Wednesday, November 5, 2025
Homeರಾಜ್ಯಸರ್ಕಾರ ಸ್ವತ್ತುಗಳಲ್ಲಿ ಸಂಘ ಚಟುವಟಿಕೆಗೆ ನಿರ್ಬಂಧ : ಮೇಲ್ಮನವಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಸರ್ಕಾರ ಸ್ವತ್ತುಗಳಲ್ಲಿ ಸಂಘ ಚಟುವಟಿಕೆಗೆ ನಿರ್ಬಂಧ : ಮೇಲ್ಮನವಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

Restrictions on association activities in government properties: High Court reserves verdict on appeal

ಬೆಂಗಳೂರು. ನ.4- ಸರ್ಕಾರ ಸ್ವತ್ತುಗಳಲ್ಲಿ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಿರುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆಯ ಕುರಿತು ಸಲ್ಲಿಸಲಾಗಿರುವ ಮೇಲನವಿಯ ತೀರ್ಪನ್ನು ಕಾಯ್ದಿರಿಸಲಾಗಿದೆ. ಹೈಕೋರ್ಟ್‌ನ ಧಾರವಾಡದ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಎಸ್‌‍.ಜಿ. ಪಂಡಿತ್‌ ಮತ್ತು ಕೆ.ಬಿ.ಗೀತಾ ಅವರನ್ನೊಳಗೊಂಡ ವಿಭಾಗೀಯ ಪೀಠ ರಾಜ್ಯ ಸರ್ಕಾರದ ಮೇಲನವಿಯನ್ನು ವಿಚಾರಣೆ ನಡೆಸಿದೆ.ಸರ್ಕಾರದ ಪರವಾಗಿ ಅಡ್ವೋಕೆಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿದರೆ, ಅರ್ಜಿ ದಾರರಾದ ಪುನರ್‌ಚೇತನ ಸೇವಾ ಸಂಸ್ಥೆಯ ಪರವಾಗಿ ಹಿರಿಯ ವಕೀಲ ಅಶೋಕ್‌ ಹಾರ್ನಳ್ಳಿ ವಾದ ಮಂಡಿಸಿದ್ದಾರೆ.

ಸರ್ಕಾರದ ಪರವಾಗಿ ವಾದಿಸಿರುವ ಶಶಿಕಿರಣ್‌ ಶೆಟ್ಟಿ ಅವರು ಸರ್ಕಾರದ ಆಸ್ತಿಗಳನ್ನು ಅತಿಕ್ರಮಿಸುವುದು ಬಿಎನ್‌ಎಸ್‌‍ ಕಾಯ್ದೆ ಪ್ರಕಾರ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಸಮರ್ಥನೀಯ ಎಂದರು.

- Advertisement -

ಇದಕ್ಕೆ ಮರು ಪ್ರಶ್ನೆ ಹಾಕಿರುವ ಹೈಕೋರ್ಟ್‌ ಪೀಠ ಹತ್ತು ಜನ ಒಂದೆಡೆ ಸೇರುವುದು ಕಾನೂನು ಬಾಹಿರ ಎಂದು ಆದೇಶದಲ್ಲಿದೆ. ಜನ ಜೊತೆಯಲ್ಲಿ ನಡೆಯಲು ಅನುಮತಿ ಪಡೆಯಬೇಕೇ? ಈ ಆದೇಶದ ಮೂಲಕ ಯಾವುದನ್ನೂ ನಿರ್ಬಂಧಿಸಲು ಯತ್ನಿಸಲಾಗುತ್ತಿದೆ ಎಂದು ವಿವರಿಸುವಂತೆ ಸೂಚಿಸಿದರು.

ರ್ಯಾಲಿ, ಸಮಾವೇಶಕ್ಕೆ ಜನ ಸೇರುವ ಮುನ್ನ ಪೂರ್ವಾನುಮತಿ ಪಡೆಯಬೇಕೆಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಪಾರ್ಕ್‌ನಲ್ಲಿ ನಡೆಯಲು, ಮೈದಾನದಲ್ಲಿ ಆಟವಾಡಲು ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ವಿವರಿಸಿದ್ದಾರೆ.

ಹೈಕೋರ್ಟ್‌ನ ಮಧ್ಯಂತರ ಆದೇಶ ತೆರವು ಮಾಡಬೇಕು. ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಸರ್ಕಾರವು ತನ್ನ ಆದೇಶ ರಕ್ಷಣೆಗೆ ಮುಂದಾಗಿದೆ. ಏಕಸದಸ್ಯ ಪೀಠವು ಸರ್ಕಾರದ ಆದೇಶಕ್ಕೆ ತಡೆ ನೀಡುವ ಬದಲು ಮಧ್ಯಂತರ ಪರಿಹಾರ ನೀಡಬಹುದಿತ್ತು ಎಂದು ಹೇಳಿದ್ದಾರೆ. ಸರ್ಕಾರದ ಆಸ್ತಿಯನ್ನು ಖಾಸಗಿ ಸಂಸ್ಥೆಗಳು ಬಳಕೆ ಮಾಡಬಾರದು ಎಂಬುದು ಸರ್ಕಾರದ ವಾದವೇ? ಎಂದು ಪೀಠ ಪ್ರಶ್ನಿಸಿದಾಗ, ಅನುಮತಿ ಪಡೆದು ಚಟುವಟಿಕೆ ಮಾಡಬಹುದು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಶಶಿಕಿರಣ್‌ ಶೆಟ್ಟಿ ಹೇಳಿದರು.

ಹತ್ತಕ್ಕೂ ಹೆಚ್ಚು ಜನ ಸೇರಿದರೆ ಅದು ನಿಮ ಪ್ರಕಾರ ರ್ಯಾಲಿ ಅಥವಾ ಸಮಾವೇಶವೇ? ಹತ್ತಕ್ಕೂ ಹೆಚ್ಚು ಜನರು ಪಾರ್ಕ್‌ನಲ್ಲಿ ಸೇರಿದರೆ ಏನು? ಈ ವಿಚಾರದಲ್ಲಿ ಏಕಸದಸ್ಯ ಪೀಠದ ಮುಂದೆ ಮಧ್ಯಂತರ ಆದೇಶದಲ್ಲಿ ಸ್ಪಷ್ಟನೆ ಕೇಳಬಹುದಿತ್ತಲ್ಲ ಎಂದು ಪೀಠ ಹೇಳಿದಾಗ ಈ ಬಗ್ಗೆಯೇ ಮೇಲನವಿ ಸಲ್ಲಿಕೆ ಮಾಡಲಾಗಿದೆ. ಪೀಠವು ಪಾರ್ಕ್‌ಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಬಹುದು.

ಜನರು ಪಾರ್ಕ್‌ನಲ್ಲಿ ಓಡಾಡುವುದರ ಬಗ್ಗೆ ನಮ ಆಕ್ಷೇಪ ಇಲ್ಲ. ಅರ್ಜಿದಾರರು ಪಾರ್ಕ್‌ನಲ್ಲಿ ಓಡಾಡಬೇಕು ಎಂದು ಕೇಳುತ್ತಿಲ್ಲ. ಬದಲಾಗಿ ಪಾರ್ಕ್‌ನಲ್ಲಿ ಬೋಧನೆ ಮಾಡಬೇಕು ಎಂದು ಕೇಳುತ್ತಿದ್ದಾರೆ. ಅರ್ಜಿದಾರರ ಕೋರಿಕೆ ಏನು ಎಂದು ನ್ಯಾಯಾಲಯ ಪರಿಶೀಲಿಸಬೇಕು. ವಾಯು ವಿಹಾರ ಮತ್ತಿತರ ಚಟುವಟಿಕೆಗಳಿಗಾಗಿಯೇ ಪಾರ್ಕ್‌ ನಿರ್ಮಿಸಲಾಗಿದೆ. ಅಲ್ಲಿ ವಿಚಾರ ಸಂಕಿರಣ ನಡೆಸಲಾಗದು.

ಅರ್ಜಿದಾರರು ಅದಕ್ಕೆ ಸಭಾಂಗಣವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಅಶೋಕ ಹಾರನಹಳ್ಳಿ ವಾದ ಮಂಡಿಸಿ ರಾಜ್ಯ ಸರ್ಕಾರವು ಎಲ್ಲಾ ಆಸ್ತಿಯು ತನ್ನದು ಎಂದು ಪರಿಗಣಿಸಿದೆ. ಸರ್ಕಾರವು ಮೇಲನವಿ ಸಲ್ಲಿಸುವ ಬದಲು ಮಧ್ಯಂತರ ತೆರವು ಕೋರಿ ಏಕಸದಸ್ಯ ಪೀಠದ ಮುಂದೆ ಮೆಮೊ ಸಲ್ಲಿಸಬೇಕಿತ್ತು. ಹೀಗಾಗಿ, ಸರ್ಕಾರದ ಮೇಲನವಿಯನ್ನು ಪರಿಗಣಿಸಬಾರದು ಎಂದರು. ವಾದ-ಪ್ರತಿ ವಾದ ಆಲಿಸಿದ ನ್ಯಾಯಾಲಯವು ಏಕಸದಸ್ಯ ಪೀಠವು ನೀಡಿರುವ ಮಧ್ಯಂತರ ಆದೇಶದ ಕುರಿತ ತೀರ್ಪನ್ನು ಕಾಯ್ದಿರಿಸಿದೆ.


- Advertisement -
RELATED ARTICLES

Latest News