ನೆಲಮಂಗಲ,ಡಿ.9- ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಎಂ.ಲೀಲಾವತಿಯವರ ನಿಧನಕ್ಕೆ ನಾಡಿನ ಗಣ್ಯಮಾನ್ಯರು ಕಂಬನಿ ಮಿಡಿದಿದ್ದು, ಚಿತ್ರರಂಗ, ರಾಜಕೀಯ ಕ್ಷೇತ್ರದ ಗಣ್ಯರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದಿದ್ದಾರೆ.
ಪಟ್ಟಣದ ಅಂಬೇಡ್ಕರ್ ಮೈದಾನದಲ್ಲಿ ಬೆಳಿಗ್ಗೆ 5.30 ರಿಂದ 10.45 ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನೆಲಮಂಗಲ, ಸೋಲದೇವನಹಳ್ಳಿ, ಬೆಂಗಳೂರು, ತುಮಕೂರು ಸೇರಿದಂತೆ ವಿವಿಧ ಭಾಗಗಳಿಂದ ಅಭಿಮಾನಿಗಳು ಹಾಗೂ ಕಲಾವಿದರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಅವರ ಪುತ್ರ ವಿನೋದ್ ರಾಜ್‍ರ ಒಪ್ಪಿಗೆಯಂತೆ 11 ಗಂಟೆಯಿಂದ 2 ಗಂಟೆವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಬಯಲು ರಂಗಮಂದಿರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮುಖ್ಯಮಂತ್ರಿ ಸಿ.ಎಂ.ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ವಿ.ಸೋಮಣ್ಣ, ಚಿತ್ರರಂಗ ಕಲಾವಿದರಾದ ಸುಧಾರಾಣಿ, ಮಾಳವಿಕ, ಶ್ರೀನಾಥ್, ಉಪೇಂದ್ರ, ಉಮಾಶ್ರೀ, ದ್ವಾರಕೀಶ್ ಸೇರಿದಂತೆ ಅನೇಕ ಗಣ್ಯರು, ಹಿರಿಯ ಕಲಾವಿದರು ಹಾಗೂ ಅಭಿಮಾನಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಲೀಲಾವತಿಯವರ ಅಂತಿಮ ದರ್ಶನ ಪಡೆದು ಹಿರಿಯ ನಟಿಗೆ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಇವರ ನಿಧನದಿಂದಾಗಿ ಚಿತ್ರರಂಗ ಅಮೂಲ್ಯರತ್ನವೊಂದನ್ನು ಕಳೆದುಕೊಂಡಿದೆ. ಕನ್ನಡ ಸೇರಿದಂತೆ ಇತರೆ ಭಾಷೆ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ತಾರೆ ಎನಿಸಿಕೊಂಡಿದ್ದರು. ಅವರ ಸಾಮಾಜಿಕ ಕಾರ್ಯಗಳು ಎಲ್ಲರಿಗೂ ಆದರ್ಶಪ್ರಾಯವಾಗಿವೆ. ಅವರ ನಿಧನದಿಂದ ಕನ್ನಡ ಸಿನಿಮಾ ಲೋಕಕ್ಕೆ ಅಪಾರ ನಷ್ಟವಾಗಿದೆ. ಇವರ ಪುತ್ರ ವಿನೋದ್‍ರಾಜ್ ಅವರಿಗೆ ದುಃಖವನ್ನು ಭರಿಸುವಂತಹ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ನಟ ಉಪೇಂದ್ರ ಲೀಲಾವತಿಯವರ ಅಂತಿಮ ದರ್ಶನ ಪಡೆದು ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಶ್ರೇಷ್ಠ ನಟಿ ಲೀಲಾವತಿಯವರನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ. ಆಸ್ಪತ್ರೆ ಸೇರಿದಂತೆ ಸಾಕಷ್ಟು ಸಮಾಜಸೇವೆ ಮಾಡಿದ್ದಾರೆ. ಅವರ ಅಗಲಿಕೆ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಲಿದೆ ಎಂದು ಕಂಬನಿ ಮಿಡಿದರು.
ಹಿರಿಯ ನಟ ಅನಂತನಾಗ್ ಲೀಲಾವತಿಯವರ ನಿಧನಕ್ಕೆ ಕಂಬನಿ ಮಿಡಿದರು. ನಾನು ಅವರನ್ನು ಎರಡನೇ ತಾಯಿಯನ್ನಾಗಿ ನೋಡಿದ್ದೇನೆ. ಅದೇ ರೀತಿ ಪ್ರೀತಿ ಗೌರವವನ್ನು ಕೂಡ ಕೊಟ್ಟಿದ್ದೇನೆ. ಅವರು ನನಗೆ ಮೊದಲು ಸಿಕ್ಕಿದ್ದು ನನ್ನ ಸಿನಿಮಾದ ತಾಯಿಯ ಪಾತ್ರದಲ್ಲಿ. ನಂತರ ಸಹೋದರಿಯಾಗಿ ನಟಿಸಿದ್ದಾರೆ. ಇಂದು ಅವರು ನಮ್ಮೊಂದಿಗೆ ಇಲ್ಲದಿರುವುದು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಲೀಲಾವತಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಬಹುಮುಖ ಪ್ರತಿಭೆಯೊಂದಿಗೆ ಬೆಳ್ಳಿಪರದೆಯನ್ನು ಅಲಂಕರಿಸಿದ ಅವರು ವಿವಿಧ ಪಾತ್ರಗಳು ಹಾಗೂ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಅವರ ಚಿತ್ರಸೇವೆ ನಿಜಕ್ಕೂ ಪ್ರಶಂಸಾರ್ಹ. ಪುತ್ರ, ಕುಟುಂಬ ಹಾಗೂ ಅಭಿಮಾನಿಗಳಿಗೆ ಲೀಲಾವತಿಯ ಅಗಲಿಕೆಗೆ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.