ಬೆಂಗಳೂರು. ನ.4- ಕಬ್ಬು ಬೆಳೆಗಾರರ ಸಮಸ್ಯೆ ಬಗೆ ಹರಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ಸಲಹೆ ನೀಡಲಾಗಿದೆ. ಪರಿಸ್ಥಿತಿ ಬಿಗಡಾಯಿಸಿದರೆ ಪೊಲೀಸ್ ಇಲಾಖೆಗೆ ಸವಾಲಿನ ಪರಿಸ್ಥಿತಿ ಎದುರಾಗಬಹುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಶಿವಾನಂದ ಪಾಟೀಲ್ ಅವರ ಜೊತೆ ನಿನ್ನೆ ಕೂಡ ತಾವು ಚರ್ಚೆ ನಡೆಸಿದ್ದು, ಆದಷ್ಟು ಶೀಘ್ರ ಸಮಸ್ಯೆ ಬಗೆ ಹರಸಿ ಎಂದು ಸಲಹೆ ನೀಡಿದ್ದೇನೆ. ಕಬ್ಬು ಬೆಲೆ ನಿಯಂತ್ರಣ ಅಥವಾ ದರ ನಿಗದಿಗೆ ಸಂಬಂಧಪಟ್ಟಂತೆ ಶೀಘ್ರ ತೀರ್ಮಾನ ತೆಗೆದುಕೊಳ್ಳಬೇಕು. ರೈತರ ಪ್ರತಿಭಟನೆ ಮುಂದುವರೆದರೆ ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಕಷ್ಟವಾಗುತ್ತದೆ ಎಂದಿದ್ದಾರೆ.
ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಸೇರಿ ಸಕ್ಕರೆ ಕಾರ್ಖಾನೆಗಳ ಬಗ್ಗೆ ಮಾತುಕತೆ ನಡೆಸಿ ಸಮಸ್ಯೆ ಬಗೆ ಹರಿಸುವುದಾಗಿ ಸಚಿವ ಶಿವಾನಂದ ಪಾಟೀಲ್ ಭರವಸೆ ನೀಡಿದ್ದಾರೆ. ನಿನ್ನೆ ಕಬ್ಬು ಬೆಳೆಗಾರರೊಬ್ಬರು ವಿಷ ಕುಡಿಯಲು ಪ್ರಯತ್ನಿಸಿದರು. ಪೊಲೀಸರು ತಕ್ಷಣವೇ ಮಧ್ಯ ಪ್ರವೇಶಿಸಿ ರಕ್ಷಿಸಿದ್ದಾರೆ. ಮುಂದೆೆ ಈ ರೀತಿ ಘಟನೆಗಳಾಗುವುದು ಸವಾಲಿನ ಪರಿಸ್ಥಿತಿಯನ್ನು ನಿರ್ಮಿಸಲಿದೆ ಎಂದರು.
ಬಿಜೆಪಿಯವರು ಇಂತಹ ಪರಿಸ್ಥಿತಿಗಾಗಿಯೇ ಕಾಯುತ್ತಿರುತ್ತಾರೆ. ಹೀಗಾಗಿ ಅವರು ರಾಜಕಾರಣ ಮಾಡುವುದು ಸಹಜ. ಆದರೆ ಅವರು ಅಧಿಕಾರದಲ್ಲಿದ್ದಾಗ ಯಾವ ಪರಿಸ್ಥಿತಿ ಇತ್ತು ಎಂಬುದನ್ನು ಸರಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ಮನೆಗೆಲಸದವರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ತಮ ಗಮನಕ್ಕೆ ಬಂದಿದೆ. ನಿಖರವಾದ ವರದಿ ನೀಡುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ಬಳಿಕ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ಸೇರಿದಂತೆ ಯಾವುದೇ ಬೆಳವಣಿಗೆಗಳಾದರೂ ಹೈಕಮಾಂಡ್ ತೀರ್ಮಾನವೇ ಅಂತಿಮ. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಗಳನ್ನು ನಾವು ಅನುಸರಿಸುತ್ತೇವೆ. ಒಂದು ವೇಳೆ ಧಿಕ್ಕರಿಸಿದರೆ ಅಂಥವರ ವಿರುದ್ಧ ಕ್ರಮಗಳಾದ ಉದಾಹರಣೆಗಳಿವೆ ಎಂದರು.
ಕಾಂಗ್ರೆಸ್ ಹೈಕಮಾಂಡ್ ಸಂಸ್ಕೃತಿಯ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಿದ್ದರು. ಈಗ ಅವರಲ್ಲೂ ಕೂಡ ಹೈಕಮಾಂಡ್ ಸಂಸ್ಕೃತಿ ತೀವ್ರವಾಗಿದೆ. ಹೈ ಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಸಮರ್ಥನೀಯ ಎಂದರು.
ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಮನೆಯಲ್ಲಿ ಮುಖ್ಯಮಂತ್ರಿ ಅವರು ಊಟಕ್ಕೆ ಸೇರುವುದರಲ್ಲಿ ವಿಶೇಷವೇನಿಲ್ಲ. ಮುಖ್ಯಮಂತ್ರಿ ಅವರು ತುಮಕೂರಿಗೆ ಬಂದಾಗ ರಾಜಣ್ಣ ಅವರ ಮನೆಯಲ್ಲಿ ಊಟ ಮಾಡುವುದು ಮೊದಲಿನಿಂದಲೂ ಸಂಪ್ರದಾಯವಾಗಿದೆ. ನಾವು ಕೂಡ ಊಟಕ್ಕೆ ಹೋಗುತ್ತೇವೆ ಎಂದರು.
ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಯಾರು ದೆಹಲಿಗೆ ಹೋಗುತ್ತಾರೋ ಗೊತ್ತಿಲ್ಲ. ನಾನಂತೂ ದೆಹಲಿಗೆ ಹೋಗುವುದಿಲ್ಲ ಎಂದರು.ಬೇಡಿಕೆಗಳನ್ನು ಆಧರಿಸಿ ಎಲ್ಲಾ ಇಲಾಖೆಗಳಲ್ಲೂ ಸಾಮೂಹಿಕ ವರ್ಗಾವಣೆಯಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಮಾತ್ರ ವರ್ಗಾವಣೆಗೆ ಕಾಲಮಿತಿಯಿಲ್ಲ. ಯಾವಾಗ ಅಗತ್ಯವಿದೆಯೋ ಆಗ ವರ್ಗಾವಣೆಗಳಾಗುತ್ತಿರುತ್ತವೆ. ವರ್ಷದ 365 ದಿನವೂ ಅಧಿಕಾರಿಗಳ ಬದಲಾವಣೆ ಸಹಜ. ಅಧಿಕಾರಿಗಳ ವರ್ಗಾವಣೆಯನ್ನು ಸಚಿವರ ಬದಲಾವಣೆಗೆ ಮುನ್ಸೂಚನೆ ಎಂದು ಪರಿಗಣಿಸಲಾಗುವುದಿಲ್ಲ ಎಂದರು.
ಸಂಪುಟ ಪುನರ್‌ರಚನೆ ಮಾಡುವುದಾಗಿ ಮುಖ್ಯಮಂತ್ರಿ ಹೇಳುತ್ತಿರುವುದರಿಂದ ಈ ವಿಚಾರವಾಗಿ ನಾವು ಹೇಳಿಕೆ ನೀಡುವುದು ಸರಿಯಲ್ಲ. ಹೊಸಬರಿಗೆ ಅವಕಾಶ ನೀಡುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು.
ನಾಯಕತ್ವ ಬದಲಾವಣೆಯಾದರೆ ಪರಮೇಶ್ವರ್ ಅವರಿಗೆ ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆಗೆ, ಪ್ರತಿಕ್ರಿಯಿಸಿದ ಅವರು ಮುಖ್ಯಮಂತ್ರಿ, ಮಿನಿಮಂತ್ರಿಗೆ ಸಂಬಂಧಪಟ್ಟ ವಿಚಾರಗಳನ್ನು ಬಿಟ್ಟು ಬೇರೆ ಪ್ರಶ್ನೆಗಳಿದ್ದರೆ ಕೇಳಿ ಎಂದು ಮಾಧ್ಯಮಗಳಿಗೆ ಸೂಚನೆ ನೀಡಿದರು.
ಆರ್‌ಎಸ್‌ಎಸ್ ಕುರಿತು ಸಚಿವ ಪ್ರಿಯಾಂಕ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇಲಾಖೆಯ ಕುರಿತು ಚರ್ಚಿಸಲು ಭೇಟಿ ಮಾಡಿದ್ದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
