ಬೆಂಗಳೂರು, ಡಿ.2- ಗೊಂದಲಗಳ ಗೂಡಾಗಿರುವ ಬೆಂಗಳೂರು ಮಹಾನಗರದ ಐದು ನಗರ ಪಾಲಿಕೆಗಳಿಗೆ ಒಂದೇ ಮಾದರಿಯ ಅಧಿಕಾರ ಪ್ರತ್ಯಾಯೋಜನೆಯನ್ನು ರೂಪಿಸಬೇಕೆಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.
ಬಿಬಿಎಂಪಿಯನ್ನು ಅವೈಜ್ಞಾನಿಕವಾಗಿ ಐದು ನಗರ ಪಾಲಿಕೆಗಳನ್ನು ವಿಭಜನೆ ಮಾಡಿರುವುದನ್ನು ನೋಡಿದರೆ ಹುಚ್ಚು ದೊರೆ ಮಹಮದ್ ಬಿನ್ ತುಘಲಕ್ ನ ಆಡಳಿತದ ವೈಖರಿಯನ್ನೇ ನಾಚಿಸುವಂತಹ ಆಡಳಿತವನ್ನು ನೋಡುವ ದೌರ್ಭಾಗ್ಯ ಬೆಂಗಳೂರು ಮಹಾನಗರದ ಜನತೆಯದ್ದಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಐದು ನಗರ ಪಾಲಿಕೆಗಳಲ್ಲಿ ವಾಸ್ತವವಾಗಿ ಒಂದೇ ತೆರನಾದ ಆಡಳಿತ ವ್ಯವಸ್ಥೆ ಜಾರಿಗೆ ಬರಬೇಕಿತ್ತು. ಇದಾಗದಿರುವ ಹಿನ್ನೆಲೆಯಲ್ಲಿ ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆಯಿತು ಎನ್ನುವ ಮಾತಿನಂತೆ ಒಂದೊಂದು ನಗರ ಪಾಲಿಕೆಯಲ್ಲಿ ಒಂದೊಂದು ಮಾದರಿಯ ಗೊಂದಲಮಯ ಅಧಿಕಾರ ಪ್ರತ್ಯಾಯೋಜನೆಗಳು ಜಾರಿಗೆ ಬಂದಿರುವುದರಿಂದ ಅಧಿಕಾರಿಗಳು, ನೌಕರರು ಮತ್ತು ಸಾರ್ವಜನಿಕರಲ್ಲಿ ಬಹಳಷ್ಟು ಗೊಂದಲಗಳು ಉಂಟಾಗಿವೆ.
ಈ ಹಿಂದೆ ಟೆಂಡರ್ ಪ್ರಕ್ರಿಯೆಗಳ ಅನುಮೋದನೆ, ಯೋಜನೆಗಳ ಅನುಷ್ಠಾನದ ಅನುಮೋದನೆ ಹಾಗೂ ಉದ್ಯಾನವನಗಳು, ಬೀದಿ ದೀಪಗಳು, ಕೆರೆಗಳು, ರಾಜಕಾಲುವೆಗಳು, ಅಧಿಕಾರಿಗಳ ಕಛೇರಿಗಳ ನಿರ್ವಹಣೆ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವ ಸಂಬಂಧದ ಕಡತಗಳಲ್ಲಿ ಪಾಲಿಕೆಯ ಆಯುಕ್ತರು ಅಂತಿಮವಾಗಿ ಒಂದು ಸಲ ಅನುಮೋದನೆ ನೀಡಿದರೆ ಸಾಕಿತ್ತು. ಆದರೆ, ವಿಚಿತ್ರ ಮತ್ತು ಹಾಸ್ಯಾಸ್ಪದ ಎಂಬಂತೆ ಈಗಿನ ಐದು ಪಾಲಿಕೆಗಳ ಆಯುಕ್ತರುಗಳಿಗೆ ಪ್ರತೀ ಕಡತವೂ ಸಹ ಕನಿಷ್ಠ ನಾಲ್ಕೈದು ಸಲ ರವಾನೆಯಾಗಿ ಆಯುಕ್ತರ ಸಹಿಗಳನ್ನು ಪಡೆದುಕೊಳ್ಳುವ ಪದ್ಧತಿ ಜಾರಿಗೆ ಬಂದಿದೆ.
ಒಂದು ಹುಲ್ಲು ಕಡ್ಡಿಯೂ ಸಹ ತಮ್ಮ ಅನುಮತಿ ಪಡೆದ ನಂತರವಷ್ಟೇ ಅಲುಗಾಡಬೇಕು ಎಂಬ ಮನಸ್ಥಿತಿ ಹೊಂದಿರುವ ಒಂದಿಬ್ಬರು ಆಯುಕ್ತರು ತಮ್ಮ ಅಧಿಕಾರ ವ್ಯಾಪ್ತಿಯ ಪಾಲಿಕೆಗಳಲ್ಲಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ, ನಗರ ಪಾಲಿಕೆಗಳ 10 ವಲಯಗಳಲ್ಲಿರುವ ಶ್ರೇಣಿಯ ಜಂಟಿ ಆಯುಕ್ತರುಗಳ ಅನುಮೋದನೆ ಕಾರ್ಯಗಳಿಗೆ ಒಂದೇ ಒಂದು ಕಡತವೂ ರವಾನೆಯಾಗುತ್ತಿಲ್ಲ ಮತ್ತು ಈ ಸಂಬಂಧದ ಅಧಿಕಾರ ಪ್ರತ್ಯಾಯೋಜನೆಯನ್ನು ಇದುವರೆಗೂ ಯಾವೊಂದು ಪಾಲಿಕೆಯಲ್ಲೂ ಹೊರಡಿಸಿಲ್ಲ.
ಹೀಗಾಗಿ ಐದು ಪಾಲಿಕೆಗಳಲ್ಲಿ ಒಂದೇ ಮಾದರಿಯ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರುವುದು ನಗರಾಭಿವೃದ್ಧಿ ಇಲಾಖೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ.ಆದುದರಿಂದ ಈ ಸಂಬಂಧ ಕೂಡಲೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರನ್ನು ಆಗ್ರಹಿಸಿದ್ದಾರೆ.
