ಬೆಂಗಳೂರು, ಮಾ.5- ಅಧಿಕಾರ ಹಂಚಿಕೆಯ ಗೊಂದಲದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ತಮ 17ನೇ ದಾಖಲೆಯ ಬಜೆಟ್ ಮಂಡಿಸುತ್ತಿದ್ದು, ಶಿಕ್ಷಣ, ನೀರಾವರಿ, ಪಶು ಸಂಗೋಪನೆ, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡುವ ಮುನ್ಸೂಚನೆ ದೊರೆತ್ತಿದೆ.
ನಾಯಕತ್ವದ ಗೊಂದಲದಿಂದಾಗಿ ತಡವಾಗಿ ಬಜೆಟ್ ತಯಾರಿಕೆಯ ಪ್ರಕ್ರಿಯೆಗಳನ್ನು ಆರಂಭಿಸಿದ್ದ ಸಿದ್ದರಾಮಯ್ಯ ಅವರು, ಎಂದಿನಂತೆ ರೈತ ಸಂಘಟನೆಗಳು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳು, ಕೈಗಾರಿಕೆಗಳಿಗೆ ಸಂಬಂಧಪಟ್ಟ ಸಂಸ್ಥೆಗಳು ಸೇರಿದಂತೆ ವಿವಿಧ ವಲಯಗಳ ಜೊತೆ ಚರ್ಚೆ ನಡೆಸಿದ್ದಾರೆ.
5 ಗ್ಯಾರಂಟಿಗಳಿಗೆ ಕಳೆದ ವರ್ಷ 56 ಸಾವಿರ ಕೋಟಿ ರೂ.ಗಳನ್ನು ಬಜೆಟ್ನಲ್ಲಿ ಮೀಸಲ್ಪಟ್ಟಿರುವುದಾಗಿ ಘೋಷಿಸಲಾಗಿತ್ತು. ಅದು ಬಹುತೇಕ ಖರ್ಚಾಗಿದೆ. ಆದರೆ ಆ ಅನುದಾನದ ಜೊತೆ ಎಸ್ಇಪಿ, ಟಿಎಸ್ಪಿಯಡಿ ನಿಗದಿಯಾಗಿದ್ದ 14 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ.
56 ಸಾವಿರ ಕೋಟಿಗಳ ನಿಗದಿತ ಅನುದಾನದ ಜೊತೆಗೆ ಹೆಚ್ಚುವರಿಯಾಗಿ 14ಸಾವಿರ ಕೋಟಿ ರೂ. ಬಳಕೆ ಮಾಡಿರುವುದರಿಂದಾಗಿ ಗ್ಯಾರಂಟಿ ಯೋಜನೆಗಳಿಗೆ ಒಟ್ಟು 70ಸಾವಿರ ಕೋಟಿ ರೂ.ಗಳು ಖರ್ಚಾಗಿದೆಯೇ ಎಂಬ ಅನುಮಾನಗಳು ಕಾಡಲಾರಂಭಿಸಿವೆ.
ಗ್ಯಾರಂಟಿ ಯೋಜನೆಗಳ ವೆಚ್ಚವನ್ನು ಅಂದಾಜಿಸುವಲ್ಲಿ ಆಯಾ ಇಲಾಖೆಗಳು ತಪ್ಪಿವೆಯೇ? ಎಂಬ ಅನುಮಾನಗಳು ಕಾಡುತ್ತಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಪ್ರಸಕ್ತ ಬಜೆಟ್ ತಯಾರಿಕೆಯ ವೇಳೆ ಪ್ರತಿಯೊಂದು ಅಂಕಿ-ಅಂಶಗಳನ್ನು ಖುದ್ದಾಗಿ ತಾವೇ ಪರಿಶೀಲಿಸಿದ್ದು, ಗ್ಯಾರಂಟಿ ಯೋಜನೆಗಳಿಗೆ ಮುಂದಿನ ಬಜೆಟ್ನಲ್ಲಿ 60ಸಾವಿರ ಕೋಟಿ ರೂ.ಗಳಿಗೂ ಮೀರಿದ ಅನುದಾನ ನಿಗದಿ ಮಾಡಬೇಕಾದ ಒತ್ತಡದಲ್ಲಿ ಸಿಲುಕಿದ್ದಾರೆ.
ಬಹುಕಾಲದ ಬೇಡಿಕೆಯಾಗಿರುವ ಆಲಮಟ್ಟಿ ಅಣೆಕಟ್ಟು ಎತ್ತರದ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆಗಾಗಿಯೇ 70 ಸಾವಿರ ಕೋಟಿ ರೂ.ಗಳ ಅನುದಾನ ಅಗತ್ಯ ಇದೆ. ಈ ಬಾರಿಯ ಬಜೆಟ್ನಲ್ಲಿ ಸುಮಾರು 10 ಸಾವಿರ ಕೋಟಿ ರೂ.ಗಳನ್ನು ಘೋಷಿಸುವ ಸಾಧ್ಯತೆ ಇದೆ.
ಆರೋಗ್ಯ ಇಲಾಖೆ ವತಿಯಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸ್ಕ್ಯಾನಿಂಗ್, ಎಂಆರ್ಐ ಯಂತ್ರಗಳನ್ನು ಸರ್ಕಾರ ತನ್ನದೇ ವೆಚ್ಚದಲ್ಲಿ ಅಳವಡಿಸಲು ಚರ್ಚೆಗಳು ನಡೆದಿದ್ದವು. ಜೊತೆಗೆ ಸುವರ್ಣಕರ್ನಾಟಕ ಆರೋಗ್ಯ ವಿಮಾ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಸಂಬಂಧಪಟ್ಟಂತೆಯೂ ಬಜೆಟ್ ತಯಾರಿಕೆಯ ವೇಳೆಯಲ್ಲಿ ಚರ್ಚೆಗಳಾಗಿದ್ದವು.
ಕೃಷಿ ಇಲಾಖೆಯಲ್ಲಿ ರೈತ ಕಲ್ಯಾಣಕ್ಕೆ ಸಂಬಂಧಪಟ್ಟಂತೆ ಹಲವಾರು ಯೋಜನೆಗಳು ಚರ್ಚೆಯಾಗಿವೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಬಿಎ ಸೇರಿದಂತೆ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಇದೇ ವರ್ಷ ನಡೆಯುವುದರಿಂದಾಗಿ ಮತದಾರರ ಓಲೈಕೆಗಾಗಿ ಒಂದಿಷ್ಟು ಜನಪ್ರಿಯ ಯೋಜನೆಗಳನ್ನು ಘೋಷಿಸಲು ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ.
ಕಾಂಗ್ರೆಸ್ ಚುನಾವಣೆ ವೇಳೆಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಈ ನಿಟ್ಟಿನಲ್ಲಿ ಸಾಕಷ್ಟು ಒತ್ತಡಗಳು ಕೇಳಿ ಬರುತ್ತಿವೆ. ಆದರೆ ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಅದು ಕಷ್ಟಸಾಧ್ಯ ಎನ್ನಲಾಗುತ್ತಿದೆ.
ಹೀಗಾಗಿ ಸರ್ಕಾರಿ ನೌಕರರನ್ನು ಮನವೊಲಿಸಲು ಬೇರೆ ರೀತಿಯ ಹೊಸ ಕಾರ್ಯಕ್ರಮಗಳನ್ನು ನೀಡುವ ಬಗ್ಗೆ ಸಿದ್ದರಾಮಯ್ಯ ಸಮಾಲೋಚನೆ ನಡೆಸಿರುವುದು ತಿಳಿದು ಬಂದಿತ್ತು. ಒಂದೆಡೆ ಆರ್ಥಿಕ ಸವಾಲುಗಳು ಮತ್ತೊಂದೆಡೆ ಸಿದ್ದರಾಮಯ್ಯ ಅವರ ತಮ ಹಿರಿತನ ಹಾಗೂ ಅನುಭವಕ್ಕನುಗುಣವಾಗಿ ಪರಿಣಾಮಕಾರಿ ಬಜೆಟ್ ಮಂಡಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಮೊದಲೆಲ್ಲಾ ಯೋಜನಾ ವೆಚ್ಚಕ್ಕೆ ಹೆಚ್ಚು ಒತ್ತು ನೀಡಿ ಆಸ್ತಿ ಸೃಜನೆ ಹಾಗೂ ಆದಾಯ ವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದರು. ಆದರೆ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆಯನ್ನು ಆರ್ಥಿಕ ಇಲಾಖೆ ಎದುರಿಸುತ್ತಿದೆ.
ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯ ವೆಚ್ಚ ನಿರೀಕ್ಷೆ ಮೀರಿ ಹೆಚ್ಚಾಗುತ್ತಿದೆ. ಹೊಸ ಪಡಿತರ ಚೀಟಿಗಳಿಗೆ ಅವಕಾಶ ನೀಡದೇ ಇರುವುದರಿಂದಾಗಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಸದ್ಯಕ್ಕೆ ತಟಸ್ಥವಾಗಿದೆ. ಒಂದು ವೇಳೆ ಹೊಸ ಪಡಿತರ ಚೀಟಿಗಳನ್ನು ನೀಡಿದರೆ, ಫಲಾನುಭವಿಗಳ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ. ಹೀಗಾಗಿ ಹೊಸ ಪಡಿತರ ಚೀಟಿಗಳನ್ನು ವಿತರಿಸಬಾರದು ಎಂದು ಆಹಾರ ಇಲಾಖೆಯ ಮೇಲೆ ಭಾರಿ ಒತ್ತಡ ಹೇರಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಬೇರೆ-ಬೇರೆ ಕಾರ್ಯಗಳಿಗಾಗಿ ಹೊಸ ಪಡಿತರ ಚೀಟಿಗಳಿಗಾಗಿ ನಿರೀಕ್ಷಿಸುತ್ತಿರುವವರ ಆಕ್ರೋಶ ತೀವ್ರವಾಗಿದೆ. ಈ ಬಜೆಟ್ನಲ್ಲಿ ಇದಕ್ಕೊಂದು ಪರಿಹಾರ ನೀಡಬೇಕೆಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಹಲವು ಬಾರಿ ಒತ್ತಡ ಹೇರಿದರು.
ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮ ಸಂಸ್ಥೆಗಳು ನಾನಾ ರೀತಿಯ ರಿಯಾಯಿತಿಗಳಿಗಾಗಿ ಪ್ರಸ್ತಾವನೆ ಸಲ್ಲಿಸಿವೆ. ಅವುಗಳನ್ನು ಪರಿಗಣಿಸುವುದು ಅಭಿವೃದ್ಧಿ ದೃಷ್ಟಿಯಿಂದ ಅತ್ಯಗತ್ಯ ಎಂಬ ಸಲಹೆ ಆರ್ಥಿಕ ಇಲಾಖೆಯಿಂದ ಕೇಳಿ ಬಂದಿದೆ.
ಈಗಾಗಲೇ ರಾಜ್ಯದ ಸಾಲ ಹನುಮಂತನ ಬಾಲದಂತೆ ದೊಡ್ಡದಾಗಿ ಬೆಳೆದಿದೆ. ಒಂದೆಡೆ ಆರ್ಥಿಕ ಅಭಿವೃದ್ಧಿ ಹಾಗೂ ಮತ್ತೊಂದೆಡೆ ಗ್ಯಾರಂಟಿಗಳ ನಡುವೆ ಸಮತೋಲಿತ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಕಸರತ್ತು ನಡೆಸಿದ್ದಾರೆ. ಮದ್ಯ, ಮೋಟಾರು ತೆರಿಗೆ ಸೇರಿದಂತೆ ವಿವಿಧ ಬಾಬ್ತುಗಳ ಮೇಲೆ ತೆರಿಗೆಯ ಹೊರೆಯನ್ನು ನಿರೀಕ್ಷಿಸಲಾಗಿದೆ.
