ಬೆಂಗಳೂರು, ಡಿ. 2- ನಿಗಮ ಮಂಡಳಿಗಳಿಗೆ, ಅಧ್ಯಕ್ಷರ ನೇಮಕಾತಿಗೆ ಅಂತಿಮ ಹಂತದ ಸಿದ್ಧತೆಗಳು ನಡೆದಿದ್ದು, ಇಂದು ಸಂಜೆ ಅಥವಾ ನಾಳೆಯೊಳಗೆ ನೇಮಕಾತಿಯ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ. ನಿಗಮಮಂಡಳಿಗಳ ಜೊತೆಗೆ ಇನ್ನೂ ನಾಲ್ಕೈದು ರಾಜಕೀಯ ಕಾರ್ಯದರ್ಶಿಗಳನ್ನು ನೇಮಿಸುವ ನಿರೀಕ್ಷೆಯಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆ.ಗೋವಿಂದರಾಜು, ನಸೀರ್ ಅಹಮ್ಮದ್ ಅವರನ್ನು ರಾಜಕೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.
ಮುಖ್ಯಮಂತ್ರಿಗಳಿಗೆ ಇನ್ನೂ ಇಬ್ಬರು ಶಾಸಕರನ್ನು ರಾಜಕೀಯ ಕಾರ್ಯದರ್ಶಿಗಳನ್ನಾಗಿ ನೇಮಿಸುವ ಸಾಧ್ಯತೆಯಿದೆ. ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮೂರು ಮಂದಿ ರಾಜಕೀಯ ಕಾರ್ಯದರ್ಶಿಗಳನ್ನು ನಿಯೋಜಿಸುವ ಚರ್ಚೆಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಪಿಎಸ್‍ಐ ಪರೀಕ್ಷೆ ಮುಂದೂಡಿಕೆಗೆ ದೂರವಾಣಿ ಕರೆ ಅಭಿಯಾನ
ಕಳೆದ ವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವೆ ನಡೆದ ಸಭೆಯಲ್ಲಿ ನಿಗಮ ಮಂಡಳಿಗಳಿಗೆ ನೇಮಕಾತಿಯ ಕುರಿತು ಚರ್ಚೆ ನಡೆಸಲಾಗಿದೆ.
ಸಂಭವನೀಯ ಪಟ್ಟಿಯನ್ನು ದೆಹಲಿಗೆ ಕಳುಹಿಸಲಾಗಿದೆ. ಹೈಕಮಾಂಡ್ ನಾಯಕರು ಪಟ್ಟಿಯನ್ನು ಪರಿಶೀಲಿಸಿದ್ದು, ಬಹುತೇಕ ಅಂಕಿತ ನೀಡುವ ನಿರೀಕ್ಷೆಯಿದ್ದು, ಇಂದು ಅಥವಾ ನಾಳೆಯೊಳಗೆ ಅಧಿಕೃತವಾಗಿ ಪಟ್ಟಿ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ. ಬಳಿಕ ನೇಮಕಾತಿ ಪ್ರಕ್ರಿಯೆಗಳು ನಡೆಯಲಿವೆ. ವಿಧಾನಮಂಡಲ ಅಧಿವೇಶನದ ಮುನ್ನ ನೇಮಕಾತಿಯಾಗುವುದಾದರೆ ಅದು ಸಾಧ್ಯ. ಇಲ್ಲವಾದರೆ ಸಂಕ್ರಾಂತಿಯ ಬಳಿಕವೇ ನಿಗಮ ಮಂಡಳಿಗಳಿಗೆ ಮೋಕ್ಷ ಎಂದು ಮೂಲಗಳು ತಿಳಿಸಿವೆ.