ಬೆಂಗಳೂರು, ಡಿ.1- ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ಆರ್.ವಿ.ದೇವರಾಜ್ ಹೃದಯಘಾತದಿಂದ ನಿನ್ನೆ ರಾತ್ರಿ ನಿಧನವಾಗಿದ್ದಾರೆ.ಡಿಸೆಂಬರ್ 3ರಂದು ತಮ 67ನೇ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ಚಾಮುಂಡಿಬೆಟ್ಟ, ಗೋಪಾಲಸ್ವಾಮಿಬೆಟ್ಟ ಹಾಗೂ ನಂಜನಗೂಡಿನ ನಂಜುಂಡೇಶ್ವರ ಸ್ವಾಮಿಯ ದರ್ಶನ ಪಡೆಯುವ ಸಲುವಾಗಿ ನಿನ್ನೆ ಮಧ್ಯಾಹ್ನ ಮೈಸೂರಿಗೆ ತೆರಳಿದ್ದವರು.
ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು. ರಾತ್ರಿ ಸ್ನೇಹಿತರ ಜೊತೆ ಮಾತನಾಡುತ್ತಾ 8.30ರವರೆಗೂ ಕಾಲ ಕಳೆದಿದ್ದರು. ಆನಂತರ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಅಲ್ಲಿಂದ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ನಿಧನರಾಗಿದ್ದಾರೆ ಎಂದು ತಿಳಿಸಲಾಗಿದೆ.
ಪಾರ್ಥಿವ ಶರೀರವನ್ನು ಮೈಸೂರಿನಿಂದ ಬೆಂಗಳೂರಿಗೆ ತಂದು ಇಂದು ಬೆಳಗ್ಗೆ ಕೆ.ಆರ್.ಮಾರುಕಟ್ಟೆಯಲ್ಲಿ ಜೆ.ಸಿ.ರಸ್ತೆ ಕಚೇರಿಯ ಬಳಿ ನಂತರ ಕೆ.ಆರ್.ಮಾರುಕಟ್ಟೆಯ ಬಳಿ ಇರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಬಿಜೆಪಿ ಸಂಸದ ಡಾ.ಕೆ.ಸುಧಾಕರ್, ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಮತ್ತಿತರರು ಅಂತಿಮ ದರ್ಶನ ಪಡೆದಿದ್ದಾರೆ.
ಆರ್.ವಿ.ದೇವರಾಜ್ ಅವರು 1989, 1999ರಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಅವರು ಶಾಸನ ಸಭೆಗೆ ಆಯ್ಕೆಯಾಗಲು ತಮ ಚಾಮರಾಜಪೇಟೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಖುದ್ದು ತಾವೇ ನಿಂತು ಚುನಾವಣೆ ಪ್ರಚಾರ ನಡೆಸಿ 13 ಸಾವಿರ ಮತಗಳ ಅಂತರದಿಂದ ಎಸ್.ಎಂ.ಕೃಷ್ಣರನ್ನು ಗೆಲ್ಲಿಸಿಕೊಂಡು ಬಂದಿದ್ದರು. ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ಚಿಕ್ಕಪೇಟೆ ಕ್ಷೇತ್ರಕ್ಕೆ ಸ್ಥಳಾಂತರಗೊಂಡಿದ್ದರು.
2013ರಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ವಿಧಾನ ಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಪತ್ನಿ ಪ್ರೇಮ ಮತ್ತು ಪುತ್ರ ಯುವರಾಜ್ ಅವರನ್ನು ಅಗಲಿದ್ದಾರೆ. ಕಾಂಗ್ರೆಸ್ ನಲ್ಲಿ ಪ್ರಭಾವಿ ನಾಯಕನಾಗಿದ್ದ ಅರ್.ವಿ.ದೇವರಾಜ್ ಅವರು ಎಸ್.ಎಂ.ಕೃಷ್ಣರವರ ಸರ್ಕಾರದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಈಗಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತ್ತು ಆರ್.ವಿ.ದೇವರಾಜ್ ಇಬ್ಬರೂ ಎಸ್.ಎಂ.ಕೃಷ್ಣ ಅವರ ಎಡಗೈ, ಬಲಗೈ ಎಂಬಂತೆ ಗುರುತಿಸಿಕೊಂಡಿದ್ದರು.
ದೇವರಾಜ್ ಅವರ ಅಂತಿಮ ದರ್ಶನದ ವೇಳೆಯಲ್ಲಿ ಅವರ ಅಭಿಮಾನಿಗಳು, ಬೆಂಬಲಿಗರು ಎದೆ ಬಡಿದುಕೊಂಡು ಅಳುತ್ತಿದ್ದದ್ದು ಮನಕಲುಕುವಂತಿತ್ತು. ನಾಳೆ ಕನಕಪುರದ ಸೋಮನಹಳ್ಳಿ ಬಳಿಯ ತೋಟದ ಮನೆಯಲ್ಲಿ ದೇವರಾಜ್ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
