ಬೆಳಗಾವಿ, ಡಿ. 15- ಶಾಸಕರು ಜಾರಿ ಬಿದ್ದ ಪ್ರಸಂಗ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. ಪ್ರಶ್ನೋತ್ತರದ ಅವಧಿಯಲ್ಲಿ ಬಹಳಷ್ಟು ಮಂದಿ ಶಾಸಕರು ತಡವಾಗಿ ಬಂದರು. ಅವರಿಗೆ ಸರದಿ ದಾಟಿದ್ದರೂ ಕೂಡ ಪ್ರಶ್ನೆ ಕೇಳಲು ಸಭಾಧ್ಯಕ್ಷರು ಅವಕಾಶ ಮಾಡಿಕೊಡುತ್ತಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್‍ನ ರಾಣೆಬೆನ್ನೂರು ಕ್ಷೇತ್ರದ ಶಾಸಕ ಪ್ರಕಾಶ್ ಕೋಳಿವಾಡ ಅವರಿಗೂ ಅವಕಾಶ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ವಿಳಂಬ ಏಕೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್‍ರವರು ಪ್ರಶ್ನಿಸಿದರು.
ಇದಕ್ಕೆ ತಾವು ನಿನ್ನೆ ಸುವರ್ಣಸೌಧದಲ್ಲಿ ಮೆಟ್ಟಿಲುಗಳ ಮೇಲೆ ಜಾರಿ ಬಿದ್ದಿದ್ದಾಗಿ ಕೋಳಿವಾಡ ಉತ್ತರಿಸಿದರು. ತಾವು ಮೆಟ್ಟಲಿಳಿಯುವಾಗ ಬಿದ್ದು ಪೆಟ್ಟಾಯಿತು. ಇಂದು ಬೆಳಿಗ್ಗೆ ಎಕ್ಸರೇ ಮಾಡಿಸಿಕೊಳ್ಳಲು ಹೋಗಿದ್ದೆ. ಹೀಗಾಗಿ ತಡವಾಯಿತು ಎಂದು ವಿವರಣೆ ನೀಡಿದರು.
ಕಾಂಗ್ರೆಸ್‍ನ ಶಾಸಕ ಮಾಲತೇಶ್ ಕೌಜಲಗಿ, ಯಾಕೆ ಬಿದ್ದಿರಿ ಎಂದು ಕಿಚಾಯಿಸಿದರು.ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಕೂಡ ಅದೇ ರೀತಿಯ ಪ್ರಶ್ನೆಯ ಮೂಲಕ ಪ್ರಕಾಶ್ ಕೋಳಿವಾಡರ ಕಾಲೆಳೆದರು.
ಕೇಂದ್ರದಲ್ಲಿ ಮೋದಿ ಹ್ಯಾಟ್ರಿಕ್ ಸರ್ಕಾರ ಗ್ಯಾರಂಟಿ : ಸಮೀಕ್ಷೆ
ಅದಕ್ಕೆ ಉತ್ತರಿಸಿದ ಪ್ರಕಾಶ್ ಕೋಳಿವಾಡ ಸುವರ್ಣಸೌಧದಲ್ಲಿ ಹಗಲು ಹೊತ್ತಿನಲ್ಲೇ ಬಿದ್ದೆ. ಎಲ್ಲರನ್ನೂ ನಿಮ್ಮಂತೆಯೇ ಎಂದು ಅಂದುಕೊಳ್ಳಬೇಡಿ ಎಂದು ಹಾಸ್ಯಮಿಶ್ರಿತ ಧಾಟಿಯಲ್ಲಿ ತಿರುಗೇಟು ನೀಡಿದರು.ಬಿದ್ದು ಕಾಲು ನೋವಾಗಿದ್ದರೂ ಕ್ಷೇತ್ರದ ಜನರ ಪರವಾಗಿ ಕಾಳಜಿ ಇಟ್ಟುಕೊಂಡು ಕಲಾಪಕ್ಕೆ ಬಂದು ಪ್ರಶ್ನೆ ಕೇಳುತ್ತಿರುವ ಕೋಳಿವಾಡರಿಗೆ ಅಭಿನಂದನೆಗಳು ಎಂದು ಸಭಾಧ್ಯಕ್ಷರು ಹೇಳಿದರು.
ಪ್ರಶ್ನೋತ್ತರದ ಕಲಾಪದಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನುಪ್ರಕಾಶ್ ಕೋಳಿವಾಡ ಕೇಳುತ್ತಿದ್ದಾಗ ನಿಮಗೆ ಕಾಲುನೋವು ಇದೆ ಹೆಚ್ಚು ಹೊತ್ತು ನಿಂತುಕೊಳ್ಳಬೇಡಿ ಕುಳಿತುಕೊಳ್ಳಿ ಎಂದು ಸಭಾಧ್ಯಕ್ಷರು ಸಮಾಧಾನ ಹೇಳಿದರು.