ಬೆಳಗಾವಿ,ಡಿ.6- ಸಾರಿಗೆ ನೌಕರರಿಗೆ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಸರಿಯಾಗಿ ವೇತನವನ್ನು ನೀಡಲಾಗುತ್ತಿದ್ದು, ವಿಳಂಬವಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ವಿಧಾನಪರಿಷ್ನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಪ್ರಶ್ನೋತ್ತರ ಅವಯಲ್ಲಿ ಬಿಜೆಪಿ ಸದಸ್ಯ ಕೆ.ಎಸ್.ನಳೀನ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಎಸ್ಆರ್ಟಿಸಿಯಲ್ಲಿ ಪ್ರತಿ ತಿಂಗಳು 1ನೇ ತಾರೀಖು, ಬಿಎಂಟಿಸಿಯಲ್ಲಿ 5ನೇ ತಾರೀಖು ಹಾಗೂ ವಾಯುವ್ಯ ಮತ್ತು ಈಶಾನ್ಯ ನಿಗಮಗಳಲ್ಲಿ ತಿಂಗಳ 10ರೊಳಗೆ ವೇತನವನ್ನು ಒದಗಿಸುತ್ತಿದ್ದೇವೆ. ವಿಳಂಬ ಮಾಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ವೇತನವನ್ನು ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.
ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆ ಒಟ್ಟು ನಾಲ್ಕು ನಿಗಮಗಳಿಂದ 5 ಸಾವಿರದ 200 ಕೋಟಿ ಸಾಲ ಇದೆ. ಕೇಂದ್ರ ಸರ್ಕಾರ 9 ಸಾವಿರ ಕೋಟಿ ನೀಡದಿದ್ದರೆ ಸಾಲದ ಮೊತ್ತ 15 ಸಾವಿರ ಕೋಟಿಯಾಗುತ್ತಿತ್ತು ಎಂದರು.
ನಮ್ಮ ಸರ್ಕಾರ ಅಕಾರಕ್ಕೆ ಬಂದ ಮೇಲೆ 9 ಸಾವಿರ ನೌಕರರನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿದ್ದು, 5 ಸಾವಿರ ಹೊಸದಾಗಿ ಬಸ್ಗಳನ್ನು ಖರೀದಿ ಮಾಡಲು ಮುಂದಾಗಿದ್ದೇವೆ. ಹಿಂದಿನ ಸರ್ಕಾರ ಒಂದೇ ಒಂದು ಬಸ್ನ್ನು ಖರೀದಿ ಮಾಡಿರಲಿಲ್ಲ. 13,088 ನೌಕರರು ಸೇವೆಯಿಂದ ನಿವೃತ್ತರಾದರೂ ಒಬ್ಬ ನೌಕರರನ್ನು ಕೂಡ ನೀವು ಏಕೆ ನೇಮಕ ಮಾಡಿಕೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದರು.
ರಾಜ್ಯದ ಮದರಸಾಗಳಲ್ಲಿ ಕನ್ನಡ, ಗಣಿತ, ವಿಜ್ಞಾನ ಬೋಧನೆ ಕಡ್ಡಾಯ
ಬಸ್ಗಳನ್ನು ಖರೀದಿ ಮಾಡುವುದು ನಿರಂತರ ಪ್ರಕ್ರಿಯೆ, ಹಳೆ ಬಸ್ಗಳ ಸಾಮಥ್ರ್ಯ ಮುಗಿದ ನಂತರ ಹೊಸ ಬಸ್ಗಳನ್ನು ಖರೀದಿಸಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಬಸ್ ಖರೀದಿಗೆ ಅವಕಾಶ ಕಲ್ಪಿಸಿದ್ದಾರೆ. ಇದರಿಂದ ಇನ್ನಷ್ಟು ಸುಧಾರಣೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಹಿಂದಿನ ಸರ್ಕಾರ ಕೊರೋನ ಕಾರಣದಿಂದ ಬಸ್ ಖರೀದಿ ಮಾಡಲಿಲ್ಲ. ಅದೇ ಕಾಲಕ್ಕೆ 3800 ಬಸ್ ರೂಟ್ಗಳನ್ನು ರದ್ದುಪಡಿಸಿತ್ತು. ಈಗ ಹೊಸದಾಗಿ ನಾವು ಬಸ್ ರೂಟ್ಗಳನ್ನು ಸೇರ್ಪಡೆ ಮಾಡುತ್ತಿದ್ದೇವೆ.
ಈ ಹಿಂದೆ ಶಕ್ತಿ ಯೋಜನೆ ಬರುವ ಮುನ್ನ ನಾಲ್ಕು ನಿಗಮಗಳಲ್ಲಿ ಅಂದಾಜು ಸರಾಸರಿ 85 ಲಕ್ಷ ಜನರು ಪ್ರತಿದಿನ ಪ್ರಯಾಣಿಸುತ್ತಿದ್ದರು. ಈ ಯೋಜನೆ ಆರಂಭವಾದ ನಂತರ ಇದರ ಸಂಖ್ಯೆ ದಿನಕ್ಕೆ 1.6 ಕೋಟಿವರೆಗೂ ಏರಿಕೆಯಾಗಿದೆ. ಇದು ಇನ್ನಷ್ಟು ಹೆಚ್ಚಳವಾಗುವ ಸಂಭವವಿದೆ ಎಂದು ಹೇಳಿದರು.
ಶಕ್ತಿ ಯೋಜನೆ ಆರಂಭವಾದಾಗಿನಿಂದ ನಾಲ್ಕು ನಿಗಮಗಳಿಂದ ಪ್ರತಿದಿನ ಸಾರಿಗೆ ಸಂಸ್ಥೆಗೆ 5.92 ಕೋಟಿ ರೂ. ಆದಾಯ ಬರುತ್ತಿದೆ. ಈ ಯೋಜನೆಗೆ ಬಜೆಟ್ನಲ್ಲಿ 2,800 ಕೋಟಿ ರೂ. ಅನುದಾನ ನೀಡಿದ್ದೆವು. ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಅನುದಾನದ ಮೊತ್ತವನ್ನು ನಾಲ್ಕುವರೆ ಸಾವಿರ ಕೋಟಿಗೆ ಹೆಚ್ಚಳ ಮಾಡಬೇಕೆಂದು ಕೋರಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ.