Friday, November 22, 2024
Homeರಾಜ್ಯಕೊಬ್ಬರಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಜೆಡಿಎಸ್ ಧರಣಿ

ಕೊಬ್ಬರಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಜೆಡಿಎಸ್ ಧರಣಿ

ಬೆಳಗಾವಿ,ಡಿ.5- ಕೊಬ್ಬರಿ ಬೆಲೆ ಕುಸಿತ ಹಾಗೂ ಬೆಂಬಲ ಬೆಲೆ ಕುರಿತ ಚರ್ಚೆಯ ವಿಷಯವಾಗಿಯೇ ಗದ್ದಲಗಳು, ಆರೋಪ-ಪ್ರತ್ಯಾರೋಪ ತೀವ್ರಗೊಂಡು ಜೆಡಿಎಸ್ ಶಾಸಕರು ವಿಧಾನಸಭೆಯಲ್ಲಿ ಧರಣಿ ನಡೆಸಿದರು. ಪ್ರಶ್ನೋತ್ತರದ ಬಳಿಕ ಸಭಾಧ್ಯಕ್ಷ ಯು.ಟಿ.ಖಾದರ್, ಶೂನ್ಯವೇಳೆಯನ್ನು ಕೈಗೆತ್ತಿಕೊಂಡರು.

ಈ ಹಂತದಲ್ಲಿ ಜೆಡಿಎಸ್‍ನ ಹಿರಿಯ ಶಾಸಕ ಎಚ್.ಡಿ.ರೇವಣ್ಣ ಅವರು ತಾವು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಕ್ಕೆ ಸೂಚನಾ ಪತ್ರ ನೀಡಿದ್ದೇವೆ. ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದರು.ಆಡಳಿತ ಪಕ್ಷದ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಅವರು ತಾವು ಕೂಡ ಕೊಬ್ಬರಿ ಬೆಲೆ ಚರ್ಚೆಗೆ ನಿನ್ನೆ ಸೂಚನಾಪತ್ರ ನೀಡಿದ್ದೇನೆ. ಅದಕ್ಕೆ ಅವಕಾಶ ಕೊಡಿ ಎಂದು ಒತ್ತಾಯಿಸಿದರು.

ಈ ವೇಳೆ ಜೆಡಿಎಸ್‍ನವರು ತಮಗೂ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ಸಭಾಧ್ಯಕ್ಷರ ಮುಂದಿನ ಬಾವಿಗೆ ಇಳಿದು ಧರಣಿ ಆರಂಭಿಸಿದರು. ಇದರಿಂದ ಆಕ್ರೋಶಗೊಂಡ ಶಿವಲಿಂಗೇ ಗೌಡರು, ಇದು ಕೀಳುಮಟ್ಟದ ರಾಜಕಾರಣ. ನಾನು ಕೇಳಿದ ಒಂದು ಪ್ರಶ್ನೆಯ ಚರ್ಚೆಗೂ ಇಲ್ಲಿ ಅಡ್ಡಿಪಡಿಸಲಾಗುತ್ತಿದೆ. ಕೊಬ್ಬರಿ ಬೆಲೆ ಕುರಿತು ಚರ್ಚೆ ಮಾಡಿ ರೈತರಿಗೆ ಅನುಕೂಲವಾದರೆ ಅದರ ಕೀರ್ತಿ ತಮಗೆ ಬರುತ್ತದೆ ಎಂಬ ಹೊಟ್ಟೆಕಿಚ್ಚಿನಿಂದ ರೇವಣ್ಣನವರ ನೇತೃತ್ವದಲ್ಲಿ ಜೆಡಿಎಸ್‍ನವರು ಗದ್ದಲ ಮಾಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ಹೊರಹಾಕಿದರು.

ನ್ಯುಮೋನಿಯಾ ಹೆಚ್ಚಳದ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ : ಗುಂಡೂರಾವ್

ಈ ಸಂದರ್ಭದಲ್ಲಿ ಧರಣಿಯಲ್ಲಿದ್ದು ಕೊಂಡೇ ಜೆಡಿಎಸ್‍ನ ಶಾಸಕರು ಪ್ರತ್ಯಾರೋಪ ಹಾಗೂ ಟೀಕೆಗಳನ್ನು ಮಾಡಿದರು. ಇದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಆರೋಪ- ಪ್ರತ್ಯಾರೋಪಗಳು ಹೆಚ್ಚಾದವು.ಸಭಾಧ್ಯಕ್ಷರು ಹಲವು ಬಾರಿ ವಿಷಯ ಕುರಿತು ಚರ್ಚೆ ಮಾಡಿ ಎಂದು ಸಲಹೆ ನೀಡಿದರೂ ಆವೇಶಭರಿತರಾಗಿದ್ದ ಸದಸ್ಯರು ವೈಯಕ್ತಿಕ ಹಗೆತನಗಳಿಗೆ ಆದ್ಯತೆ ನೀಡಿದರು. ಹೀಗಾಗಿ ವಿಷಯಾಧರಿತ ಚರ್ಚೆಗಳು ನಡೆಯಲೇ ಇಲ್ಲ.

ಬಹಳ ಹೊತ್ತು ಇದೇ ರೀತಿಯ ಗೊಂದಲದ ವಾತಾವರಣವಿದ್ದಾಗ ಸಭಾಧ್ಯಕ್ಷರು ಬೇರೆ ವಿಷಯಗಳ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಟ್ಟರು. ಆದರೂ ಗದ್ದಲದಿಂದಾಗಿ ಸದನ ತಹಬದಿಗೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಕಲಾಪವನ್ನು ಭೋಜನಾ ವಿರಾಮಕ್ಕೆ ಮುಂದೂಡಿದರು.

RELATED ARTICLES

Latest News