ಬೆಳಗಾವಿ, ಡಿ. 15- ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅವೇಶನದ ಕೊನೆಯ ದಿನವಾದ ಇಂದು ಕಲಾಪದ ಆರಂಭದಲ್ಲಿ ಕೋರಂನ ಹಗ್ಗಜಗ್ಗಾಟ ಕಂಡುಬಂದಿತು. ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಬೆಳಿಗ್ಗೆ 9 ಗಂಟೆಗೆ ಸದನ ಸಮಾವೇಶಕ್ಕೆ ಸಮಯ ನಿಗದಿ ಮಾಡಿದ್ದರು. ಆದರೆ ಆಡಳಿತ ಪಕ್ಷದ ಕಡೆಯಿಂದ ಕೇವಲ ನಾಲ್ಕೈದು ಮಂದಿ ಸದಸ್ಯರು ಮಾತ್ರ ಸದನದಲ್ಲಿ ಹಾಜರಿದ್ದರು.
ಬಿಜೆಪಿಯಿಂದ ಸುಮಾರು 20 ಕ್ಕೂ ಹೆಚ್ಚು ಶಾಸಕರು ಉಪಸ್ಥಿತರಿದ್ದರು. ಆಡಳಿತ ಪಕ್ಷದ ಸಾಲಿನಲ್ಲಿ ಸದಸ್ಯರ ಕೊರತೆ ಇದ್ದುದ್ದರಿಂದ ಬಿಜೆಪಿ ಶಾಸಕರು ಸದನ ಕರೆದವರೇ ಸಮಯಕ್ಕೆ ಬಂದಿಲ್ಲ. ನಾವು ಏಕೆ ಹಾಜರಿದ್ದು ಕೋರಂಗೆ ಬೆಂಬಲ ಏಕೆ ನೀಡಬೇಕು ಎಂದು ಹೇಳುತ್ತಾ ಹೊರನಡೆದರು.
ಕೇಂದ್ರದಲ್ಲಿ ಮೋದಿ ಹ್ಯಾಟ್ರಿಕ್ ಸರ್ಕಾರ ಗ್ಯಾರಂಟಿ : ಸಮೀಕ್ಷೆ
ಸುಮಾರು ಅರ್ಧಗಂಟೆ ಕಾಲ ಸದನದ ಬೆಲ್ಲು ಬಾರಿಸುತ್ತಲೇ ಇತ್ತು. ಕೊನೆಗೆ ಸರ್ಕಾರದ ಮುಖ್ಯ ಸಚೇತಕ ಪಿ.ಎಂ.ಅಶೋಕ್ ಅವರು ಸದನದ ಮೊಗಸಾಲೆಯಲ್ಲಿದ್ದ ಕಾಂಗ್ರೆಸ್ ಶಾಸಕರನ್ನು ಒಳಗೆ ಕರೆತಂದರು. ಆದರೂ ಕೋರಂಗೆ ಸಂಖ್ಯೆ ಸಾಲದಿದ್ದಾಗ ಬಿಜೆಪಿ ಪಾಳಯದತ್ತ ಬಂದು ಹಿರಿಯ ಶಾಸಕ ಸುರೇಶ್‍ಕುಮಾರ್ ಅವರಲ್ಲಿ ಮೂರ್ನಾಲ್ಕು ಮಂದಿ ಶಾಸಕರನ್ನು ಒಳಗೆ ಬರುವಂತೆ ಹೇಳಿ ಕೋರಂ ಆಗುತ್ತಲೆ ಕಲಾಪ ಶುರು ಮಾಡೋಣ ಎಂದು ಮನವಿ ಮಾಡಿಕೊಂಡರು.
ಅಷ್ಟರಲ್ಲಿ ಕಾಂಗ್ರೆಸ್ ಶಾಸಕರುಗಳೇ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರಿಂದಾಗಿ ಕಲಾಪ ಆರಂಭಿಸಿದಾಗ ಬೆಲ್ಲು ನಿಲ್ಲಿಸಲಾಯಿತು. ಸಭಾಂಗಣದ ಒಳಗೆ ಬರುವಾಗ ಬಿಜೆಪಿ ಶಾಸಕರು, ನಾವು ಒಳಗೆಬರಲಿ ಎಂಬ ಕಾರಣಕ್ಕಾಗಿಯೇ ಬೆಲ್ ನಿಲ್ಲಿಸಿದ್ರಾ ಹೇಗೆ ಎಂದು ಅನುಮಾನ ವ್ಯಕ್ತಪಡಿಸುತ್ತಲೇ ಬಂದರು.