ಕಲ್ಬುರ್ಗಿ,ಡಿ.3- ವಿಧಾನಸಭೆ ಚುನಾವಣೆಗಳೇ ಬೇರೆ, ಲೋಕಸಭೆ ಚುನಾವಣೆಗಳೇ ಬೇರೆ. ಕಾಂಗ್ರೆಸ್ ಮುಂದಿನ ದಿನಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಶ್ರೀಸಾಮಾನ್ಯರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಲ್ಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣೆಗಳ ಪೈಕಿ ನಾಲ್ಕು ರಾಜ್ಯಗಳ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಪ್ರತಿಕ್ರಿಯೆ ನೀಡುವುದು ಆತುರದ ಕ್ರಮವಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ತೆಲಂಗಾಣದಲ್ಲಿ ನಾವು ಸರ್ಕಾರ ರಚಿಸುತ್ತಿದ್ದೇವೆ. ರಾಜಸ್ಥಾನದಲ್ಲಿ ಕಡಿಮೆ ಅಂತರದಲ್ಲಿ ಪೈಪೋಟಿ ಇದೆ. ಅಂತಿಮ ಫಲಿತಾಂಶ ಏನೇ ಆದರೂ ಜನಾಶೀರ್ವಾದವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷದ ಪ್ರಭಾವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಪರಿಣಾಮ ಬೀರಿದೆ. ಪ್ರತಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಗ್ಯಾರಂಟಿ ಯೋಜನೆಗಳು ಸುಧಾರಿಸುತ್ತಿದೆ. ರಾಜ್ಯದ ಆರ್ಥಿಕಾಭಿವೃದ್ಧಿಗೆ ನೀಲನಕ್ಷೆಯಾಗಿದೆ. ಬಿಜೆಪಿಯವರು ಒಂದೆಡೆ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ದಿವಾಳಿತನವಾಗಲಿದೆ ಎಂದು ಟೀಕೆ ಮಾಡುತ್ತಾರೆ. ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಐದು ವರ್ಷಗಳ ಕಾಲ ವಿಸ್ತರಿಸುವ ನಿರ್ಧಾರ ತೆಗೆದುಕೊಂಡಿದೆ.
ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಮುಗಿಲು ಮುಟ್ಟಿದ ಬಿಜೆಪಿ ಹರ್ಷೋದ್ಘಾರ
ವಿಶ್ವಗುರು ದೇಶದ ಅಭಿವೃದ್ಧಿಗಾಗಿ ಯಾವ ಕೊಡುಗೆ ನೀಡಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಒಂದೆಡೆ ಬಡವರು ಬಡವರಾಗಿಯೇ ಉಳಿದಿದ್ದರೆ, ಶ್ರೀಮಂತರು ಮತ್ತಷ್ಟು ಅಭಿವೃದ್ಧಿಯಾಗುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳನ್ನು ಕೊಟ್ಟರೆ ಆರ್ಥಿಕ ಸ್ಥಿತಿಗೆ ಪೆಟ್ಟಾಗುತ್ತಿದೆ ಎಂದು ಆರೋಪಿಸುವ ಬಿಜೆಪಿಗರು ಅವರ ಪಕ್ಷದ ಸರ್ಕಾರ ಉಚಿತ ಯೋಜನೆಗಳನ್ನು ಘೋಷಿಸಿದರೆ ಜನಕಲ್ಯಾಣ ಯೋಜನೆಗಳು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇದು ದ್ವಿಮುಖ ನೀತಿ ಎಂದು ಕಿಡಿಕಾರಿದರು.
ಬಿಜೆಪಿಯವರು ಐಟಿ, ಸಿಬಿಐ, ಇಡಿಗಳನ್ನು ಬಳಸಿಕೊಂಡು ರಂಗೋಲಿ ಕೆಳಗೆ ನುಸುಳುವ ಪ್ರಯತ್ನ ಮಾಡುತ್ತಿದ್ದಾರೆ. ತೆಲಂಗಾಣದಲ್ಲಿ ಸ್ಪಷ್ಟ ಬಹುಮತ ಪಡೆದಿದ್ದರೂ ಕೂಡ ಬಿಜೆಪಿಯವರು ಬೇರೆಯೇ ತಂತ್ರಗಾರಿಕೆ ಅನುಸರಿಸಬಹುದು. ಹೀಗಾಗಿ ಕಾಂಗ್ರೆಸ್ ನಮ್ಮ ಪಕ್ಷದ ಶಾಸಕರನ್ನು ರಕ್ಷಣೆ ಮಾಡಿಕೊಳ್ಳುವುದು ಅನಿವಾರ್ಯ. ರೆಸಾರ್ಟ್ ರಾಜಕೀಯವನ್ನು ಶುರು ಮಾಡಿದ್ದು ಮತ್ತು ಕಲಿಸಿದ್ದು ಕಾಂಗ್ರೆಸಿಗರಲ್ಲ, ಬಿಜೆಪಿಯವರು ಎಂದು ತಿರುಗೇಟು ನೀಡಿದರು.