ಬೆಂಗಳೂರು, ಮಾ.8- ಹೈಕಮಾಂಡ್ ಮೇಲೆ ವಿಶ್ವಾಸವಿದೆ. ಅವಕಾಶ ಕೊಟ್ಟರೆ ಮುಂದಿನ ಎರಡು ಬಜೆಟ್ಗಳನ್ನು ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿ ಪ್ರಯಾಣ ಕೈಗೊಂಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯಲ್ಲಿ ಭಾಗವಹಿಸಿದ ಬಳಿಕ ಡಿ.ಕೆ.ಶಿವಕುಮಾರ್ ಅವರು ಅಲ್ಲಿಂದ ನೇರವಾಗಿ ವಿಶೇಷ ವಿಮಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಅವರೊಂದಿಗೆ ದೆಹಲಿಗೆ ಪ್ರಯಾಣಿಸುತ್ತಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ತೆರಳುತ್ತಿರುವುದಾಗಿ ಡಿ.ಕೆ.ಶಿವಕುಮಾರ್ ಕಚೇರಿ ಮಾಹಿತಿ ನೀಡಿದೆ. ಈ ಭೇಟಿ ರಾಜಕೀಯವಾಗಿ ನಾನಾ ರೀತಿಯ ಚರ್ಚೆಗಳನ್ನು ಹುಟ್ಟು ಹಾಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಜೆಟ್ ಮಂಡನೆಗೆ ಅವಕಾಶ ನೀಡಬಾರದು. ತಾವೇ ಬಜೆಟ್ ಮಂಡಿಸುವುದಾಗಿ ಡಿ.ಕೆ.ಶಿವಕುಮಾರ್ ಕಳೆದ ಡಿಸೆಂಬರ್ನಲ್ಲಿ ಪಟ್ಟುಹಿಡಿದಿದ್ದರು. ಆದರೆ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರ ಹಠಕ್ಕೆ ಜಗ್ಗಿರಲಿಲ್ಲ. ನಿರೀಕ್ಷೆಯಂತೆ ಸಿದ್ದರಾಮಯ್ಯ ಬಜೆಟ್ ಮಂಡಿಸಿ ಆಗಿದೆ. ಈಗಲಾದರೂ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಡಬೇಕು. ಈ ನಿಟ್ಟಿನಲ್ಲಿ ಹೈಕಮಾಂಡ್ ನಿರ್ದಿಷ್ಟವಾದ ಸೂಚನೆ ನೀಡಬೇಕು ಎಂಬುದು ಡಿ.ಕೆ.ಶಿವಕುಮಾರ್ ಅವರ ಪ್ರತಿಪಾದನೆಯಾಗಿದೆ.
ಸಿದ್ದರಾಮಯ್ಯ ಅವರು ಪದೇ ಪದೇ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ. ಹೈಕಮಾಂಡ್ ಬಿಡು ಎಂದರೆ ಬಿಡುತ್ತೇನೆ, ಇರು ಎಂದರೆ ಇರುತ್ತೇನೆ ಎಂದು ಹೇಳುತ್ತಲೇ ಬಂದಿದ್ದಾರೆ. ಅಧಿಕಾರ ಹಂಚಿಕೆ ರಾಜ್ಯ ಮಟ್ಟದಲ್ಲಿ ತೀರ್ಮಾನವಾಗಲು ಸಾಧ್ಯವಿಲ್ಲ, ದೆಹಲಿಯಲ್ಲೇ ಅದರಲ್ಲೂ ಹೈಕಮಾಂಡ್ ಸಮುಖದಲ್ಲೇ ಇತ್ಯರ್ಥವಾಗಬೇಕೆಂಬುದು ಖಚಿತವಾಗಿದೆ. ಹೀಗಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ಡಿ.ಕೆ.ಶಿವಕುಮಾರ್ ನಾನಾ ರೀತಿಯ ಪ್ರಯತ್ನ ಮುಂದುವರೆಸಿದ್ದಾರೆ.
ಈವರೆಗೂ ಡಿ.ಕೆ.ಶಿವಕುಮಾರ್ ಅವರಿಗೆ ರಾಹುಲ್ಗಾಂಧಿ ಭೇಟಿಯಾಗಲು ಅವಕಾಶ ನೀಡಿಲ್ಲ. ರಾಹುಲ್ಗಾಂಧಿ ಹೇಳಿದರೆ ನಾಯಕತ್ವ ತ್ಯಜಿಸುವುದಾಗಿ ಸಿದ್ದರಾಮಯ್ಯ ಅವರು ಪದೇ ಪದೇ ಹೇಳುತ್ತಿದ್ದಾರೆ. ಆದರೆ ರಾಹುಲ್ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡುವ ಲಕ್ಷಣಗಳು ಸಧ್ಯಕ್ಕೆ ಕಾಣುತ್ತಿಲ್ಲ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಡಿ.ಕೆ.ಶಿವಕುಮಾರ್ ನಾನಾ ರೀತಿಯ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ. ಅದರೆ ಇದು ಮಲ್ಲಿಕಾರ್ಜುನ್ ಖರ್ಗೆ ಅವರ ಕೈಮೀರಿ ಹೋಗಿರುವುದರಿಂದ ಹೈಕಮಾಂಡ್ ಕೂಡ ಸಂಕಷ್ಟಕ್ಕೆ ಸಿಲುಕಿದೆ. ಪಟ್ಟು ಬಿಡದ ಡಿ.ಕೆ.ಶಿವಕುಮಾರ್ ಶತಾಯಗತಾಯ ಅಧಿಕಾರ ದಕ್ಕಿಸಿಕೊಳ್ಳಲೇ ಬೇಕೆಂದು ಲಾಬಿ ಮುಂದುವರೆಸಿದ್ದಾರೆ.
ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಸಹನೆಯಿಂದ ಇರುವಂತೆ ವರಿಷ್ಠ ನಾಯಕರು ಹಲವಾರು ಬಾರಿ ಸೂಚನೆ ನೀಡಿದ್ದಾರೆ. ಅದಕ್ಕೆ ಡಿ.ಕೆ.ಶಿವಕುಮಾರ್ ಒಪ್ಪುತ್ತಿಲ್ಲ. ಈಗಾಗಲೇ ಎರಡು ಮುಕ್ಕಾಲು ವರ್ಷ ಕಳೆದುಹೋಗಿದೆ. ಬಾಕಿ ಇರುವ ಅವಧಿಗೆ ತಮಗೆ ಅವಕಾಶ ಸಿಗಬೇಕು. ಇಲ್ಲವಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಹಾನಿಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಬಿಎಯ ವ್ಯಾಪ್ತಿಯ 5 ಮಹಾನಗರ ಪಾಲಿಕೆಗಳು ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಗಳು ನಡೆಯಬೇಕಿದೆ. ಈ ಸಂದರ್ಭದಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕಾದರೆ ಸಮರ್ಥ ನಾಯಕತ್ವ ಬೇಕು ಎಂಬ ಬೇಡಿಕೆಯನ್ನು ಡಿ.ಕೆ.ಶಿವಕುಮಾರ್ ಮುಂದಿಟ್ಟಿದ್ದಾರೆ. ಈಗಾಗಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ, ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾಗಾಂಧಿ ಸೇರಿದಂತೆ ಹಲವರನ್ನು ಭೇಟಿ ಮಾಡಿ ಡಿ.ಕೆ.ಶಿವಕುಮಾರ್ ಒತ್ತಡ ಹೇರುವ ಪ್ರಯತ್ನ ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಎಲ್ಲವೂ ರಾಹುಲ್ಗಾಂಧಿ ಅವರ ಮೇಲೆ ಅವಲಂಬಿತವಾಗಿದೆ.
ರಾಹುಲ್ಗಾಂಧಿ ಮಾತ್ರ ಕೈಗೆ ಸಿಗದಂತೆ ಆಟವಾಡುತ್ತಿದ್ದಾರೆ. ಹೈಕಮಾಂಡ್ ಆಟ ಒಂದು ಕಡೆಯಾದರೆ, ಡಿ.ಕೆ.ಶಿವಕುಮಾರ್ ಹಠ ಮತ್ತೊಂದು ಕಡೆಯಾಗಿದೆ. ರಾಜ್ಯ ರಾಜಕೀಯದಲ್ಲಿ ಸುಲಭಕ್ಕೆ ಸೋಲು ಒಪ್ಪಿಕೊಳ್ಳದ ಡಿ.ಕೆ.ಶಿವಕುಮಾರ್ ಮರಳಿ ಯತ್ನವ ಮಾಡು ಎನ್ನುವಂತೆ ಬಜೆಟ್ ಮಂಡನೆ ಬೆನ್ನಲ್ಲೇ ದೆಹಲಿ ಯಾತ್ರೆ ನಡೆಸಿದ್ದಾರೆ. ಇವರ ಹಿಂದೆ ಕೆಲವು ಶಾಸಕರೂ ಕೂಡ ಡಿ.ಕೆ.ಶಿವಕುಮಾರ್ ಪರವಾಗಿ ದೆಹಲಿಗೆ ಹೋಗುವ ಸಾಧ್ಯತೆಯಿದೆ.
