Thursday, November 6, 2025
Homeರಾಜ್ಯಚಿಲ್ಲರೆ ಕೇಳುವ ಹಾಗೂ ಲಗ್ನ ಪತ್ರಿಕೆ ನೀಡುವ ನೆಪದಲ್ಲಿ ಎರಡು ಕಡೆ ದರೋಡೆ

ಚಿಲ್ಲರೆ ಕೇಳುವ ಹಾಗೂ ಲಗ್ನ ಪತ್ರಿಕೆ ನೀಡುವ ನೆಪದಲ್ಲಿ ಎರಡು ಕಡೆ ದರೋಡೆ

Robbery on the pretext of giving marriage Invitition

ಬೆಂಗಳೂರು,ನ.6-ಚಿಲ್ಲರೆ ಕೇಳುವ ನೆಪದಲ್ಲಿ ಹಾಲಿನ ವ್ಯಾಪಾರಿಯ ಗಮನ ಸೆಳೆದು ಹಣ ಎಗರಿಸಿ ಪರಾರಿಯಾಗಿದ್ದ ಆರೋಪಿಯನ್ನು ಸುಬ್ರಹಣ್ಯನಗರ ಠಾಣೆ ಪೊಲೀಸರು ಬಂಧಿಸಿ 20 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ. ಮನೆಗಳಿಗೆ ಹಾಗೂ ಅಂಗಡಿಗಳಿಗೆ ಹಾಲನ್ನು ಮಾರಾಟ ಮಾಡುವ ವ್ಯಾಪಾರಿ ಹನುಮಂತಯ್ಯ ಎಂಬುವರು ಮಾರಾಟದಿಂದ ಬಂದಿದ್ದ 20 ಸಾವಿರ ಹಣವನ್ನು ಜೇಬಿನಲ್ಲಿಟ್ಟುಕೊಂಡು ಸುಬ್ರಹಣ್ಯನಗರದ ಬ್ಯಾಂಕ್‌ವೊಂದರ ಬಳಿ ಆಟೋಗಾಗಿ ಕಾಯುತ್ತಿದ್ದರು.

ಆ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ದರೋಡೆಕೋರ ಬಂದು 500 ರೂ.ಗೆ ಚಿಲ್ಲರೆ ಕೊಡಿ ಎಂದು ಕೇಳಿದ್ದಾನೆ. ಆಗ ಹಾಲಿನ ವ್ಯಾಪಾರಿ ಜೈಲಿನಲ್ಲಿದ್ದ 20 ಸಾವಿರ ಹಣವಿದ್ದ ಕಂತೆಯನ್ನು ತೆಗೆದು ಚಿಲ್ಲರೆ ಕೊಡುತ್ತಿದ್ದಾಗ, ದುಡ್ಡನ್ನು ಹೀಗೆ ಇಟ್ಟಿದ್ದೀರಲಾ ಸರಿಯಾಗಿ ಜೋಡಿಸಿಕೊಡುತ್ತೇನೆ ಎಂದು ಹೇಳಿ ನೋಟಿನ ಕಂತೆಯನ್ನು ಪಡೆದುಕೊಂಡು ಜೋಡಿಸುವ ರೀತಿ ನಟಿಸಿ ಅವರ ಗಮನ ಬೇರೆಡೆ ಸೆಳೆದು ಹಣದೊಂದಿಗೆ ಪರಾರಿಯಾಗಿದ್ದಾನೆ.
ಸಹಾಯಕ್ಕಾಗಿ ಹಾಲಿನ ವ್ಯಾಪಾರಿ ಕೂಗಿಕೊಳ್ಳುವಷ್ಟರಲ್ಲಿ ದರೋಡೆಕೋರ ಕಣರೆಯಾಗಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದಲ್ಲಿನ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿ ದ್ವಿಚಕ್ರ ವಾಹನದ ನಂಬರ್‌ ಪತ್ತೆಹಚ್ಚಿ ಆರೋಪಿ ಮೊಹಮದ್‌ ಸಿಖಂದರ್‌(52) ಎಂಬಾತನನ್ನು ಪಾದರಾಯನಪುರದಲ್ಲಿ ಬಂಧಿಸಿ 20 ಸಾವಿರ ಹಣವನ್ನು ವಶಕ್ಕೆ ಪಡೆದುಕೊಂಡು, ಠಾಣೆಗೆ ಕರೆದೊಯ್ದು ನೋಟೀಸ್‌‍ ಜಾರಿ ಮಾಡಿ ಕಳುಹಿಸಿದ್ದಾರೆ. ಈ ಪ್ರಕರಣವನ್ನು ಇನ್‌ಸ್ಪೆಕ್ಟರ್‌ ಸುರೇಶ್‌ ಹಾಗೂ ಸಿಬ್ಬಂದಿ ತಂಡ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.


ಲಗ್ನಪತ್ರಿಕೆ ನೀಡುವ ನೆಪದಲ್ಲಿ ಬಂದು ಚಿನ್ನಾಭರಣ ದರೋಡೆ..
ಆನೇಕಲ್‌,ನ.6- ಲಗ್ನಪತ್ರಿಕೆ ನೀಡುವ ನೆಪದಲ್ಲಿ ಬಂದ ಮಹಿಳೆಯೊಬ್ಬಳು ಒಂಟಿ ಮನೆ ಒಡತಿಗೆ ಕತ್ತಿ ಹಿಡಿದು ಬೆದರಿಸಿ, ಮತ್ತೊಬ್ಬನೊಂದಿಗೆ ಸೇರಿಕೊಂಡು ಚಿನ್ನಾಭರಣ ದರೋಡೆ ಮಾಡಿರುವ ಘಟನೆ ತಾಲ್ಲೂಕಿನ ನೆರಳೂರು ಗ್ರಾಮದಲ್ಲಿ ನಡೆದಿದೆ.

ನೆರಳೂರು ಗ್ರಾಮದ ಹೊರವಲಯದಲ್ಲಿ ವಾಸವಾಗಿರುವ ನಾಗವೇಣಿ ರವಿಕುಮಾರ್‌ ಎಂಬುವರ ಮನೆಗೆ ನಿನ್ನೆ ಮಧ್ಯಾಹ್ನ 2.30ರ ಸುಮಾರಿನಲ್ಲಿ ಅಪರಿಚಿತ ಮಹಿಳೆಯೊಬ್ಬಳು ಆಗಮಿಸಿ ಬಾಗಿಲು ಬಡಿದು, ಲಗ್ನಪತ್ರಿಕೆ ನೀಡಬೇಕು ಎಂದು ಹೇಳಿದ್ದಾಳೆ.

ದೂರದ ಸಂಬಂಧಿಗಳಿರಬಹುದು ಎಂದು ಭಾವಿಸಿದ ಮನೆಯೊಡತಿ ನಾಗವೇಣಿ ಬಾಗಿಲು ತೆರೆದು ಆಕೆಯನ್ನು ಒಳಗೆ ಆಹ್ವಾನಿಸಿದ್ದಾರೆ. ಮನೆಯೊಳಗೆ ಬಂದ ಆಕೆ ಕುರ್ಚಿಯ ಮೇಲೆ ಕುಳಿತುಕೊಂಡು ಕುಡಿಯಲು ನೀರು ಕೇಳಿದ್ದಾಳೆ. ನಾಗವೇಣಿ ಅವರು ನೀರು ತರಲು ಅಡುಗೆ ಮನೆಗೆ ತೆರಳುತ್ತಿದ್ದಾಗಲೇ, ಆಕೆ ದಿಢೀರನೆ ಎದ್ದು ಹಿಂಬಾಲಿಸಿಕೊಂಡು ಹೋಗಿ ನಾಗವೇಣಿಯ ಬಾಯಿಯನ್ನು ಭದ್ರವಾಗಿ ಮುಚ್ಚಿ ಕಿರುಚದಂತೆ ಕುತ್ತಿಗೆಗೆ ಕತ್ತಿ ಹಿಡಿದು ಬೆದರಿಸಿದ್ದಾಳೆ.

ಬಳಿಕ ಕೆಲವೇ ನಿಮಿಷಗಳಲ್ಲಿ ಮುಸುಕುಧಾರಿಯೊಬ್ಬ ಮನೆಯೊಳಗೆ ಪ್ರವೇಶಿಸಿದ್ದಾನೆ. ಆನಂತರ ಇಬ್ಬರೂ ಸೇರಿಕೊಂಡು ಮನೆಯ ಒಡತಿಯನ್ನು ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ, ಕುರ್ಚಿಯಲ್ಲಿ ಕೂರಿಸಿ ಅವರ ಕೈಗಳನ್ನು ವೇಲಿನಿಂದ ಬಿಗಿದು ಕಟ್ಟಿಹಾಕಿದ್ದಾರೆ.
ಮನೆಯಲ್ಲಿರುವ ಚಿನ್ನಾಭರಣಗಳು ಎಲ್ಲೆಲ್ಲಿವೆ ಹೇಳು. ಇಲ್ಲದಿದ್ದರೆ ನಿನ್ನನ್ನು ಕೊಲ್ಲುತ್ತೇವೆ ಎಂದು ಕುತ್ತಿಗೆಗೆ ಚಾಕು ಒತ್ತಿ ಹಿಡಿದು ಬೆದರಿಕೆ ಹಾಕಿದ್ದಾರೆ. ಜೀವಭಯದಿಂದ ಹೆದರಿದ ನಾಗವೇಣಿ ಅವರು ಆಭರಣಗಳಿರುವ ಬೀರುಗಳ (ಅಲ್ಮೇರಾಗಳ) ಸ್ಥಳ ಮತ್ತು ಬೀಗದ ಕೀಗಳಿರುವ ಜಾಗವನ್ನು ತಿಳಿಸಿದ್ದಾರೆ.

ಆಗ ಇವರಿಬ್ಬರೂ ಕೈಗೆ ಸಿಕ್ಕ ಎಲ್ಲಾ ಚಿನ್ನಾಭರಣಗಳನ್ನು ದೋಚಿ ಹೊರಬಾಗಿಲಿನ ಚಿಲುಕ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಕೆಲ ನಿಮಿಷದ ಬಳಿಕ ಕೈಗಳನ್ನು ಬಿಡಿಸಿಕೊಂಡು ಹೊರಗೆ ಹೋಗಿ ಸಹಾಯಕ್ಕೆ ಕೂಗಿಕೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಮೋಹನ್‌ಕುಮಾರ್‌ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಅತ್ತಿಬೆಲೆ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ತಂಡ ರಚನೆ:
ಆರೋಪಿಗಳ ಬಂಧನಕ್ಕಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡು ಹಲವು ಮಾಹಿತಿಗಳನ್ನು ಕಲೆ ಹಾಕುತ್ತಿವೆ.

RELATED ARTICLES

Latest News