ಬೆಳಗಾವಿ,ಡಿ.5- ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಸರ್ಕಾರ ಸಲಹೆ ಪಡೆದುಕೊಳ್ಳುವುದರಲ್ಲೇ ಕಾಲಾಹರಣ ಮಾಡುತ್ತಿದೆ, ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ ಎಂದು ಬಿಜೆಪಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಆಡಳಿತ ಪಕ್ಷದ ಶಾಸಕ ಎನ್.ಎ.ಹ್ಯಾರಿಸ್ ಅವರು ಪ್ರಶ್ನೆ ಕೇಳಿದರು. ಇದಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉತ್ತರಿಸಿದರು.
ಡಿ.ಕೆ.ಶಿವಕುಮಾರ್‍ರವರು ಬ್ರಾಂಡ್ ಬೆಂಗಳೂರು ಕಲ್ಪನೆಯನ್ನು ಸಾಕಾರಗೊಳಿಸಲು ಆಸಕ್ತಿ ತೋರಿಸಿದ್ದಾರೆ. ಸುಮಾರು 70 ಸಾವಿರಕ್ಕೂ ಅಕ ಸಲಹೆಗಳು ಬಂದಿವೆ. ಅವುಗಳನ್ನು ಕ್ರೂಢೀಕರಿಸಲು 8 ಶೈಕ್ಷಣಿಕ ಸಂಸ್ಥೆಗಳನ್ನು ಪಾಲುದಾರರನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ನ್ಯುಮೋನಿಯಾ ಹೆಚ್ಚಳದ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ : ಗುಂಡೂರಾವ್
ಸಚಿವರ ಉತ್ತರಕ್ಕೆ ಮುನ್ನವೇ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಯ ಸದಸ್ಯರಾದ ಭಾಸ್ಕರ್, ಸಿ.ಎನ್.ಅಶ್ವತ್ಥನಾರಾಯಣ, ವಿಪಕ್ಷ ನಾಯಕ ಆರ್.ಅಶೋಕ್, ಎಸ್.ಎಸ್.ವಿಶ್ವನಾಥ್ ಮತ್ತಿತರರು ಸರ್ಕಾರ ರಚನೆಯಾಗಿ 6 ತಿಂಗಳಾಗಿದೆ. ಇನ್ನೂ ಅಭಿವೃದ್ಧಿ ಸಲಹೆ ಪಡೆಯುವುದರಲ್ಲೇ ಕಾಲಾಹರಣ ಮಾಡಲಾಗುತ್ತಿದೆ. ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಮುನಿರತ್ನ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರು ಸಂಚಾರದಟ್ಟಣೆಯಲ್ಲಿ 3 ಗಂಟೆಗಳ ಕಾಲ ಒದ್ದಾಡಬೇಕಿದೆ. ಹೆಬ್ಬಾಳ ಮೇಲು ಸೇತುವೆ ಯೋಜನೆಯನ್ನು ಪೂರ್ಣಗೊಳಿಸಲು ಇನ್ನೂ ಎಷ್ಟು ಸಮಯ ಬೇಕು ಎಂದು ವಿಪಕ್ಷ ನಾಯಕರು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಸಚಿವರ ನೆರವಿಗೆ ಧಾವಿಸಿದ ಆಡಳಿತ ಪಕ್ಷದ ಶಾಸಕರಾದ ಎನ್.ಎ.ಹ್ಯಾರಿಸ್, ಎಚ್.ಸಿ.ಬಾಲಕೃಷ್ಣ ಮತ್ತಿತರರು 9 ವರ್ಷಗಳ ಕಾಲ ಕೇಂದ್ರದಲ್ಲಿ ಬಿಜೆಪಿ ಅಕಾರದಲ್ಲಿದೆ. ರಾಜ್ಯದಲ್ಲೂ ವಿವಿಧ ಹಂತಗಳಲ್ಲಿ 9 ವರ್ಷ ಸರ್ಕಾರ ನಡೆಸಿದ್ದೀರ. ಬೆಂಗಳೂರು ಅಭಿವೃದ್ಧಿಗೆ ನಿಮ್ಮ ಕೊಡುಗೆಗಳೇನು. ಸಮಸ್ಯೆಗಳ ಪರಿಹಾರಕ್ಕೆ ನಿಮ್ಮ ಸರ್ಕಾರ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ತಿರುಗೇಟು ನೀಡಿದರು.
ಬ್ರಾಂಡ್ ಬೆಂಗಳೂರು ಮೂಲಕ ಒಳ್ಳೆಯ ಕೆಲಸ ಮಾಡಲು ಮುಂದಾಗಿದ್ದರೂ ವಿರೋಧ ವ್ಯಕ್ತಪಡಿಸುತ್ತಿದ್ದೀರ ಎಂದು ಆಕ್ರೋಶ ಹೊರಹಾಕಿದರು. ನಾವು ಬ್ರಾಂಡ್ ಬೆಂಗಳೂರಿಗೆ ವಿರೋಧ ಮಾಡಿಲ್ಲ. ಆದರೆ ಸಲಹೆ ಪಡೆಯುವುದರಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ವಿಪಕ್ಷ ಶಾಸಕರು ಅಸಮಾಧಾನ ಹೊರಹಾಕಿದರು.ಒಂದು ಹಂತದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಮಾತಿನ ಚಕಮಕಿ ಜೋರಾಗಿತ್ತು.
ಮೇಲ್ಸೇತುವೆ ಯೋಜನೆಗೆ ಬಿಜೆಪಿಯವರು ವಿರೋಧ ಮಾಡಿತ್ತು. ಈಗ ವಿಮಾನನಿಲ್ದಾಣ ರಸ್ತೆಯಲ್ಲಿ ಸಂಚಾರದ ಸಮಸ್ಯೆಯಾಗುತ್ತಿದೆ ಎಂದು ಮಾತನಾಡುತ್ತಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.ಹೆಬ್ಬಾಳ ಮೇಲು ಸೇತುವೆ ಯೋಜನೆಗೆ ಯಾವುದೇ ವಿರೋಧ ಇಲ್ಲ. ಹೆಬ್ಬಾಳದಿಂದ ಚಾಲುಕ್ಯ ವೃತ್ತದವರೆಗೂ ಸ್ಟೀಲ್ ಬ್ರಿಡ್ಜ್ ಮಾಡಲು ಬೆಂಗಳೂರಿನ ಜನರೇ ವಿರೋಧ ವ್ಯಕ್ತಪಡಿಸಿದ್ದರು ಎಂದು ಬಿಜೆಪಿ ಶಾಸಕರು ಸ್ಪಷ್ಟನೆ ನೀಡಿದರು.
ಎಂಎಲ್‌ಸಿ ಚೆನ್ನರಾಜ್ ಹಟ್ಟಿಹೊಳಿ ಬಂಧನಕ್ಕೆ ವಿಜಯೇಂದ್ರ ಒತ್ತಾಯ
ಆರೋಪ-ಪ್ರತ್ಯಾರೋಪಗಳ ಬಳಿಕ ಸಮಜಾಯಿಷಿ ನೀಡಿದ ರಾಮಲಿಂಗಾರೆಡ್ಡಿಯವರು ಬ್ರಾಂಡ್ ಬೆಂಗಳೂರು ಪರಿಕಲ್ಪನೆಯ ಜಾರಿಗೆ ಉಪಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ. ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ಅಸ್ತಿತ್ವದಲ್ಲಿದೆ. ಶೀಘ್ರವೇ ಯೋಜನೆ ಜಾರಿಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.