Sunday, November 24, 2024
Homeಮನರಂಜನೆಕಾವೇರಿಗಾಗಿ ಕೆರಳಿದ ಚಿತ್ರರಂಗ, ಒಂದಾಗಿ ಹೋರಾಟಕ್ಕಿಳಿದ ತಾರೆಯರು

ಕಾವೇರಿಗಾಗಿ ಕೆರಳಿದ ಚಿತ್ರರಂಗ, ಒಂದಾಗಿ ಹೋರಾಟಕ್ಕಿಳಿದ ತಾರೆಯರು

ಬೆಂಗಳೂರು, ಸೆ.29- ಕರ್ನಾಟಕ ಬಂದ್ ಸಂದರ್ಭದಲ್ಲಿ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಬೆಂಬಲ ವ್ಯಕ್ತಪಡಿಸಿದ್ದ ಕನ್ನಡ ಚಿತ್ರರಂಗವು ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತನ್ನ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಮುಖ ನಟರಾದ ಶಿವರಾಜ್ಕುಮಾರ್, ಶ್ರೀನಾಥ್, ಶ್ರೀನಿವಾಸಮೂರ್ತಿ, ಸುಂದರ್ರಾಜ್, ಉಪೇಂದ್ರ, ಶರಣ್, ಶ್ರೀಮುರಳಿ, ಪ್ರೇಮ್, ಧ್ರುವ ಸರ್ಜಾ, ದುನಿಯಾ ವಿಜಯ್, ಸೃಜನ್ಲೋಕೇಶ್, ವಶಿಷ್ಠ, ರಘು ಮುಖರ್ಜಿ, ಅನಿರುದ್ಧ, ಕಿಟ್ಟಿ, ನಟಿಯರಾದ ಉಮಾಶ್ರೀ, ಶೃತಿ, ಗಿರೀಜಾ ಲೋಕೇಶ್, ಪೂಜಾಗಾಂ, ಪ್ರಮೀಳಾ ಜೋಶಾಯ್, ಸಂಗೀತ ನಿರ್ದೇಶಕರಾದ ಹಂಸಲೇಖ, ಗುರುಕಿರಣ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್.ಎಂ.ಸುರೇಶ್ ನೇತೃತ್ವದಲ್ಲಿ ಚಿತ್ರರಂಗದ ವಿವಿಧ ಘಟಕಗಳಾದ ನಿರ್ದೇಶಕರ, ನಿರ್ಮಾಪಕರ, ಕಲಾವಿದರ, ಛಾಯಾಗ್ರಾಹಕರು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಛಾಲೆಂಜಿಂಗ್ ಸ್ಟಾರ್ ದರ್ಶನ್ ನಾನು ಈಗಾಗಲೇ ಮಾತನಾಡಿದ್ದೇನೆ. ಇಂದು ಹಿರಿಯರಾದ ಶಿವಣ್ಣ ಮಾತನಾಡುತ್ತಾರೆ ಎಂದಷ್ಟೆ ಹೇಳಿ ಕುಳಿತರು.ಹಂಸಲೇಖ ಮಾತನಾಡಿ, ಚಿತ್ರೋದ್ಯಮ ಚುಕ್ಕಾಣಿ ಇಲ್ಲದ ಹಡಗಾಗಿದೆ ಎಂದು ಕಳೆದ ತಿಂಗಳು ನಾನು ಹೇಳಿದ್ದೆ. ಹೊಸಬರನ್ನು ಕೇಳುವವರಿಲ್ಲಎಂಬಂತಾಗಿತ್ತು. ಇಂದು ಶಿವಣ್ಣ ಹೋರಾಟದ ವೇದಿಕೆಗೆ ಬಂದಿದ್ದಾರೆ. ಅವಿರೋಧವಾಗಿ ಎಲ್ಲರೂ ಭಾಗಿಯಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಶ್ರೇಷ್ಠ ಮಾರ್ಗ, ಕಲಾವಿದರು ಸಾಂಸ್ಕøತಿಕವಾಗಿ ಪ್ರತಿಭಟನೆ ಮಾಡಿದರೆ ಅದು ಜನಾಕರ್ಷಣೆಯಾಗಿರುತ್ತದೆ ಎಂದರು.

ಹತ್ತನೆ ಶತಮಾನದಲ್ಲಿ ಶಿಲಾಕೃತಿಯಲ್ಲಿ ಕಾವೇರಿ ವಿವಾದದ ಬಗ್ಗೆ ಪ್ರಸ್ತಾಪವಾಗಿದೆ. ಅದರಲ್ಲಿ ಕಾವೇರಿಯನ್ನು ಅಡಮಾನ ಇಟ್ಟುಕೊಂಡಿದ್ದಾನಾ ಎಂದು ಪ್ರಶ್ನಿಸಿರುವುದು ಕಂಡು ಬಂದಿದೆ. ಚಿತ್ರರಂಗ ಕಾವೇರಿ ಸಮಸ್ಯೆ ಹೇಗೆ ಬಗೆ ಹರಿಸಬಹುದು ಎಂಬ ಕುರಿತು ರಚನಾತ್ಮಕ ಚಿತ್ರಕತೆ ಬರೆದು ಅದನ್ನು ಸಿನಿಮಾ ಮೂಲಕ ವಾಸ್ತವತೆಯನ್ನು ಪ್ರಜಾಪ್ರತಿನಿಗಳಿಗೆ ಅರ್ಥ ಮಾಡಿಸಬೇಕು. ಸಂಸತ್ ಮತ್ತು ಸಂಪತ್ತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಕಲಾವಿದರು ಆ ಚಿತ್ರದಲ್ಲಿ ಭಾಗವಹಿಸಬೇಕು. ಚಲನಚಿತ್ರ ಮಂಡಳಿ ಅಂತಹ ಚಿತ್ರ ನಿರ್ಮಾಣ ಮಾಡಲು ಮುಂದಾದರೆ ತಾವು ಚಿತ್ರಕತೆ, ಸಂಗೀತ ನಿರ್ದೇಶನ ಹಾಗು ಹೂಡಿಕೆಯನ್ನು ಮಾಡಲು ಸಿದ್ಧ ಎಂದು ಘೋಷಿಸಿದರು.

ಕುವೆಂಪು ನಾಡನ್ನು ಜೈ ಭಾರತ ಜನನಿಯ ತನುಜಾತೆ ಎಂದು ಹೇಳಿದ್ದಾರೆ. ಈಗ ದೇಶದಲ್ಲಿ 21 ತನುಜಾತೆಯರಿದ್ದಾರೆ. ತಾಯಿ ಅವರೆನ್ನೆಲ್ಲಾ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗ ಸಿನಿಮಾ ಮಾಡಿ ಮನವರಿಕೆ ಮಾಡಿಕೊಟ್ಟು ದೇಶದಲ್ಲಿ ಅಂತರ್ಜಲ ನದಿ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ಕುರಿತು ಮಾದರಿಯಾಗಬೇಕು ಎಂದರು.
ಮೈಸೂರು ದಸರಾವನ್ನು ನಾನು ನಿಮ್ಮೆಲ್ಲರ ಸಂಕೇತವಾಗಿ ಉದ್ಘಾಟಿಸಲಿದ್ದೇನೆ. ದಸರಾದಲ್ಲಿ ದೀಪ ಹಚ್ಚುವ ಕೈನಲ್ಲಿರುವ ಚೆತನ್ಯ ಎಲ್ಲ ಕನ್ನಡ ನಾಡಿನ ಶಕ್ತಿಯಾಗಿದೆ. ಐದು ವರ್ಷ ಜನ ಕಾಡಿಗೆ ಹೋಗುವುದನ್ನು ನಿಲ್ಲಿಸಿದರೆ, ಪ್ರಕೃತಿ ಉಳಿದರೆ ಮಳೆಯಾಗಿ ನೀರಿನ ಸಮಸ್ಯೆ ಬಗೆ ಹರಿಯುತ್ತದೆ ಎಂದು ಹೇಳಿದರು.

ನಿರ್ಮಾಪಕ ಚಿನ್ನೇಗೌಡ ಮಾತನಾಡಿ, ಮದ್ರಾಸ್ ಪ್ರೆಸಿಡೆನ್ಸಿ ಕಾಲದಲ್ಲಿ ಮಾಡಿಕೊಂಡ ಒಪ್ಪಂದ ಭಾಗವಾಗಿ ಕಾವೇರಿ ವಿವಾದ ಜೀವಂತವಾಗಿ ಉಳಿದಿದೆ. ಕನ್ನಡಿಗರು, ಉದಾರಿಗಳು, ನೀರು ತಾನೇ ಹರಿದು ಹೋಗಲಿ ಎಂದು ಇಷ್ಟು ದಿನ ಸಹಿಸಿಕೊಂಡಿದ್ದರು. ಆದರೆ ಮಳೆ ಇಲ್ಲದೆ ನಮಗೆ ಕುಡಿಯುವ ನೀರಿಲ್ಲದ ಕಾಲದಲ್ಲೂ ನೀರು ಬಿಡಬೇಕು ಎಂಬ ವಾದ ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಬದ್ಧತೆಯನ್ನು ತೋರಿಸಿ ವಿವಾದವನ್ನು ಶಾಶ್ವತವಾಗಿ ಬಗೆ ಹರಿಸುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.

ಸೂಪರ್ ಸ್ಟಾರ್ ಉಪೇಂದ್ರ ಮಾತನಾಡಿ, ಕಾವೇರಿ ನಮ್ಮದು, ನೀರು ಬಿಡುತ್ತಿಲ್ಲ ಎಂದು ತಮಿಳುನಾಡು ಪ್ರತಿಭಟನೆ ನಡೆಸಬೇಕಿತ್ತು. ಆದರೆ ನೀರು ಬಿಡಬೇಡಿ ಎಂದು ನಾವೇ ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿರುವುದು ದುರಂತ ಎಂದರು.

ಶ್ರೀಮುರಳಿ ಮಾತನಾಡಿ, ಕಾವೇರಿ ಸೂಕ್ಷ್ಮ ವಿಚಾರ ನಾವು ಏನೋ ಮಾತನಾಡುವುದು ಅದು ವಿವಾದವಾಗುವುದು ಬೇಡ. ಅದಕ್ಕಾಗಿ ತಿಳಿದವರನ್ನು ಕೇಳಿ ಒಂದಿಷ್ಟು ಬರೆದುಕೊಂಡು ಬಂದಿದ್ದೇನೆ. ಅದನ್ನು ಓದಿ ಬಿಡುತ್ತೇನೆ ಎಂದು ಹೇಳಿ, ಕಾವೇರಿ ನಮ್ಮ ಹಕ್ಕು, ಮೊದಲು ನಮ್ಮ ನಾಡು, ನಮ್ಮ ರೈತರು ಮುಖ್ಯ, ಅನ್ಯ ಭಾಷೆ ಮತ್ತು ರಾಜ್ಯವನ್ನು ಪ್ರೀತಿಸುತ್ತೇವೆ. ಆದರೆ ನಮ್ಮ ನಾಡುನುಡಿಗೆ ಮೊದಲ ಆದ್ಯತೆ. ರಾಜಕಾರಣಿಗಳು ಸಮಸ್ಯೆ ಬಗೆಹರಿಸುತ್ತಿಲ್ಲ. ನಮಗೆ ನೀರಿಲ್ಲದಿದ್ದಾಗ ತಮಿಳುನಾಡಿಗೆ ಹರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಶರಣ್ ಅವರು, ನಾಡಿಗೆ ಪದೇ ಪದೇ ಈ ರೀತಿಯ ಪರಿಸ್ಥಿತಿ ಬರುತ್ತಿದೆ. ಆದರೆ ನಮ್ಮ ಅನಿವಾರ್ಯತೆಯನ್ನು ಮುಟ್ಟಿಸುವ ಕೆಲಸ ಮಾಡಬೇಕು. ನಾಡಿನ ಹಿತಾಸಕ್ತಿಗೆ ಧಕ್ಕೆ ಬಂದಾಗ ಎಲ್ಲಾ ಸಂಘಟನೆಗಳ ಜೊತೆ ಚಿತ್ರರಂಗ ನಿಂತಿದೆ ಎಂದು ಹೇಳಿದರು.
ಸೃಜನ್ಲೋಕೇಶ್, ನೀರಿನ ಸಮಸ್ಯೆ ಎಲ್ಲರಿಗೂ ಗೊತ್ತಿದೆ. ಪ್ರಕೃತಿ ವೈಪರಿತ್ಯ, ಮಳೆಯ ಅಭಾವದಿಂದ ವಿವಾದ ಹೆಚ್ಚಾಗುತ್ತಿದೆ. ನೀರಿಗಾಗಿ ಪ್ರತಿಭಟನೆ ನಡೆಸುವ ಜೊತೆಗೆ ಪರಿಸರ ಸಂರಕ್ಷಣೆ ಸಲುವಾಗಿಯೂ ಪ್ರತಿಭಟನೆ ನಡೆಸಬೇಕಿದೆ. ಸಾವಿರಾರು ಮರ ನೆಟ್ಟರೆ ಮಳೆ ಹೆಚ್ಚಾಗುತ್ತದೆ, ಸಮಸ್ಯೆ ತನ್ನಷ್ಟಕ್ಕೆ ತಾನೇ ಬಗೆ ಹರಿಯುತ್ತದೆ. ಕಾವೇರಿ ನಮ್ಮದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರೂ ಆಗಿರುವ ಹಿರಿನ ನಟಿ ಉಮಾಶ್ರೀ, ಹಿಂದೆ ಕನ್ನಡ ನಾಡು ನುಡಿ ಪರವಾದ ಹೋರಾಟದಲ್ಲಿ ವರನಟ ಡಾ.ರಾಜ್ಕುಮಾರ್ ಅವರ ಉಪಸ್ಥಿತಿ ಆನೆ ಬಲ ತಂದುಕೊಡುತ್ತಿತ್ತು. ಈ ಹಂತದಲ್ಲಿ ತಮಿಳುನಾಡಿನ ಕುರಿತು ಯಾವುದೇ ಕನಿಕರ ಅಗತ್ಯವಿಲ್ಲ. ನಮ್ಮ ರೈತರ ರಕ್ಷಣೆ ಹಾಗೂ ಕುಡಿಯುವ ನೀರಿನ ಅಗತ್ಯ ಬಹಳ ಮುಖ್ಯ. ಸಂಕಷ್ಟ ಸೂತ್ರ ಇಲ್ಲದ ಕಾರಣ ಮಳೆ ಇಲ್ಲದಾಗ ಕಾವೇರಿ ವಿವಾದ ಬುಗಿಲೇಳುತ್ತಿದೆ.

ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಸಂಧಾನ ಸೂತ್ರ ರೂಪಿಸಬೇಕು. ರಾಜಕಾರಣ ಬದಿಗಿಟ್ಟು ಎಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದರು. ಶೃತಿ ಮಾತನಾಡಿ, ಈ ಪ್ರತಿಭಟನೆ ಪ್ರತಿಷ್ಠೆಯ ಸಂಕೇತ ಅಲ್ಲ, ಒಗ್ಗಟ್ಟಿನ ಪ್ರದರ್ಶನವಾಗಿದೆ. ಕಾವೇರಿ ಎಂದರೆ ತಮಿಳುನಾಡು ಮೊದಲು ಅರ್ಜಿ ಹಾಕುತ್ತದೆ, ನಂತರ ನಾವು ಅದಕ್ಕೆ ಸ್ಪಷ್ಟನೆ ಕೊಡುವಂತಾಗಿದೆ. ವಾಸ್ತವವನ್ನು ಮನವರಿಕೆ ಮಾಡಿಕೊಡಲು ನಮಗೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ನಟಿ ಅನುಪ್ರಭಾಕರ್ ಮಾತನಾಡಿ, ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಕಾರಗಳು ವಾಸ್ತವ ಪರಿಸ್ಥಿತಿಯನ್ನು ಮನಗಂಡು ಕಾವೇರಿ ವಿಷಯದಲ್ಲಿ ಆದೇಶ ನೀಡಬೇಕು ಎಂದು ಮನವಿ ಮಾಡಿದರು. ಗಿರೀಜಾ ಲೋಕೇಶ್ ಮಾತನಾಡಿ, ಕೆಆರ್ಎಸ್ ಅಣೆಕಟ್ಟು ಇರುವ ಮಂಡ್ಯದಲ್ಲೇ ಜನ ನೀರು ಸಂಗ್ರಹಿಸಿಟ್ಟುಕೊಳ್ಳಲು ಪ್ರತಿಮನೆಯಲ್ಲೂ ಡ್ರಮ್ ಇಟ್ಟುಕೊಂಡಿದ್ದಾರೆ.

ಅಣೆಕಟ್ಟೆಯ ಸಮೀಪದಲ್ಲೇ ಇಂತಹ ಪರಿತಸ್ಥಿತಿ ಯಾಕೆ ಎಂದು ಕೇಳಿದರೆ ಎರಡು ಮೂರು ದಿನಕ್ಕೊಮ್ಮೆ ನೀರು ಬಿಡುತ್ತಾರೆ ಎಂದು ಅಲ್ಲಿನ ಜನ ಹೇಳುತ್ತಾರೆ. ಇಂತಹ ಸಂಕಷ್ಟ ಇರುವಾಗ ತಮಿಳುನಾಡಿಗೆ ಹೇಗೆ ನೀರು ಬೀಡಲು ಹೇಗೆ ಸಾಧ್ಯ ಎಂದರು.

RELATED ARTICLES

Latest News