ಬೆಳಗಾವಿ, ಡಿ. 15- ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಅನು ಮತಿಯನ್ನು ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಸಭೆ ಹಿಂಪಡೆದ ವಿಷಯ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ವಾಕ್ಸಮರಕ್ಕೆ ಕಾರಣವಾಯಿತು.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನಿಲುವಳಿ ಸೂಚನೆಯಡಿ ತಾವು ನೀಡಿದ್ದ ಪ್ರಸ್ತಾವನೆಯನ್ನು ಮಂಡಿಸಲು ಅವಕಾಶ ನೀಡಬೇಕು ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಕೋರಿದರು. ವಿಧಾನಪರಿಷತ್ನಲ್ಲಿ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ಇದೇ ವಿಚಾರದ ಬಗ್ಗೆ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡಿ ಚರ್ಚೆಗೆ ಅವಕಾಶ ನೀಡುವಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರಲ್ಲಿ ವಿನಂತಿಸಿದರು.
ಈ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಚರ್ಚೆಗೆ ಅವಕಾಶ ನೀಡಲು ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ನಿರಾಕರಿಸಿದರು. ವಿಧಾನಸಭೆಯಲ್ಲಿ ಅಶೋಕ್ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡುವ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ನ ಶಾಸಕ ಬಸವರಾಜರಾಯರೆಡ್ಡಿ ಮತ್ತು ಇತರರು ಪಟ್ಟು ಹಿಡಿದರು. ಶಾಸಕರನ್ನು ಸಮಾಧಾನಪಡಿಸಿದ ಸಭಾಧ್ಯಕ್ಷರು ವಿಪಕ್ಷ ನಾಯಕರಿಗೆ ನಿಲುವಳಿ ಸೂಚನೆಯ ಪೂರ್ವಭಾವಿ ಪ್ರಸ್ತಾವನೆಗೆ ಅವಕಾಶ ಮಾಡಿಕೊಟ್ಟರು.
ಕಾಂಗ್ರೆಸ್ ಶಾಸಕ ಎಚ್.ಡಿ.ರಂಗನಾಥ್ ಮಾತನಾಡಿ, ರಾಯರೆಡ್ಡಿಯವರಿಗೆ ಮಾತನಾಡಲು ಸಭಾಧ್ಯಕ್ಷರು ಆಹ್ವಾನಿಸಿ ಈಗ ಮಧ್ಯದಲ್ಲಿ ತಡೆದು ವಿಪಕ್ಷ ನಾಯಕರಿಗೆ ನಿಲುವಳಿ ಪ್ರಸ್ತಾವನೆಗೆ ಅವಕಾಶ ಮಾಡಿಕೊಟ್ಟಿದ್ದೇಕೆ, ವಿರೋಧ ಪಕ್ಷದ ನಾಯಕರು ಈ ಕಲಾಪದಲ್ಲಿ ಫುಲ್ ಆಕ್ಟಿಂಗ್ ಮಾಡಿದ್ದಾರೆ. ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ಇನ್ನೂ ಎಷ್ಟು ಸಮಯ ಅವರಿಗೆ ಬೇಕು, ಈ ರೀತಿ ನಡೆದುಕೊಳ್ಳುತ್ತಿರುವುದು ಒಳ್ಳೆಯದಲ್ಲ ಎಂದರು.
ಆಕ್ಷೇಪದ ನಡುವೆಯೂ ಅವಕಾಶ ಪಡೆದ ಆರ್.ಅಶೋಕ್ ಮಾತನಾಡಿ, ಈ ಹಿಂದೆ ಯಡಿಯೂರಪ್ಪ ಅವರ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿರುವುದು ಸರಿಯಲ್ಲ. ಸಚಿವ ಸಂಪುಟದ ಪಾವಿತ್ರ್ಯತೆಗೆ ಧಕ್ಕೆಯುಂಟು ಮಾಡಿದೆ. ಆಗಿನ ಸರ್ಕಾರ ಸ್ವಯಂಪ್ರೇರಿತ ಹಾಗೂ ರಾಜಕೀಯವಾಗಿ ನಿರ್ಧಾರ ತೆಗೆದುಕೊಳ್ಳಲಿಲ್ಲ. ಜಾರಿ ನಿರ್ದೇಶನಾಲಯದ ಪತ್ರ ಆಧರಿಸಿ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಕ್ರಮ ಕೈಗೊಂಡಿದೆ.
ಒಂದು ಪ್ರಕರಣದಲ್ಲಿ ಮಾತ್ರ ಪೂರ್ವಾನುಮತಿಯನ್ನು ಹಿಂಪಡೆಯುವುದಾದರೆ ಶಾಸಕ ಜನಾರ್ಧನರೆಡ್ಡಿಯವರ ಮೇಲೂ ಹಲವು ಪ್ರಕರಣಗಳಿವೆ. ಸಚಿವರಾಗಿರುವ ನಾಗೇಂದ್ರ ಅವರ ಮೇಲೆ 23 ಪ್ರಕರಣಗಳಿವೆ. ಅದರ ಜೊತೆಯಲ್ಲಿ ಹಿಂದೆ ಕಾಂಗ್ರೆಸ್ ಸರ್ಕಾರ ಯಡಿಯೂರಪ್ಪ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಿದೆ. ಅವುಗಳನ್ನು ಹಿಂಪಡೆಯಬೇಕಲ್ಲವೇ ಎಂದು ಪ್ರಶ್ನಿಸಿದರು.
ಮಧ್ಯಪ್ರವೇಶಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಇದು ಸಾರ್ವಜನಿಕ ಮಹತ್ವದ ವಿಷಯ ಅಲ್ಲ. ಜೊತೆಗೆ ಪ್ರಕರಣ ನ್ಯಾಯಾಲಯದಲ್ಲಿದೆ. ವೈಯಕ್ತಿಕವೂ ಕೂಡ ಆಗಿದೆ. ಅದನ್ನೂ ನಿಲುವಳಿ ಸೂಚನೆಯಡಿ ಚರ್ಚಿಸಲು ಅವಕಾಶವಿಲ್ಲ ಎಂದು ಆಗ್ರಹಿಸಿದರು.
ಆರ್.ಅಶೋಕ್ ಅವರು ಮಾತನಾಡಿ, ಪ್ರಕರಣದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಅವಕಾಶವನ್ನು ನ್ಯಾಯಾಲಯಕ್ಕೆ ಬಿಡಬೇಕಿತ್ತು.
ಸರ್ಕಾರ ತನಗೆ ತೋಚಿದಂತೆ ನಿರ್ಣಯ ಕೈಗೊಂಡು ನ್ಯಾಯಾಂಗದ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದೆ ಎಂದು ಆಕ್ಷೇಪಿಸಿದರು. ಬಿಜೆಪಿಯ ಸುನಿಲ್ಕುಮಾರ್ ಮಾತನಾಡಿ, ಇದು ವೈಯಕ್ತಿಕ ವಿಚಾರ ಆಗುವುದಿಲ್ಲ. ಸಚಿವ ಸಂಪುಟಕ್ಕೆ ಇದಕ್ಕಿಂತಲೂ ಆದ್ಯತೆ ವಿಷಯಗಳಿವೆ. ಭ್ರಷ್ಟಾಚಾರವನ್ನು ಮುಚ್ಚಿ ಹಾಕುವ ಪ್ರಯತ್ನಗಳಾಗುತ್ತಿವೆ ಎಂದು ಕಿಡಿಕಾರಿದರು.
ಭ್ರಷ್ಟಾಚಾರದ ವಿರುದ್ಧ ನಾವು ಪಾಠ ಕಲಿಯಬೇಕಿಲ್ಲ ಮತ್ತು ಈ ಚರ್ಚೆ ಮಾಡುವುದರಿಂದ ನ್ಯಾಯಾಂಗ ನಿಂದನೆಯಾಗಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ವಾದಿಸಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಗಳು ನಡೆದವು.
ನ್ಯಾಯಾಲಯದಲ್ಲಿ ಪ್ರಕರಣಗಳಿದ್ದರೂ ಕೂಡ ಸಭಾಧ್ಯಕ್ಷರ ವಿವೇಚನೆಗೆ ಸರಿಯೆನಿಸಿದರೆ ಚರ್ಚೆಗೆ ಅವಕಾಶ ನೀಡಬಹುದು ಎಂದು ಆರ್.ಅಶೋಕ್ ವಾದಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಸರ್ಕಾರದ ನಿರ್ಧಾರವನ್ನು ಖಂಡಿಸಿದರು.ಕಾಂಗ್ರೆಸ್ ಶಾಸಕ ಬಸವರಾಯರೆಡ್ಡಿ ಮಾತನಾಡಿ, ಡಿ.ಕೆ.ಶಿವಕುಮಾರ್ರ ವಿರುದ್ಧ ಭ್ರಷ್ಟಾಚಾರದಡಿ ಪ್ರಕರಣ ದಾಖಲಾಗಿಲ್ಲ. ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಚರ್ಚೆ ನಡೆಸಲು ಇಲ್ಲಿ ಅವಕಾಶವಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಂಪುಟದ ನಿರ್ಣಯವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ ಎಂದು ಸರ್ಕಾರದ ಬೆಂಬಲಕ್ಕೆ ಬಂದರು. ಈ ಸಂದರ್ಭದಲ್ಲಿ ಬಿಜೆಪಿ ಸುರೇಶ್ಕುಮಾರ್ ಮತ್ತು ರಾಯರೆಡ್ಡಿ ನಡುವೆ ವಾದ-ಪ್ರತಿವಾದಗಳು ನಡೆದವು.
ಕೊನೆಗೆ ಸಭಾಧ್ಯಕ್ಷರು ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನಿಲುವಳಿ ಚರ್ಚೆಗೆ ಅವಕಾಶವಿಲ್ಲ. ನ್ಯಾಯಾಲಯವೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿ ವಿರೋಧಪಕ್ಷಗಳ ನಿಲುವಳಿ ಸೂಚನಾ ಪ್ರಸ್ತಾಪವನ್ನು ತಿರಸ್ಕರಿಸಿ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಅವಕಾಶ ಮಾಡಿಕೊಟ್ಟರು.
ಚರ್ಚೆಗೆ ಬಿಜೆಪಿ ಆಗ್ರಹ :
ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡಿ ಉಪಮುಖ್ಯ ಮಂತ್ರಿ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಕೇಸ್ ವಾಪಸ್ ಪಡೆದಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಇದೊಂದು ಗಂಭೀರ ಪ್ರಕರಣ. ಈ ವಿಚಾರದ ಬಗ್ಗೆ ಚರ್ಚೆ ಮಾಡುವುದಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಬಿಜೆಪಿ ಇದನ್ನು ನಿಲುವಳಿ ಸೂಚನೆಗೆ ಎತ್ತಿಕೊಂಡಿದ್ದೇ ತಪ್ಪು. ಯಾವ ವಿಚಾರ ಕೋರ್ಟ್ನಲ್ಲಿದೆಯೋ ಅದನ್ನೇ ಚರ್ಚೆಗೆ ತಂದರೆ ಹೇಗೆ? ಇದನ್ನು ಕೈಬಿಡಬೇಕು ಎಂದು ಮನವಿ ಮಾಡಿದರು. ಕೋರ್ಟ್ನಲ್ಲಿ ಪ್ರಕರಣ ಬಾಕಿ ಇರುವಾಗ ಚರ್ಚೆಗೆ ಅವಕಾಶ ನೀಡುವುದಿಲ್ಲ, ಇದು ನ್ಯಾಯಾಂಗ ನಿಂದನೆ ಆಗುತ್ತದೆ. ಹೀಗಾಗಿ ಚರ್ಚೆಗೆ ಅವಕಾಶವಿಲ್ಲ ಎಂದು ಸಭಾಪತಿ ಹೊರಟ್ಟಿ ರೂಲಿಂಗ್ ನೀಡಿದರು.
ಇದನ್ನು ಒಪ್ಪದೇ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಸದಸ್ಯರು ಆಗ್ರಹಪಡಿಸಿದರು. ಸಭಾಪತಿ ರೂಲಿಂಗ್ ಕೊಟ್ಟ ಮೇಲೂ ಮಾತನಾಡುವುದು ಗೌರವ ಅಲ್ಲ ಎಂದು ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರದ ಬಗ್ಗೆ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆದಾಗ ಮಧ್ಯಪ್ರವೇಶಿಸಿದ ಸಭಾಪತಿ, ಈ ವಿಷಯದ ಮೇಲೆ ಮತ್ತೆ ಮಾತಾಡಬೇಡಿ, ಹುಡುಗಾಟ ಮಾಡಬೇಡಿ ಎಂದು ಗರಂ ಆಗಿ ಮುಂದಿನ ಕಲಾಪ ಕೈಗೆತ್ತಿಕೊಂಡಾಗ ಚರ್ಚೆಗೆ ತೆರೆ ಬಿದ್ದಿತು.