ಬೆಂಗಳೂರು, ಮಾ.4- ಹೈಕಮಾಂಡ್‌ನ ಅಸಡ್ಡೆಯಿಂದಾಗಿ ಒಳಗೊಳಗೆ ಕುದಿಯುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆವರೆಗೂ ಕಾದು ನೋಡುವ ಗಡುವು ನೀಡಿದ್ದಾರೆ.
ತಮ ಅಸಹನೆ, ಆಕ್ರೋಶಗಳನ್ನು ಒಳಗೊಳಗೆ ನುಂಗುತ್ತಿರುವ ಡಿ.ಕೆ.ಶಿವಕುಮಾರ್ ಅವರು ಆಡಲು ಆಗದ, ಅನುಭವಿಸಲೂ ಆಗದಂತಹ ಇಕ್ಕಟ್ಟಿಗೆ ಸಿಲುಕಿರುವಂತೆ ಕಂಡು ಬರುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಹಾಗೂ ತಮ ಸಂಬಂಧ ಹಾಲು ಜೇನಿನಂತಿದೆ ಎಂದು ಹೇಳುತ್ತಲೇ, ಡಿ.ಕೆ.ಶಿವಕುಮಾರ್ ಅವರನ್ನು ಸೆಳೆಯಲು ಬಿಜೆಪಿ-ಜೆಡಿಎಸ್ ಹಗಲು ಕನಸು ಕಾಣುತ್ತಿವೆ ಎಂಬ ಅನುಮಾನವನ್ನು ಬಿತ್ತಿದ್ದಾರೆ.
ಅಸ್ಸಾಂ ವಿಧಾನಸಭೆ ಚುನಾವಣೆಗೆ ಡಿ.ಕೆ.ಶಿವಕುಮಾರ್ ಉಸ್ತುವಾರಿ ನಾಯಕರಾಗಿದ್ದಾರೆ. ಅಸ್ಸಾಂನಲ್ಲಿ ಕಟ್ಟಾ ಕಾಂಗ್ರೆಸ್ಸಿಗರಾಗಿದ್ದ ಹೀಮಂತ್ ಬಿಸ್ವ ಶರ್ಮ ಆಪರೇಷನ್ ಕಮಲದಿಂದ ಬಿಜೆಪಿ ಸೇರಿ ಅಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಡಿ.ಕೆ.ಶಿವಕುಮಾರ್ ಈಗ ಆ ರಾಜ್ಯದ ಚುನಾವಣೆ ಉಸ್ತುವಾರಿ ನೋಡುತ್ತಿರುವುದರಿಂದಾಗಿ ನಾನಾ ರೀತಿಯ ಲೆಕ್ಕಾಚಾರಗಳು ಕೇಳಿ ಬರುತ್ತಿವೆ.
ಡಿ.ಕೆ.ಶಿವಕುಮಾರ್ ಪಕ್ಕ ಕಾಂಗ್ರೆಸಿಗರಾಗಿದ್ದು, ಜೈಲಿಗೆ ಹಾಕಿದಂತಹ ಕಠಿಣ ಸಂದರ್ಭದಲ್ಲೂ ಪಕ್ಷ ನಿಷ್ಠೆಯನ್ನು ಕಾಯ್ದುಕೊಂಡಿದ್ದಾರೆ. ಅವರು ಕಾಂಗ್ರೆಸಿಗರಾಗಿಯೇ ಇರುತ್ತಾರೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು, ಇಲ್ಲದೇ ಇದ್ದ ಅನುಮಾನವೊಂದನ್ನು ತೇಲಿಬಿಟ್ಟಿದ್ದಾರೆ.
ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರ ಒತ್ತಡಕ್ಕೆ ಮಣಿಯುತ್ತಿಲ್ಲ ಎಂದು ಹೇಳಲಾಗುತ್ತಿದೆ. ಎರಡೂವರೆ ವರ್ಷ ಅಧಿಕಾರ ಹಂಚಿಕೆಯ ಒಪ್ಪಂದದಂತೆ ತಮಗೆ ಪಟ್ಟ ದೊರೆಯಬೇಕು ಎಂಬುದು ಡಿ.ಕೆ.ಶಿವಕುಮಾರ್ ಅವರ ಒತ್ತಾಸೆಯಾಗಿತ್ತು. ಆದರೆ ಆದು ಈಡೇರುತ್ತಿಲ್ಲ. ಪಕ್ಷದ ಸಂಘಟನೆಗೆ ಡಿ.ಕೆ.ಶಿವಕುಮಾರ್ ಅವರನ್ನು ಹೆಚ್ಚು ಬಳಸಿಕೊಳ್ಳುತ್ತಿರುವ ಹೈಕಮಾಂಡ್ ಅಧಿಕಾರದ ವಿಷಯ ಬಂದಾಗ ಕಡೆಗಣಿಸುತ್ತಿದೆ ಎಂಬ ಆರೋಪಗಳಿವೆ.
ಹೈಕಮಾಂಡ್ ನಾಯಕರ ಮೇಲಿನ ಅಸಹನೆಯನ್ನು ಡಿ.ಕೆ.ಶಿವಕುಮಾರ್ ಕಂಡು ಕಾಣದಂತೆ ವ್ಯಕ್ತಪಡಿಸುತ್ತಿದ್ದಾರೆ. ತಮಗೇನೂ ಮಾತನಾಡಲೂ ಬರುವುದಿಲ್ಲ ಎಂದಲ್ಲಾ ಆದರೆ, ನಾವೇ ಕಟ್ಟಿ ಬೆಳೆಸಿದ ಪಕ್ಷವನ್ನು ನಾಶ ಮಾಡಲು ನಮಗೆ ಮನಸ್ಸಿಲ್ಲ ಎಂಬ ಉತ್ಖಟವಾದಂತಹ ಮಾತುಗಳನ್ನು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಜೊತೆಗೆ ಹಾಲು-ಜೇನಿನಂತಹ ಸಂಬಂಧವಿದೆಯೇ ಎಂಬುದಕ್ಕೆ ಬಲವಂತವಾಗಿ ಹೌದು ಎನ್ನುತ್ತಿರುವ ಡಿ.ಕೆ.ಶಿವಕುಮಾರ್ ಮೊದಲಿನಂತೆ ಆತೀಯತೆ ಹಾಗೂ ಸಹೋದರತ್ವದ ಭಾವನೆಗಳನ್ನು ವ್ಯಕ್ತಪಡಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಒಟ್ಟಿಗೆ ಚುನಾವಣೆಗೆ ಹೋದರೆ ರಾಜ್ಯದಲ್ಲಿ 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಗೆಲ್ಲಲಿದೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.ನಾಯಕತ್ವದ ಗೊಂದಲದಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಇದನ್ನು ಸರಿಪಡಿಸಿ ಎಂದು ಉಭಯ ನಾಯಕರ ಬೆಂಬಲಿಗರು ಪದೇ ಪದೇ ಹೇಳುತ್ತಿದ್ದಾರೆ.
ನಾಯಕತ್ವದ ಗೊಂದಲವನ್ನು ಸೃಷ್ಟಿ ಮಾಡಿದ್ದು, ಹೈಕಮಾಂಡ್ ಅಲ್ಲ. ಹೀಗಾಗಿ ನಾವು ಮಧ್ಯ ಪ್ರವೇಶಿಸುವ ಅಗತ್ಯ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇರವಾಗಿ ಹೇಳಿಯಾಗಿದೆ. ಆದರೆ ಪರಿಸ್ಥಿತಿ ಕೈಮೀರಿ ಹೋಗಿದ್ದು, ಈಗ ಹೈಕಮಾಂಡ್ ಮಧ್ಯ ಪ್ರವೇಶಿಸದ ಹೊರತು, ಅನ್ಯ ಮಾರ್ಗವಿಲ್ಲ ಎಂಬಂತಹ ಸನ್ನಿವೇಶ ಸೃಷ್ಟಿಯಾಗಿದೆ.
ಪರಿಸ್ಥಿತಿ ಹದಗೆಡುತ್ತಿದ್ದರೂ ಹೈಕಮಾಂಡ್ ದಿಟ್ಟ ನಿರ್ಧಾರ ತೆಗೆದುಕೊಳ್ಳದೇ ಮೀನಾಮೇಷ ಎಣಿಸುತ್ತಿರುವುದು ಡಿ.ಕೆ.ಶಿವಕುಮಾರ್ ಬೆಂಬಲಿಗರನ್ನು ಕೆರಳುವಂತೆ ಮಾಡಿದೆ. ಸಿದ್ದರಾಮಯ್ಯ ಅವರ ಬಣ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಅಧಿಕಾರ ಹಂಚಿಕೆ ಮುಂದೆ ಹೋಗಲಿ ಎಂಬ ಅಂದಾಜಿನಲ್ಲಿದ್ದಂತಿದೆ.
ಮೂಲಗಳ ಪ್ರಕಾರ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್‌ಗೆ ಗಡುವು ನೀಡಿದ್ದು, ಅಸ್ಸಾಂ, ಕೇರಳ, ತಮಿಳುನಾಡು, ಪುದುಚೇರಿ ವಿಧಾನಸಭೆ ಚುನಾವಣೆಗಳು ಮುಗಿಯುತ್ತಿದ್ದಂತೆ ತಮಗೆ ಕೊಟ್ಟ ಮಾತನ್ನು ಹೈಕಮಾಂಡ್ ಉಳಿಸಿಕೊಳ್ಳಬೇಕು. ಇಲ್ಲವಾದರೆ ರಾಜಕೀಯವಾಗಿ ತಾವು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರೂ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್ ಅವರ ಒತ್ತಡದಿಂದಾಗಿ ಇಕ್ಕಟ್ಟಿಗೆ ಸಿಲುಕಿರುವ ಕಾಂಗ್ರೆಸ್ ಹೈಕಮಾಂಡ್ ಕಳೆದ ಸೋಮವಾರ ದೆಹಲಿಯಲ್ಲಿ ಕರ್ನಾಟಕ ರಾಜಕಾರಣದ ಕುರಿತು ಮಹತ್ವದ ಚರ್ಚೆ ನಡೆಸಿದೆ ಎನ್ನಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ, ವರಿಷ್ಠ ನಾಯಕಿ ಸೋನಿಯಾಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮಹತ್ವದ ಮಾತುಕತೆ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಗಡುವು ಕಾಂಗ್ರೆಸ್ ಪಕ್ಷಕ್ಕೆ ಬಿಸಿ ತುಪ್ಪವಾಗಿದೆ ಎಂದು ಮೂಲಗಳು ತಿಳಿಸಿದೆ.
