನ್ನು ಮುಚ್ಚಿ ಪರಾರಿಯಾಗಿದ್ದು, ಜನರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.
ಚಿನ್ನ ಅಡವಿಟ್ಟವರು ಮೋಸ ಹೋಗಿರುವುದು ಅರಿತು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಯ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ಖಚಿತ ಮಾಹಿತಿ ಮೇರೆಗೆ ಪೀಣ್ಯಾದಲ್ಲಿ ಆತನ ಮನೆಯಿಂದ ವಶಕ್ಕೆ ಪಡೆದಿದ್ದಾರೆ.
ನಂತರ ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿ ಎಚ್‌ಆರ್‌ಬಿಆರ್ ಲೇಔಟ್‌ನ ಜ್ಯೂವೆಲರಿ ಅಂಗಡಿಯೊಂದರಲ್ಲಿ ಅಡಮಾನವಿಟ್ಟಿದ್ದ 1 ಕೆ.ಜಿ 478 ಗ್ರಾಂ ಚಿನ್ನಾಭರಣ ಮತ್ತು 5 ಕೆ.ಜಿ ಬೆಳ್ಳಿಯ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ ಸುಮಾರು ಒಂದು ಕೋಟಿ ಎಂಬತ್ತು ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ತನಿಖೆ ಮುಂದುವರೆಸಿದ ಪೊಲೀಸರು ಈತನಿಗೆ ಸಹಕರಿಸಿದ ಮತ್ತೊಬ್ಬನನ್ನು ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಆರೋಪಿ ಮಂಗಳೂರು ಹಾಗೂ ಕೇರಳ ರಾಜ್ಯದಲ್ಲಿಯೂ ಇದೇ ರೀತಿಯ ವಂಚನೆ ನಡೆಸಿರುವ ಬಗ್ಗೆ ಮಾಹಿತಿ ದೊರೆತ್ತಿದ್ದು ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸಾರ್ವಜನಿಕ ಮನವಿ:ಚಿನ್ನವನ್ನು ಅಡಮಾನವಿಡುವ ಮೊದಲು ಸಂಸ್ಥೆಯ ಪರವಾನಗಿ ಮತ್ತು ನೈಜತೆಯನ್ನು ಸಾರ್ವಜನಿಕರು ಪರಿಶೀಲಿಸಬೇಕು. 0% ಬಡ್ಡಿ ಎಂಬಂತಹ ಅಸಾಧ್ಯ ಯೋಜನೆಗಳಿಗೆ ಬಲಿಯಾಗಬೇಡಿ. ಅನುಮಾನಾಸ್ಪದ ಯೋಜನೆಗಳು ಕಂಡುಬಂದರೆ ಸಮೀಪದ ಪೊಲೀಸ್ ಠಾಣೆ ಅಥವಾ ಸಿಸಿಬಿ ವಿಭಾಗಕ್ಕೆ ತಕ್ಷಣ ಮಾಹಿತಿ ನೀಡಿ ಎಂದು ಸಲಹೆ ನೀಡಿದ್ದಾರೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಅಪರಾಧ ವಿಭಾಗದ ಸಂಯುಕ್ತ ಪೊಲೀಸ್ ಆಯುಕ್ತ ಅಜಯ್ ಹಿಲೋರಿ ಮತ್ತು ಉಪ ಪೊಲೀಸ್ ಆಯುಕ್ತರಾಜಾ ಇಮಾಮ್ ಕಾಸಿಂ ಅವರ ಮಾರ್ಗದರ್ಶನದಲ್ಲಿ, ಎಸಿಪಿ ನಾಗರಾಜ್ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
