ಹಾಸನ,ಡಿ.10- ಕಾಂಗ್ರೆಸ್‍ನ ನಾಯಕರೊಬ್ಬರು 50 ಜನರನ್ನು ಕರೆದುಕೊಂಡು ಬರುವುದಾಗಿ ಕೇಂದ್ರದ ಬಿಜೆಪಿ ನಾಯಕರ ಬಳಿ ಹೋಗಿದ್ದ ಮಾಹಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 50 ಜನರನ್ನು ಕರೆದುಕೊಂಡು ಸಣ್ಣಪುಟ್ಟವರು ಬಿಜೆಪಿ ನಾಯಕರ ಬಳಿಗೆ ಹೋಗಲು ಆಗುತ್ತದೆಯೇ? ಐದಾರು ತಿಂಗಳು ರಿಲೀಫ್ ಕೊಡಿ ಎಂದು ಕೇಂದ್ರದ ಬಿಜೆಪಿ ನಾಯಕರ ಬಳಿಗೆ ಹೋಗಿದ್ದಾರೆ ಎಂದು ಆರೋಪಿಸಿದರು.
ಮಾಡಿರುವ ಅಕ್ರಮಗಳನ್ನು ಸರಿಪಡಿಸಿಕೊಳ್ಳಲು ಹೋಗಿರುವ ಮಾಹಿತಿ ಇದೆ. ಬಿಜೆಪಿ ನಾಯಕರ ಬಳಿ ವ್ಯಾಪಾರ ಮಾಡಲು ಹೋಗಿದ್ದಾರೆ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಕುಮಾರಸ್ವಾಮಿ ಆರೋಪ ಮಾಡಿದರು. ಯಾರು ಯಾರಿಗೂ ನಿಷ್ಠೆ, ಪ್ರಾಮಾಣಿಕತೆ ಇಲ್ಲ. ಅವರವರ ಅನುಕೂಲಕ್ಕೆ ತಕ್ಕಂತೆ ಮಾಡುತ್ತಾರೆ.
ಲೋಕಸಭೆ ಚುನಾವಣೆ ಬಳಿಕ ಈ ಸರ್ಕಾರ ಏನಾಗಲಿದೆ ಎಂಬುದು ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಮಹಾರಾಷ್ಟ್ರದಲ್ಲಿ ನಡೆದ ರೀತಿಯಲ್ಲಿ ಕರ್ನಾಟಕದಲ್ಲೂ ಯಾರು ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ. ಇವತ್ತಿನ ರಾಜಕಾರಣ ನೋಡಿದರೆ ದೇಶದಲ್ಲಿ ಏನು ಬೇಕಾದರೂ ನಡೆಯಬಹುದು. ಯಾರಿಗೂ ಪ್ರಾಮಾಣಿಕತೆ ನಿಷ್ಠೆ ಎಂಬುದು ಉಳಿದಿಲ್ಲ ಎಂದರು.
ರಾಜ್ಯ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳಿಂದ ಹಿಂದೆ ಸರಿಯುವುದಿಲ್ಲ. ದಾಖಲೆಗಳನ್ನು ಇಟ್ಟುಕೊಂಡೇ ಮಾತನಾಡುತ್ತೇನೆ ಎಂದರು. ಬೆಳಗಾವಿಯ ಅವೇಶನದಲ್ಲಿ ಒಳ್ಳೆಯ ಚರ್ಚೆಯಾಗಲಿ ಎಂಬ ಉದ್ದೇಶದಿಂದ ಸುಮ್ಮನಿದ್ದೇನೆ. ಪೆನ್‍ಡ್ರೈವ್ ಸೇರಿದಂತೆ ಹಲವು ವಿಚಾರಗಳನ್ನು ಬದಿಗಿಟ್ಟು, ಬಲಗಾಲ ಹಾಗೂ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಆದ್ಯತೆ ನೀಡಲಾಗುವುದು. ಆದರೆ ಮಾಡಿರುವ ಆರೋಪಗಳಿಂದ ಪಲಾಯನ ಮಾಡುವುದಿಲ್ಲ ಎಂದು ಹೇಳಿದರು.
ಸ್ವಪಕ್ಷದವರ ವಿರುದ್ದ ವಾಗ್ದಾಳಿ ನಡೆಸಿದವರಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಒಬ್ಬರೇ ಅಲ್ಲ ಇನ್ನು ಸಾಕಷ್ಟು ಮಂದಿ ಕಾಂಗ್ರೆಸ್‍ನಲ್ಲಿದ್ದಾರೆ. ಒಂದೊಂದೇ ಧ್ವನಿ ಹೊರಬರಲಿದೆ ಎಂದು ಮಾರ್ಮಿಕವಾಗಿ ನುಡಿದರು. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಹೋರಾಟ ಮಾಡುತ್ತೇವೆ ಎಂದ ಅವರು, 2ನೇ ಬಾರಿ ಕಷ್ಟಪಟ್ಟು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಮುಸ್ಲಿಂ ಸಮುದಾಯವನ್ನು ಓಲೈಸಲು ಹೇಳಿಕೆ ನೀಡಿ ಜನರಲ್ಲಿ ಕೆಟ್ಟ ರೀತಿಯ ಭಾವನೆ ಮೂಡುವ ಪರಿಸ್ಥಿತಿಯನ್ನು ಅವರೇ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಛತ್ತೀಸ್‍ಗಢ ಮುಖ್ಯಮಂತ್ರಿ ಆಯ್ಕೆ ಇಂದು ಫೈನಲ್
ನಿಮಗೆ ಜಾತಿ ಗಣತಿ ಯಾಕೆ ಬೇಕು. ರಾಜ್ಯ, ದೇಶ ಉದ್ದಾರವಾಗಬೇಕಾದರೆ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ಜಾತಿ ಗಣತಿ ಮಾಡಿ ಜಾತಿ ಜಾತಿಗಳ ನಡುವೆ ವಿಷಯ ಬೀಜ ಬಿತ್ತುತ್ತೀರ, ಅಲ್ಲೂ ಕಮೀಷನ್ ಎಷ್ಟಿದೆ ಎಂದು ಗೊತ್ತಿದೆ ಎಂದು ಆರೋಪಿಸಿದರು.
ಕಾಡಾನೆಗಳ ಕಾದಾಟದಲ್ಲಿ ಅರ್ಜುನ ಆನೆ ವೀರ ಮರಣವನ್ನಪ್ಪಿರುವುದು ದುರದೃಷ್ಟಕರ ಸಂಗತಿ. ಆ ಆನೆಯನ್ನು ಮನೆಯ ಮಗುವಿನ ರೀತಿ ನೋಡುತ್ತಿದ್ದರು. ಮೊದಲೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರೆ ಆನೆ ಜೀವಂತ ಇರುತ್ತಿತ್ತು ಎಂದು ಹೇಳಿದರು.