Wednesday, December 3, 2025
Homeರಾಜಕೀಯಸಿಎಂ-ಡಿಸಿಎಂ 2ನೇ ಬ್ರೇಕ್ ಫಾಸ್ಟ್ ಮೀಟಿಂಗ್ : ಡಿಕೆಶಿ ಮನೆಯಲ್ಲಿ ಬಿಸಿಬಿಸಿ ಚರ್ಚೆ

ಸಿಎಂ-ಡಿಸಿಎಂ 2ನೇ ಬ್ರೇಕ್ ಫಾಸ್ಟ್ ಮೀಟಿಂಗ್ : ಡಿಕೆಶಿ ಮನೆಯಲ್ಲಿ ಬಿಸಿಬಿಸಿ ಚರ್ಚೆ

CM-DCM 2nd breakfast meeting: discussion at DKshi's house

ಬೆಂಗಳೂರು, ಡಿ.1- ಕಳೆದ ಐದಾರು ತಿಂಗಳಿನಿಂದಲೂ ಕುರ್ಚಿ ಕಿತ್ತಾಟಕ್ಕೆ ಸಂಬಂಧಪಟ್ಟಂತೆ ನಡೆಯುತ್ತಿದ್ದ ಮುಸುಕಿನ ಗುದ್ದಾಟವನ್ನು ಸರಿಪಡಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಇಂದು ಎರಡನೇ ಬಾರಿಗೆ ಉಪಾಹಾರಕೂಟ ನಡೆಸಿದ್ದಾರೆ.

ಹೈಕಮಾಂಡ್‌ ಸೂಚನೆಯ ಮೇರೆಗೆ ನಡೆದ ಸರಣಿ ಉಪಾಹಾರಕೂಟಗಳ ಪೈಕಿ, ಇಂದು ಆಹ್ವಾನದ ಮೇರೆಗೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ್ದರು.

ಸಿದ್ದರಾಮಯ್ಯ ಅವರನ್ನು ಡಿ.ಕೆ.ಶಿವಕುಮಾರ್‌ ಅವರೇ ಖುದ್ದಾಗಿ ಬಾಗಿಲ ಬಳಿ ಬಂದು ಸ್ವಾಗತಿಸಿದರು. ಈ ವೇಳೆ ಡಿ.ಕೆ.ಶಿವಕುಮಾರ್‌ ಅವರ ಸಹೋದರರೂ ಆಗಿರುವ ಮಾಜಿ ಸಂಸದ ಡಿ.ಕೆ.ಸುರೇಶ್‌ ಮುಖ್ಯಮಂತ್ರಿಯವರಿಗೆ ಹೂಗುಚ್ಛ ನೀಡಿ ಶಾಲು ಹೊದಿಸಿ ಆಹ್ವಾನಿಸುವ ಮೂಲಕ, ಕಾಲಿಗೆ ನಮಸ್ಕರಿಸಿ ಆಶೀರ್ವಚನ ಪಡೆದರು. ಕುಣಿಗಲ್‌ ಕ್ಷೇತ್ರದ ಶಾಸಕ ಎಚ್‌.ಡಿ.ರಂಗನಾಥ್‌ ಕೂಡ ಉಪಸ್ಥಿತರಿದ್ದರು. ಉಪಾಹಾರದ ಬಳಿಕ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ಡಿ.ಕೆ. ಸುರೇಶ್‌ ಅವರು ಪ್ರತ್ಯೇಕ ಮಾತುಕತೆ ನಡೆಸಿದರು.

ಕಳೆದ ಶನಿವಾರ ಡಿ.ಕೆ.ಶಿವಕುಮಾರ್‌ ಅವರು ಹೈಕಮಾಂಡ್‌ ಸೂಚನೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿ ಉಪಾಹಾರ ಸೇವಿಸಿದ್ದರು. ಆ ಬಳಿಕ ಇಬ್ಬರೂ ರಹಸ್ಯವಾಗಿ ಸುಮಾರು ಒಂದು ಗಂಟೆ ಚರ್ಚೆ ನಡೆಸಿದರು. ಇದೇ ವೇಳೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಉಭಯ ನಾಯಕರು, ವಿಧಾನ ಮಂಡಲದಲ್ಲಿ ಬಿಜೆಪಿ ಮತ್ತು ಜೆಡಿಎಸ್‌‍ ವಿರೋಧ ಪಕ್ಷಗಳನ್ನು ಹಾಗೂ ಅವಿಶ್ವಾಸ ನಿರ್ಣಯವನ್ನು ಸಮರ್ಥವಾಗಿ ಎದುರಿಸಲು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷವನ್ನು ಗೆಲ್ಲಿಸಲು ಇಬ್ಬರೂ ರಣತಂತ್ರ ರೂಪಿಸಿದ್ದೇವೆ ಎಂಬ ಹೇಳಿಕೆಯನ್ನು ರವಾನಿಸಿದ್ದರು.

ಇಂದು ಎರಡನೇ ಹಂತದ ಉಪಾಹಾರ ಕೂಟದಲ್ಲಿ ಅಧಿಕಾರ ಹಂಚಿಕೆಯ ಸೂತ್ರದ ಪಾಲನೆಯ ಬಗ್ಗೆ ಮಹತ್ವದ ಚರ್ಚೆಗಳಾಗಿವೆ ಎಂದು ಹೇಳಲಾಗಿದೆ. ಮೊದಲ ಹಂತದ ಉಪಾಹಾರ ಕೂಟದಲ್ಲಿ ವಾತಾವರಣವನ್ನು ತಿಳಿಗೊಳಿಸಲು ಆದ್ಯತೆ ನೀಡಿದ್ದರೆ, ಇಂದು ಅಧಿಕಾರ ಹಂಚಿಕೆ ಮತ್ತು ಸಚಿವ ಸಂಪುಟ ಪುನರ್‌ ರಚನೆ ಮತ್ತು ಇತರ ರಾಜಕೀಯ ತೀರ್ಮಾನಗಳ ಬಗ್ಗೆ ಮಹತ್ವದ ಸಮಾಲೋಚನೆಗಳಾಗಿರುವ ಮಾಹಿತಿ ಇದೆ.

2023ರ ವಿಧಾನಸಭೆ ಚುನಾವಣೆಯ ಬಳಿಕ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ದೆಹಲಿಯಲ್ಲಿ ನಡೆದ ಸಂಧಾನ ಸಭೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಡಿ.ಕೆ.ಶಿವಕುಮಾರ್‌ ಅವರ ಸಹೋದರ ಡಿ.ಕೆ.ಸುರೇಶ್‌ ಅವರ ಮೇಲೆ ಪ್ರಮಾಣ ಮಾಡಿ ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡುವುದಾಗಿ ಮಾತು ಕೊಟ್ಟಿದ್ದರು ಎನ್ನಲಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಅವರ ಸುತ್ತಮುತ್ತ ಇರುವವರು ಅಧಿಕಾರ ಬಿಟ್ಟುಕೊಡದಂತೆ ಒತ್ತಡ ಹಾಕಿದ್ದಾರೆ. ಈ ಕಾರಣಕ್ಕೆ ಡಿ.ಕೆ.ಶಿವಕುಮಾರ್‌ ರೊಚ್ಚಿಗೆದ್ದಿದ್ದು ಅಧಿಕಾರಕ್ಕಾಗಿ ನಾನಾ ರೀತಿಯ ರಣತಂತ್ರಗಳನ್ನು ರೂಪಿಸುತ್ತಿದ್ದಾರೆ ಎಂದು ಹೇಳಲಾಗಿತ್ತು.
ಡಿ.ಕೆ.ಸಹೋದರರ ಪಟ್ಟಿನಿಂದಾಗಿ ಸಿದ್ದರಾಮಯ್ಯ ಅವರಿಗಿಂತಲೂ ಹೈಕಮಾಂಡ್‌ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಂಧಾನ ಸಭೆಯ ಬಳಿಕ ಹೈಕಮಾಂಡ್‌ ಹೇಳಿದಂತೆ ಇಬ್ಬರೂ ನಡೆದುಕೊಳ್ಳುತ್ತೇವೆ ಎನ್ನುವ ಮೂಲಕ ಅಧಿಕಾರ ಹಂಚಿಕೆಯ ಗದ್ದಲ ಜೀವಂತವಾಗಿರುವುದನ್ನು ಸಾಬೀತುಪಡಿಸಿದ್ದಾರೆ.

ಈ ಮೊದಲು ಸಿದ್ದರಾಮಯ್ಯ ತಾವು ಐದು ವರ್ಷ ಮುಖ್ಯಮಂತ್ರಿ ಯಾಗಿ ಮುಂದುವರೆಯುವುದಾಗಿ ಹೇಳುತ್ತಿದ್ದರು. ಡಿ.ಕೆ.ಶಿವಕುಮಾರ್‌ ಅವರು ಅಧಿಕಾರ ಪೂರ್ಣಗೊಳಿಸುವುದಾಗಿ ಹೇಳುತ್ತಿರುವ ಸಿದ್ದರಾಮಯ್ಯ ಅವರಿಗೆ ಶುಭವಾಗಲಿ ಎಂದು ಮಾರ್ಮಿಕ ಮಾತುಗಳನಾಡುತ್ತಿದ್ದರು. ಆದರೆ ಹೈಕಮಾಂಡ್‌ ಮಧ್ಯ ಪ್ರವೇಶದ ಬಳಿಕ ಇಬ್ಬರ ವರಸೆಗಳು ಬದಲಾಗಿವೆ. ವರಿಷ್ಠರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎನ್ನುತ್ತಿದ್ದಾರೆ.

ಸಚಿವ ಸಂಪುಟ ಪುನರ್‌ ರಚನೆಗೆ ಸಿದ್ದರಾಮಯ್ಯ ಅವರು ಆಸಕ್ತಿ ತೋರಿಸಿದ್ದರು. ಆದರೆ ಡಿ.ಕೆ.ಶಿವಕುಮಾರ್‌ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹಿಂದಿನ ಉಪಾಹಾರ ಸಭೆಯಲ್ಲಿ ಸಚಿವ ಸಂಪುಟ ಪುನರ್‌ ರಚನೆ ಬಗ್ಗೆ ಚರ್ಚೆಗಳಾಗಿವೆ. ಒಂದು ವೇಳೆ ಹೈ ಕಮಾಂಡ್‌ ಸಮತಿಸಿದರೆ ಯಾರನ್ನು ಕೈಬಿಡಬೇಕು, ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಪ್ರಾಸ್ತಾವಿಕ ಚರ್ಚೆಯಾಗಿರುವುದಾಗಿ ತಿಳಿದು ಬಂದಿದೆ.

ಮುಂದಿನ ಮಾರ್ಚ್‌ನಲ್ಲಿ ನಾಯಕತ್ವ ಬದಲಾವಣೆಯ ಬಳಿಕ ಸಂಪುಟ ಪುನರ್‌ ರಚನೆ ಮಾಡಬಹುದು ಎಂದು ಡಿಕೆ ಶಿವಕುಮಾರ್‌ ಪಟ್ಟು ಹಿಡಿದಿದ್ದರು. ಹೈಕಮಾಂಡ್‌ ಬಳಿ ವಿಷಯ ಪ್ರಸ್ತಾಪಿಸಿ ಅನುಮತಿ ಸಿಕ್ಕರೆ ಪುನರ್‌ ರಚನೆ ಮಾಡಬಹುದು ಎಂಬುದು ಸಿದ್ದರಾಮಯ್ಯ ಅವರ ವಾದವಾಗಿತ್ತು.

ಮೇಲ್ನೋಟಕ್ಕೆ ಇಬ್ಬರೂ ನಾಯಕರು ಕೈ ಕುಲುಕಿಕೊಂಡು ಅಣ್ಣ ತಮಂದಿರಂತೆ ಇದ್ದೇವೆ ಎನ್ನುತ್ತಿದ್ದಾರಾದರೂ ಒಳಗೊಳಗೆ ಕುರ್ಚಿಯ ಕಿತ್ತಾಟ ತೀವ್ರವಾಗಿದೆ.ಇಂದು ಎರಡನೇ ಹಂತದ ಉಪಾಹಾರಕೂಟ ಬೆಳಗಾವಿಯ ವಿಧಾನ ಮಂಡಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಟೀಕೆಗೆ ತಕ್ಕ ಉತ್ತರ ನೀಡಲು ಮತ್ತು ಅವಿಶ್ವಾಸ ನಿರ್ಣಯವನ್ನು ಸಮರ್ಥವಾಗಿ ಎದುರಿಸಲು ಪೂರಕವಾಗಿ ನಡೆದಿದೆ ಎನ್ನಲಾಗಿದೆ.

RELATED ARTICLES

Latest News