ಬೆಳಗಾವಿ,ಡಿ.8- ಕಳೆದ ಎರಡು ಬಂಡವಾಳ ಹೂಡಿಕೆದಾರರ ಸಮಾವೇಶಗಳಲ್ಲಿ ಮಾಡಿಕೊಳ್ಳಲಾಗಿರುವ ಒಪ್ಪಂದಗಳು ಹಂತಹಂತವಾಗಿ ಜಾರಿಯಾಗಲಿದ್ದು, ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಬಿಜೆಪಿಯ ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಪ್ರಶ್ನೆ ಕೇಳಿ, ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಗಳಿಗಾಗಿ 88 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಆದರೆ ಹೂಡಿಕೆಯಾಗಿರುವುದು 94 ಕೋಟಿ ರೂ.ಗಳು ಮಾತ್ರ. ಇದು ಸರಿಯೇ? ಎಂದು ಆಕ್ಷೇಪಿಸಿದ್ದಲ್ಲದೆ, 1995 ರಲ್ಲಿ ಬಿಡದಿಯ ಬಳಿ ಟಯೋಟಾ ಕಂಪನಿಗೆ 400 ಎಕರೆ ಜಮೀನು ಮತ್ತು 16 ವರ್ಷ ತೆರಿಗೆ ಬಾಕಿ ಉಳಿಸಿಕೊಳ್ಳಲು ಅನುಕೂಲ ಕಲ್ಪಿಸಲಾಗಿತ್ತು.
ಟಯೋಟಾ ಸಂಸ್ಥೆಯ ಬಳಿ 8,500 ಸಾವಿರ ಕೋಟಿ ರೂ.ಗಳಷ್ಟು ತೆರಿಗೆ ಬಾಕಿ ಉಳಿದಿದೆ. ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಹಿ ಹಾಕಿರುವ ಕಂಪನಿಗಳಿಗೆ 16 ಸಾವಿರ ಎಂಎಲ್‍ಡಿ ನೀರು ಪೂರೈಸುವುದಾಗಿ ತಿಳಿಸಲಾಗಿದೆ. ನಮ್ಮಲ್ಲಿ ಕುಡಿಯಲಿಕ್ಕೇ ನೀರಿಲ್ಲ. ಇಷ್ಟೆಲ್ಲಾ ಸೌಲಭ್ಯ ಮತ್ತು ಸವಲತ್ತುಗಳನ್ನು ನೀಡಿ ರತ್ನಗಂಬಳಿ ಹಾಸಿ ಕೈಗಾರಿಕೆಗಳನ್ನು ಆಹ್ವಾನಿಸಲಾಗುತ್ತಿದೆ. ಆದರೆ ಅದರಿಂದ ಪ್ರಯೋಜನವೇನು? ಸ್ಥಳೀಯರಿಗೆ ಉದ್ಯೋಗ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಎಂ.ಬಿ.ಪಾಟೀಲ್, 2022 ರ ನವೆಂಬರ್ 2 ರಿಂದ 4 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ ನಡೆಸಲಾಯಿತು. ಅದರಲ್ಲಿ 57 ಕಂಪನಿಗಳೊಂದಿಗೆ 5.41 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ 7 ಯೋಜನೆಗಳಿಗೆ ಏಕಗವಾಕ್ಷಿ ಸಮಿತಿ ಅನುಮೋದನೆ ನೀಡಿದೆ. ಭೂಮಿ, ನೀರು, ವಿದ್ಯುತ್ ಪೂರೈಕೆಯಂತಹ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಸುಮಾರು 75 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ವಿವರಿಸಿದರು.
ಸಿಖ್ ಪ್ರತ್ಯೇಕತಾವಾದಿ ಹತ್ಯೆ ಪ್ರಕರಣದ ತನಿಖೆಯಾಗಲೇಬೇಕು : ಅಮೆರಿಕ
2022 ರ ಅಕ್ಟೋಬರ್ 28 ರಂದು 12.23 ಲಕ್ಷ ಕೋಟಿ ರೂ. ಖರ್ಚು ಮಾಡಿ ಹುಬ್ಬಳ್ಳಿಯಲ್ಲಿ ಎಫ್‍ಎಂಸಿಜಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗಿದೆ. ಅಲ್ಲಿ 16 ಕಂಪನಿಗಳಿಂದ 1275 ಕೋಟಿ ರೂ. ಬಂಡವಾಳ ಹೂಡಿಕೆಯ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅವುಗಳ ಪೈಕಿ 3 ಯೋಜನೆಗಳಿಗೆ ಏಕಗವಾಕ್ಷಿ ಯೋಜನೆಗಳಡಿ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.
ಬೃಹತ್ ಯೋಜನೆ ಸ್ಥಾಪನೆಯಾಗಲು ಮೂರ್ನಾಲ್ಕು ವರ್ಷಗಳ ಸಮಯಾವಕಾಶ ಬೇಕಾಗುತ್ತದೆ. ಅದರಲ್ಲಿ ಶೇ.38 ರಷ್ಟು ಯೋಜನೆಗಳು ಹಸಿರು ಇಂಧನ ವಲಯಕ್ಕೆ ಸಂಬಂಧಪಟ್ಟದ್ದಾಗಿವೆ ಎಂದು ವಿವರಿಸಿದರು. ಸರೋಜಿನಿ ಮಹಿಷಿ ವರದಿಯ ಪ್ರಕಾರ, ಡಿ ವರ್ಗಗಳ ಹುದ್ದೆಗಳಿಗೆ ಶೇ.100 ರಷ್ಟು ಮೀಸಲಾತಿ ನೀಡಬೇಕು. ಒಟ್ಟಾರೆ ಶೇ.70 ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡಬೇಕಾಗಿದೆ ಎಂದರು.
2018 ರಿಂದ ಇಲ್ಲಿಯವರೆಗೆ ವಿದೇಶಗಳಲ್ಲಿ 403 ಭಾರತೀಯ ವಿದ್ಯಾರ್ಥಿಗಳ ಸಾವು
ಸರ್ವತಾ ಸಂಸ್ಥೆಯ ಬಗ್ಗೆ ಶಾಸಕರು ನೀಡಿರುವ ಮಾಹಿತಿಯನ್ನು ಪರಿಶೀಲನೆ ನಡೆಸಿ ಅಗತ್ಯಬಿದ್ದರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.