Wednesday, December 3, 2025
Homeರಾಜ್ಯಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಬೃಹತ್‌ ಪ್ರತಿಭಟನೆ

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಬೃಹತ್‌ ಪ್ರತಿಭಟನೆ

Massive protest in Dharwad demanding filling of vacant posts

ಧಾರವಾಡ, ಡಿ.1- ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಎರಡೂವರೆ ಲಕ್ಷ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ, ಸಾವಿರಾರು ಉದ್ಯೋಗ ಆಕಾಂಕ್ಷಿಗಳು ಇಂದಿಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು.

ಧಾರವಾಡದ ಜನಸಾಮಾನ್ಯರ ವೇದಿಕೆ ಸೇರಿದಂತೆ ಇತರ ಸಂಘಟನೆಗಳು ಕರೆ ನೀಡಿದ್ದ ಬೃಹತ್‌ ಪ್ರತಿಭಟನೆಗೆ ಪೊಲೀಸರು ನ್ನಿನೆಯೇ ಅನುಮತಿ ನಿರಾಕರಿಸಿದರು. ಆದರೂ ಜಗ್ಗದ ಸಂಘಟನೆಗಳ ಮುಖಂಡರು ಧಾರವಾಡದ ಶ್ರೀನಗರ ವೃತ್ತದಿಂದ ಪ್ರತಿಭಟನಾ ಯಾತ್ರೆಯನ್ನು ನಡೆಸಲು ಮುಂದಾದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಅವಳಿ ನಗರದ ಪೊಲೀಸ್‌‍ ಆಯುಕ್ತ ಶಶಿಕುಮಾರ್‌, ಸುಮಾರು 60 ರಿಂದ 80 ಸಾವಿರದಷ್ಟು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಕಲಬುರುಗಿ, ಬೀದರ್‌ ಸೇರಿದಂತೆ ಯಾವ ಯಾವ ಜಿಲ್ಲೆಗಳಿಂದ ಯಾರ ನಾಯಕತ್ವದಲ್ಲಿ ವಿದ್ಯಾರ್ಥಿಗಳು ಅಥವಾ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆಗೆ ಆಗಮಿಸುತ್ತಾರೆ ಎಂದು ಮಾಹಿತಿ ಕೇಳಲಾಗಿತ್ತು. ಇದನ್ನು ನೀಡಲು ಸಂಘಟಕರು ವಿಫಲವಾದ ಕಾರಣಕ್ಕಾಗಿ ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ಸ್ಪಷ್ಟ ಪಡಿಸಿದರು.

ಉದ್ಯೋಗ ಆಕಾಂಕ್ಷಿಗಳ ಬೇಡಿಕೆ ಬಗ್ಗೆ ತಮಗೂ ಗೊತ್ತಿದೆ. ನಾನು ಕೂಡ ಒಂದು ಕಾಲದಲ್ಲಿ ಉದ್ಯೋಗ ಆಕಾಂಕ್ಷಿಯಾಗಿದ್ದೆ ಈಗ ಅಧಿಕಾರಿಯಾಗಿದ್ದೇನೆ. ಈ ಕಾರಣಕ್ಕೆ ಸಹಾನುಭೂತಿಯಿಂದ ಹೇಳುತ್ತಿದ್ದೇನೆ, ಇದು ಅನುಮತಿ ಪಡೆಯದ ಕಾನೂನುಬಾಹಿರವಾದ ಪ್ರತಿಭಟನೆ. ಉದ್ಯೋಗ ಆಕಾಂಕ್ಷಿಗಳು ನಿಮ ಬೇಡಿಕೆಯ ಮನವಿ ಪತ್ರವನ್ನು ನನಗೆ ಕೊಡಬಹುದು ಅಥವಾ ನಿಯೋಗದಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದು. ಹಿರಿಯ ಅಧಿಕಾರಿಗಳ ಮೂಲಕ ನಿಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಇಲ್ಲವಾದರೆ ನಿಮನ್ನು ಬಂಧಿಸಲು ಮತ್ತು ಪ್ರಕರಣವನ್ನು ದಾಖಲಿಸಲು ನಮಗೆ ಅವಕಾಶವಿದೆ. ಪ್ರಕರಣ ದಾಖಲಾದರೆ ನಿಮ ಮುಂದೆ ನಿಮ ಸರ್ಕಾರಿ ಕೆಲಸದ ಕನಸ್ಸಿಗೆ ತೊಂದರೆಯಾಗಲಿದೆ ಎಂದು ಎಚ್ಚರಿಸಿದರು.

ಇತ್ತೀಚಿಗೆ ಗೃಹ ಸಚಿವರು ಬೆಳಗಾವಿಯ ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮಗಳ ಬಗ್ಗೆ ಹಿರಿಯ ಪೊಲೀಸ್‌‍ ಅಧಿಕಾರಿಗಳ ಸಭೆ ನಡೆಸಿದ್ದರು. ಅಲ್ಲಿ ಸರ್ಕಾರ ಖಾಲಿ ಹುದ್ದೆಗಳ ನೇಮಕಾತಿಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಒಳಮೀಸಲಾತಿ ಕಾರಣಕ್ಕೆ ನೇಮಕಾತಿ ವಿಳಂಬವಾಗಿದೆ. ಅದಕ್ಕಾಗಿ ವಯೋಮಿತಿಯನ್ನು ಹೆಚ್ಚಿಸಲಾಗಿದೆ. ಈಗ ಆರ್ಥಿಕ ಇಲಾಖೆಯ ಅನುಮತಿ ಪಡೆದು ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದ್ದಾರೆ. ಉದ್ಯೋಗ ಆಕಾಂಕ್ಷಿಗಳು ಬೆಳಗಾವಿಯಲ್ಲೂ ಪ್ರತಿಭಟನೆ ನಡೆಸುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಗೃಹ ಸಚಿವರು ಸರಕಾರದ ಪ್ರಯತ್ನಗಳ ಬಗ್ಗೆ ವಿವರಣೆ ನೀಡಿದ್ದಾರೆ ಎಂದು ಪೊಲೀಸ್‌‍ ಆಯುಕ್ತರು ತಿಳಿಸಿದರು.

ಪ್ರತಿಭಟನಾಕಾರರಿಗೆ ಮೆರವಣಿಗೆ ನಡೆಸಲು ಅವಕಾಶ ನೀಡುವುದಿಲ್ಲ. ಇಲ್ಲಿಂದ ವಾಪಸ್‌‍ ಹೋಗುವುದಾದರೆ ಸಂತೋಷ. ಇಲ್ಲವಾದರೆ ಮುಂಜಾಗ್ರತೆ ಕಾರಣಕ್ಕೆ ಬಂಧಿಸಬೇಕಾಗುತ್ತದೆ. ಭಾರಿ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿರುವುದರಿಂದ ಸಣ್ಣಪುಟ್ಟ ತಪ್ಪುಗಳಾದರು ಪರಿಣಾಮ ದೊಡ್ಡದಾಗಿರುತ್ತದೆ. ಯಾವುದೇ ಕಾರಣಕ್ಕೂ ಮೆರವಣಿಗೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಪೊಲೀಸ್‌‍ ಅಧಿಕಾರಿಗಳ ಜೊತೆಗೆ ವಾಗ್ವಾದ ನಡೆಸಿದರು. ಬೆದರಿಕೆಗೆ ಜಗ್ಗದೆ ಮೆರವಣಿಗೆ ನಡೆಸಲು ಮುಂದಾದಾಗ ಪೊಲೀಸರು ಬಲವಂತವಾಗಿ ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ಇದು ಪರಸ್ಪರ ಸಂಘರ್ಷಕ್ಕೆ ಕಾರಣವಾಗಿ, ತಳ್ಳಾಟ ನೂಕಾಟವಾಯಿತು.

ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ. ನಮನ್ನು ಬಂಧಿಸುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನಗಳಾಗುತ್ತಿವೆ. ಕೆಲಸ ಕೇಳಿದರೆ ಬಂಧಿಸುವುದು ಯಾವ ನ್ಯಾಯ ಎಂದು ಉದ್ಯೋಗ ಆಕಾಂಕ್ಷಿಗಳು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನಮ ಹಕ್ಕು ಎಂದು ಘೋಷಣೆ ಕೂಗಿದರು.
ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬೀದರ್‌, ಕಲಬರಗಿ ರಾಯಚೂರು ಸೇರಿದಂತೆ ನಾನಾ ಭಾಗಗಳಿಂದಲೂ ಸಾವಿರಾರು ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

RELATED ARTICLES

Latest News