Wednesday, December 3, 2025
Homeರಾಜಕೀಯಸಿಎಂ-ಡಿಸಿಎಂ ಕದನ ವಿರಾಮ ಘೋಷಣೆ ಬಳಿಕವೂ ತೆರೆಮರೆಯಲ್ಲಿ ಸಿಎಂ ಕುರ್ಚಿಗಾಗಿ ಕಸರತ್ತು

ಸಿಎಂ-ಡಿಸಿಎಂ ಕದನ ವಿರಾಮ ಘೋಷಣೆ ಬಳಿಕವೂ ತೆರೆಮರೆಯಲ್ಲಿ ಸಿಎಂ ಕುರ್ಚಿಗಾಗಿ ಕಸರತ್ತು

Deputy Chief Minister D.K. Shivakumar's behind-the-scenes attempt to secure the Chief Minister's post

ಬೆಂಗಳೂರು, ಡಿ.1– ಅಧಿಕಾರ ಹಂಚಿಕೆಯ ಸೂತ್ರಕ್ಕೆ ಸಂಬಂಧಪಟ್ಟಂತೆ ತಾತ್ಕಾಲಿಕವಾಗಿ ಕದನ ವಿರಾಮ ಘೋಷಣೆಯಾಗಿದ್ದರೂ, ಮುಖ್ಯಮಂತ್ರಿಯ ಹುದ್ದೆ ಗಿಟ್ಟಿಸಿಕೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತೆರೆಮರೆಯ ಕಸರತ್ತು ಮುಂದುವರೆಸಿದ್ದಾರೆ.

ಖಾಸಗಿ ಕಾರ್ಯಕ್ರಮಕ್ಕಾಗಿ ದೆಹಲಿಯಲ್ಲಿ ಮೂರು ದಿನಗಳಿಂದ ಬೀಡು ಬಿಟ್ಟಿದ್ದ ಮಾಜಿ ಸಂಸದ ಡಿ.ಕೆ.ಶಿವಕುಮಾರ್‌ ಅವರ ಸಹೋದರ ಡಿ.ಕೆ.ಸುರೇಶ್‌ ವರಿಷ್ಠರನ್ನು ಭೇಟಿ ಮಾಡುವ ವಿಫಲ ಯತ್ನ ನಡೆಸಿ, ಬರಿಗೈಯಲ್ಲಿ ವಾಪಾಸ್ಸಾಗಿದ್ದಾರೆ.

ದೆಹಲಿಯಲ್ಲಿ ಯಾವ ನಾಯಕರು ಭೇಟಿಗೆ ಸಿಕ್ಕಿಲ್ಲ. ಇದೇ ತಿಂಗಳ 14ರಂದು ದೆಹಲಿಯಲ್ಲಿ ಮತಗಳ್ಳತನ ಕುರಿತಂತೆ ಕಾಂಗ್ರೆಸ್‌‍ ವತಿಯಿಂದ ಬೃಹತ್‌ ಪ್ರತಿಭಟನೆ ಆಯೋಜಿಸಲಾಗಿದೆ. ಅದರಲ್ಲಿ ಭಾಗವಹಿಸಲು ಎಲ್ಲಾ ರಾಜ್ಯಗಳ ಶಾಸಕಾಂಗ ಪಕ್ಷದ ನಾಯಕರು, ಪ್ರದೇಶ ಕಾಂಗ್ರೆಸ್‌‍ ಅಧ್ಯಕ್ಷರು ದೆಹಲಿಗೆ ಆಗಮಿಸುತ್ತಿದ್ದಾರೆ. ಕರ್ನಾಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್‌ ಕೂಡ ದೆಹಲಿಗೆ ತೆರಳುತ್ತಿದ್ದಾರೆ. ಆ ದಿನ ಆಯ್ಕೆ ಹೈಕಮಾಂಡ್‌ ನಾಯಕರ ಜೊತೆ ಮಹತ್ವದ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಇಂದಿನಿಂದ ಡಿಸೆಂಬರ್‌ 19 ರ ವರೆಗೂ ಸಂಸತ್‌ ಅಧಿವೇಶನ ನಡೆಯಲಿದ್ದು, ಕಾಂಗ್ರೆಸ್‌‍ ಪಕ್ಷದ ಎಲ್ಲಾ ನಾಯಕರು ಅದರಲ್ಲಿ ಬಿಜಿಯಾಗಿರುವುದರಿಂದ ಕರ್ನಾಟಕದ ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆ ನಡೆಸಲು ದೆಹಲಿಯ ನಾಯಕರು ಲಭ್ಯವಿಲ್ಲ ಎಂಬ ಸಂದೇಶ ರವಾನೆಯಾಗಿದೆ.
ನಿನ್ನೆ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌‍ ಸಂಸದೀಯ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಸೋನಿಯಾ ಗಾಂಧಿಯವರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಅವರ ನಿಲುವುಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು ಇಬ್ಬರು ನಾಯಕರೊಂದಿಗೆ ಚರ್ಚೆ ನಡೆಸಿ ಗೊಂದಲಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ರಾಹುಲ್‌ ಗಾಂಧಿ ಬ್ಯಾಟಿಂಗ್‌ ಮಾಡುತ್ತಿದ್ದು, ಡಿ.ಕೆ.ಶಿವಕುಮಾರ್‌ ತಮಗೆ ಮುಖ್ಯಮಂತ್ರಿ ಸ್ಥಾನ ಬೇಕು ಎಂದು ಬಿಗಿಪಟ್ಟು ಹಿಡಿದಿದ್ದಾರೆ. ಈ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಲು ಧರ್ಮ ಸಂಕಟವಾಗುತ್ತಿದೆ. ಹೀಗಾಗಿ ರಾಹುಲ್‌ ಗಾಂಧಿಯವರ ಜೊತೆ ಚರ್ಚೆ ಮಾಡಿ ಕರ್ನಾಟಕದ ವಿಷಯದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸಹಕರಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಡಿಸೆಂಬರ್‌ ಅಂತ್ಯದವರೆಗೂ ಸಂಸತ್‌ ಅಧಿವೇಶನ ಹಾಗೂ ಇತರ ಕಾರಣಗಳಿಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಜನವರಿ ಮೊದಲ ವಾರದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಬಹುದು ಎಂದು ಸೋನಿಯಾ ಗಾಂಧಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Latest News