Saturday, November 23, 2024
Homeಬೆಂಗಳೂರುನಿಂತ ಬಸ್‍ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು

ನಿಂತ ಬಸ್‍ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು

ಬೆಂಗಳೂರು,ಡಿ.4- ಪ್ರಯಾಣಿಕರನ್ನು ಇಳಿಸಲು ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ನಿಲ್ಲುತ್ತಿದ್ದಂತೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಇಂದು ಬೆಳಗ್ಗೆ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಕಿಯ ತೀವ್ರತೆಯಿಂದಾಗಿ ಬಸ್ ಹಿಂಭಾಗ ಭಾಗಶಃ ಹಾನಿಯಾಗಿದೆ. ಚಾಲಕ ಹಾಗೂ ನಿರ್ವಾಹಕರ ಸಮಯ ಪ್ರಜ್ಞೆಯಿಂದ ಬಸ್‍ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ರಕ್ಷಿಸಿದ್ದಾರೆ. ಕಾರಿನಲ್ಲಿದ್ದ ಲೋಕೇಶ್, ಇವರ ಪತ್ನಿ ಹಾಗೂ ಮಗಳು ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಯಶವಂತಪುರದಿಂದ ಬಿಎಂಟಿಸಿ ಬಸ್ ನಾಯಂಡಹಳ್ಳಿ ಹೋಗುತ್ತಿತ್ತು. ರಿಂಗ್ ರಸ್ತೆಯ ಸುವರ್ಣ ಲೇಔಟ್, ನಾಗರಬಾವಿ ಜಂಕ್ಷನ್‍ನಲ್ಲಿ ಪ್ರಯಾಣಿಕರನ್ನು ಇಳಿಸಲು ಬಸ್ ನಿಲ್ಲಿಸಿದಾಗ ಹಿಂದಿನಿಂದ ಅತಿವೇಗವಾಗಿ ಬಂದ ಕಾರು ಬಸ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ಕಾರಿನ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಕಾರನ್ನು ಪೂರ್ತಿ ಆವರಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಕಾರಿನಲ್ಲಿದ್ದ ದಂಪತಿ ಹಾಗೂ ಮಗಳನ್ನು ಕಾರಿನಿಂದ ಹೊರ ಕರೆತಂದು ರಕ್ಷಿಸಿದ್ದಾರೆ. ಬಸ್ ಹಿಂಭಾಗಕ್ಕೆ ಕಾರು ಕಚ್ಚಿಕೊಂಡಿದ್ದರಿಂದ ಚಾಲಕ ಕಾರನ್ನು ಬೇರ್ಪಡಿಸಲು ಬಸ್ಸನ್ನು ಸ್ವಲ್ಪ ದೂರ ಚಾಲನೆ ಮಾಡಿಕೊಂಡು ಹೋಗಿ ಬುದ್ಧಿವಂತಿಕೆ ಉಪಯೋಗಿಸಿ ಮೀಡಿಯನ್ ಮೇಲೆ ಬಸ್ ಹತ್ತಿಸಿದಾಗ ಉರಿಯುತ್ತಿದ್ದ ಕಾರು ಕಳಚಿಕೊಂಡಿದೆ.

ಲೋಕಸಭೆಯಲ್ಲಿ ಮೊಳಗಿದ ‘ತೀಸ್ರಿ ಬಾರ್ ಮೋದಿ ಸರ್ಕಾರ್’ ಘೋಷಣೆ

ನಂತರ ಸಾರ್ವಜನಿಕರ ಸಹಾಯದಿಂದ ಬಸ್ ಚಾಲಕ ಹಾಗೂ ನಿರ್ವಾಹಕರು ಬಸ್ ಹಿಂಭಾಗ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಒಂದು ವೇಳೆ ಬಸ್ ಇಂಜಿನ್‍ಗೆ ಬೆಂಕಿ ತಾಗಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು ಎಂದು ಚಾಲಕ ವಿವರಿಸಿದ್ದಾರೆ.

ಬಸ್ ಹಿಂಭಾಗಕ್ಕೆ ಬೆಂಕಿ ತಾಗಿದ್ದರಿಂದ ಭಾಗಶಃ ಹಾನಿಯಾಗಿದೆ. ನೋಡ ನೋಡುತ್ತಿದ್ದಂತೆ ನಡುರಸ್ತೆಯಲ್ಲೇ ಕಾರು ಹೊತ್ತಿ ಉರಿದಿದ್ದು, ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರಾದರೂ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಕಾರಿನಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.ಈ ಬಗ್ಗೆ ಬ್ಯಾಟರಾಯನಪುರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಚಾಲಕನ ಸಮಯಪ್ರಜ್ಞೆ: ಪ್ರಯಾಣಿಕರನ್ನು ಇಳಿಸಲು ಬಸ್ ನಿಲ್ಲಿಸಿದಾಗ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರು ಬಸ್‍ಗೆ ಕಚ್ಚಿಕೊಂಡು ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಚಾಲಕ ಬಸ್ ಇಳಿದು ನಿರ್ವಾಹಕ ಹಾಗೂ ಸ್ಥಳೀಯರೊಂದಿಗೆ ಸೇರಿ ನೀರು ಹಾಗೂ ಮಣ್ಣು ಹಾಕಿ ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರು.

ಸಾಧ್ಯವಾಗದಿದ್ದಾಗ ಬಸ್‍ನ್ನು ಸ್ವಲ್ಪ ಮುಂದೆ ಚಾಲನೆ ಮಾಡಿದರಾದರೂ ಕಾರು ಬಸ್‍ನಿಂದ ಬಿಡಿಸಿಕೊಳ್ಳದೆ ಬಸ್‍ನ ಜೊತೆಗೆ ಬರುತ್ತಿರುವುದನ್ನು ಗಮನಿಸಿ ಬಸ್‍ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.

ಜನ ನಕಾರಾತ್ಮಕತೆಯನ್ನು ತಿರಸ್ಕರಿಸಿದ್ದಾರೆ : ಮೋದಿ

ನಂತರ ಬಸ್‍ನಲ್ಲಿದ್ದ ಬೆಂಕಿ ನಂದಿಸುವ ಸಾಧನದಿಂದ ಬೆಂಕಿಯನ್ನು ನಂದಿಸಲು ಯತ್ನಿಸಿದರು. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ತಕ್ಷಣ ಅಗ್ನಿಶಾಮಕ ದಳ ಹಾಗೂ ಡಿಫೋಗೆ ವಿಷಯ ತಿಳಿಸಿದ್ದಾರೆ. ಡಿಫೋದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಸಾಧನದಿಂದ ಬೆಂಕಿಯನ್ನು ತಹಬದಿಗೆ ತರಲು ಯತ್ನಿಸುತ್ತಿದ್ದಾಗ ಅಗ್ನಿಶಾಮಕ ಸಿಬ್ಬಂದಿ ವಾಹನದೊಂದಿಗೆ ಆಗಮಿಸಿ ಬೆಂಕಿಯನ್ನು ನಂದಿಸಿದರು.

RELATED ARTICLES

Latest News