ಬೆಂಗಳೂರು,ಡಿ.1- ಕಾರಾಗೃಹಗಳಲ್ಲಿನ ವ್ಯವಸ್ಥೆ ಮತ್ತು ಅವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲು ರಚಿಸ ಲಾಗಿರುವ ಉನ್ನತಾಧಿಕಾರಿಗಳ ಸಮಿತಿ ಇತ್ತೀಚೆಗೆ ದೆಹಲಿಯ ತಿಹಾರ್ ಜೈಲಿಗೂ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅಧ್ಯಯನ ನಡೆಸಿ ಬಂದಿದೆ.
ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಹಿತೇಂದ್ರ ಅವರ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗಿದೆ. ಸಮಿತಿ ನೇಮಕವಾದ ನಂತರ ಮೊದಲಿಗೆ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಿದೆ.
ನಂತರ ಮೈಸೂರು, ತುಮಕೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವಾರು ಜೈಲುಗಳಿಗೆ ಭೇಟಿ ನೀಡಿ ವ್ಯವಸ್ಥೆ ಹಾಗೂ ಅವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದೆ.ಸರ್ಕಾರ ನಿಗಧಿ ಪಡಿಸಿರುವ ಅವಧಿದೊಳಗೆ ಕಾರಾಗೃಹಗಳ ಬಗ್ಗೆ ಅಧ್ಯಯನ ನಡೆಸಿ, ವರದಿ ನೀಡಲಾಗುವುದು ಎಂದು ಅವರು ಈ ಸಂಜೆಗೆ ತಿಳಿಸಿದ್ದಾರೆ.
ಇತ್ತೀಚೆಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯದ ಬಗ್ಗೆ ಹಾಗೂ ರೌಡಿಗಳು ಮದ್ಯಸೇವಿಸಿ ನೃತ್ಯಮಾಡುತ್ತಿದ್ದ ವಿಡಿಯೋ, ಮೊಬೈಲ್‌ನಲ್ಲಿ ಇಬ್ಬರು ಕುಖ್ಯಾತ ಆರೋಪಿಗಳು ಮಾತನಾಡುತ್ತಿರುವ ದೃಶ್ಯ ಹಾಗೂ ಮೊಬೈಲ್‌ಗಳು, ಸಿಮ್‌ಗಳು, ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿ ಕಾರಾಗೃಹಗಳಲ್ಲಿ ಪರಿಶೀಲನೆ ನಡೆಸಲು ಸರ್ಕಾರ ಈ ಸಮಿತಿ ರಚಿಸಿದೆ.
