ಚೆನ್ನೈ,ಡಿ.5- ಮಿಚುವಾಂಗ್ ಚಂಡಮಾರುತಕ್ಕೆ ಚೆನ್ನೈ ಸಂಪೂರ್ಣ ತತ್ತರಿಸಿ ಹೋಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿ ಚಂಡಮಾರುತದ ಅಬ್ಬರಕ್ಕೆ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವೆಡೆ ವಿದ್ಯುತ್ ಸಂಪರ್ಕ ಕಡಿಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ಚಂಗುಲುಗಟ್ಟುವಿನಲ್ಲಿ ಇಬ್ಬರು ಸೇರಿದಂತೆ ಚಂಡಮಾರುತದ ಅಬ್ಬರಕ್ಕೆ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಚೆನ್ನೈ ಸಂಪೂರ್ಣ ಜಲಾವೃತಗೊಂಡು ಕಾರು, ದ್ವಿಚಕ್ರ ವಾಹನಗಳು ನೀರಿನಲ್ಲಿ ತೇಲಿ ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಜನರು ಆಶ್ರಯ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಚೆನ್ನೈನಲ್ಲಿ ನಿನ್ನೆಯಿಂದ 400 ರಿಂದ 500 ಮಿಲಿ ಮೀಟರ್‍ನಷ್ಟು ಮಳೆ ಸುರಿದಿದೆ. ಅಣ್ಣಾಸಲೈ ಸೇರಿದಂತೆ ಹಲವಾರು ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಮಿಚುವಾಂಗ್ ಚಂಡಮಾರುತಕ್ಕೆ ಭಾರೀ ಹಾನಿ ಉಂಟಾಗಿದ್ದು, ಬಹುತೇಕ ಎಲ್ಲಾ ರಸ್ತೆ, ವಸತಿ ಪ್ರದೇಶ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳು ನದಿಗಳಂತೆ ಮಾರ್ಪಟ್ಟಿವೆ.
ಸರ್ಕಾರಿ ಹುದ್ದೆಗಳ ನೇಮಕಾತಿ ಅಕ್ರಮ ತಡೆಗೆ ಕಠಿಣ ಕಾನೂನು
ಚಂಡಮಾರುತದ ಪರಿಣಾಮ ಭಾರೀ ಮಳೆಯಾಗುತ್ತಿದ್ದು, ವಿಮಾನ ನಿಲ್ದಾಣಗಳು ಜಲಾವೃತವಾಗಿರುವ ಹಿನ್ನೆಲೆಯಲ್ಲಿ 33 ವಿಮಾನಗಳನ್ನು ಚೆನ್ನೈನಿಂದ ಬೆಂಗಳೂರು ವಿಮಾನನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿದೆ.
ಚೆನ್ನೈ ವಿಮಾನನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಾಗಿದ್ದ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಚೆನ್ನೈ ಮಾತ್ರವಲ್ಲದೆ, ತಿರುಪತಿ, ವಿಶಾಖಪಟ್ಟಣ ಎಲ್ಲಾ ಪ್ರದೇಶಗಳ ವಿಮಾನಗಳ ಹಾರಟವು ಕೂಡ ವಿಳಂಬವಾಗುತ್ತಿದೆ. ನಗರದ ಸುಮಾರು 16 ಸುರಂಗಗಳಲ್ಲಿ ನೀರು ತುಂಬಿ ಓಡಾಟಕ್ಕೆ ಭಾರೀ ಅಡಚಣೆಯಾಗಿದೆ.
ಆಂಧ್ರಪ್ರದೇಶದಲ್ಲೂ ಕೂಡ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ನಲ್ಲೂರು, ಮಚಲಿಪಟ್ಟಣಂ ನಡುವೆ ಕರಾವಳಿಯಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಮುಲುಗು, ಭದ್ರಾದ್ರಿ, ಕೊತೆಗುಡ್ಡಂ ಮತ್ತು ಕಮ್ಮಮ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ ಸಜ್ಜಾದ ಬಿಜೆಪಿ-ಜೆಡಿಎಸ್
ನಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ದಕ್ಷಿಣ ಆಂಧ್ರ ಪ್ರದೇಶದ ಕರಾವಳಿಯನ್ನು ಚಂಡಮಾರುತ ದಾಟುವ ನಿರೀಕ್ಷೆಯಿದ್ದು, ಸುಮಾರು ಗಂಟೆಗೆ 100 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.
ರಾಜ್ಯದ ಹಲವು ಭಾಗಗಳಲ್ಲಿ ಆರೆಂಜ್ ಮತ್ತು ಎಲ್ಲೋ ಎಚ್ಚರಿಕೆಗಳನ್ನು ನೀಡಲಾಗಿದೆ. ಸೂರ್ಯಪೇಟೆ, ಮೆಹಬೂಬ್‍ಬಾದ್, ವಾರಂಗಲ್, ಹನುಮಕೊಂಡದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.