ಬೆಂಗಳೂರು,ಡಿ.15- ಕಾಂಗ್ರೆಸ್ ನಾಯಕರು ಕರೆದಿದ್ದ ಭೋಜನಕೂಟದಲ್ಲಿ ಭಾಗವಹಿಸಿ ಪಕ್ಷದ ಶಿಸ್ತು ಉಲ್ಲಂಘಿಸಿರುವ ಶಾಸಕರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ. ಕಳೆದ ಬುಧವಾರ ಕಾಂಗ್ರೆಸ್ ಶಾಸ ಕರಿಗೆ ಬೆಳಗಾವಿಯ ಹೊರಭಾಗದ ರೆಸಾರ್ಟ್ ನಲ್ಲಿ ಔತಣಕೂಟವನ್ನು ಏರ್ಪಡಿಸಲಾಗಿತ್ತು.
ಈ ಸಭೆಗೆ ಶಾಸಕರಾದ ಎಸ್.ಟಿ.ಸೋಮಶೇಖರ್(ಯಶವಂತಪುರ), ಶಿವರಾಮ್ ಹೆಬ್ಬಾರ್(ಯಲ್ಲಾಪುರ) ಹಾಗೂ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರುಗಳು ಭಾಗವಹಿಸುವ ಮೂಲಕ ಬಿಜೆಪಿಗೆ ಮುಜುಗರ ಸೃಷ್ಟಿಸಿದ್ದರು. ಈ ಮೂವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ವೇದಿಕೆ ಸಜ್ಜು ಮಾಡುತ್ತಿದ್ದಾರೆ ಎಂದು ಸುಳಿವು ಅರಿತಿರುವ ಹೈಕಮಾಂಡ್ ಇವರ ಮೇಲೆ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಈ ಮೂವರಿಗೂ ಕಾರಣ ಕೇಳಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸದ್ಯದಲ್ಲೇ ನೋಟಿಸ್ ಜಾರಿ ಮಾಡಲಿದ್ದಾರೆ. ಒಂದು ವೇಳೆ ನೋಟಿಸ್ಗೆ ಸಮರ್ಪಕವಾದ ಉತ್ತರ ಬಾರದಿದ್ದಲ್ಲಿ ಇವರ ವಿರುದ್ಧ ಕ್ರಮ ಜರುಗಿಸಲು ಪಕ್ಷದ ವರಿಷ್ಠರಿಗೆ ಶಿಫಾರಸ್ಸು ಮಾಡುವ ಸಾಧ್ಯತೆ ಇದೆ.
ಅವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಪ್ರತಿಪಕ್ಷದ ನಾಯಕರು ಕರೆದಿದ್ದ ಔತಣಕೂಟಕ್ಕೆ ಭಾಗವಹಿಸಿದ್ದರಿಂದ ಬಿಜೆಪಿಗೆ ಭಾರೀ ಮುಜುಗರ ಸೃಷ್ಟಿಯಾಗಿತ್ತು. ನಾವು ಕೇವಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಹ್ವಾನದ ಮೇರೆಗೆ ಹೋಗಿದ್ದೆವು ಎಂದು ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಹೇಳಿದ್ದರಾದರೂ ವಿಶ್ವನಾಥ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಭವಿಷ್ಯದಲ್ಲಿ ಇನ್ನು ಕೆಲವರು ಅಶಿಸ್ತು ತೋರುವ ಸಾಧ್ಯತೆ ಇರುವುದರಿಂದ ಬಂಡಾಯವನ್ನು ಪ್ರಾರಂಭದಲ್ಲೇ ಚಿವುಟಿ ಹಾಕುವ ಪ್ರಯತ್ನಕ್ಕೆ ಪಕ್ಷ ಕೈ ಹಾಕಿದೆ.
ಒಂದು ಮೂಲದ ಪ್ರಕಾರ ಕಾಂಗ್ರೆಸ್ ಔತಣಕೂಟದಲ್ಲಿ ಭಾಗಿಯಾಗಿರುವ ಈ ಮೂವರು ಪಕ್ಷದಿಂದಲೇ ಉಚ್ಛಾಟನೆ ಮಾಡುವಂತೆ ಕೆಲ ಶಾಸಕರು ವರಿಷ್ಠರಿಗೆ ಒತ್ತಡ ಹಾಕಿದ್ದಾರೆ. ಆಪರೇಷನ್ ಕಮಲ ವದ್ದಂತಿ ಹಬ್ಬಿಸುತ್ತಿರುವ ಕಾಂಗ್ರೆಸ್ ನಾಯಕರ ಜೊತೆ ಕೈ ಜೋಡಿಸಿರುವ ಈ ಮೂವರು ಅಧಿಕಾರ ನೀಡಿದ ಪಕ್ಷಕ್ಕೆ ವಿಶ್ವಾಸ ದ್ರೋಹ ಮಾಡಿದ್ದಾರೆ. ಹೀಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟನೆ ಮಾಡಬೇಕೆಂಬ ಒತ್ತಡವೂ ಕೇಳಿಬಂದಿದೆ.ಆದರೆ ಈ ಮೂವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ , ಹಾಲಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಆತ್ಮೀಯರಾಗಿರುವುದರಿಂದ ಶಿಸ್ತುಕ್ರಮ ಜರುಗಿಸಲು ಮೃಧು ಧೋರಣೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಅಸಮಾಧಾನ ಕೇಳಿಬಂದಿದೆ.
ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರ ಎಸ್.ಟಿ.ಸೋಮಶೇಖರ್ ಅವರನ್ನು ಖುದ್ದು ಯಡಿಯೂರಪ್ಪನವರೇ ಮನೆಗೆ ಆಹ್ವಾನಿಸಿ ಮಾತುಕತೆ ನಡೆಸಿದ್ದರು. ನನ್ನನ್ನು ಕೆಲವರು ಬಿಜೆಪಿಯಿಂದ ಹೊರ ಹಾಕಲು ವೇದಿಕೆ ಸಿದ್ದಪಡಿಸಿದ್ದಾರೆ. ನನಗೆ ಹೈಕಮಾಂಡ್ ಏನಿದ್ದರೂ ಯಡಿಯೂರಪ್ಪನವರೇ ಎಂದು ಎಸ್.ಸೋಮಶೇಖರ್ ಹೇಳುವ ಮೂಲಕ ರಕ್ಷಣಾತ್ಮಕ ಆಟವಾಡಿದ್ದರು.
ಒಂದು ಮೂಲದ ಪ್ರಕಾರ ಲೋಕಸಭೆ ಚುನಾವಣೆ ಮೂರು ತಿಂಗಳು ಇರುವ ಮುನ್ನ ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ.ಸೋಮಶೇಖರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಗಿದ್ದಾರೆ. ನಮಗೆ ಬಿಜೆಪಿಯಲ್ಲಿ ಅನ್ಯಾಯವಾಗಿದೆ ಎಂದು ಹೇಳುವ ಮೂಲಕ ಮತದಾರರ ಅನುಕಂಪ ಗಿಟ್ಟಿಸಿಕೊಳ್ಳುವ ರಾಜಕೀಯ ತಂತ್ರವನ್ನು ರೂಪಿಸಿದ್ದಾರೆ. ಇನ್ನು ಬಿಜೆಪಿಯ ಖಾಯಂ ಭಿನ್ನಮತೀಯ ನಾಯಕನೆಂದೇ ಹೇಳೀಕೊಂಡಿರುವ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಮಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡುಗು ಕ್ಷೇತ್ರದಿಂದ ಟಿಕೆಟ್ ನೀಡಿದರೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್ ನಾಯಕರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಇದರ ಎಲ್ಲ ಸುಳಿವು ಅರಿತಿರುವ ಬಿಜೆಪಿ ನಾಯಕರು ಹೋದರೆ ಮೂವರು ಹೋಗಲಿ ಕಡೆಪಕ್ಷ ಉಳಿದವರಾದರೂ ಶಿಸ್ತಿನಿಂದ ವರ್ತಿಸಲಿ ಎಂಬ ಕಾರಣಕ್ಕಾಗಿ ಪಕ್ಷ ವಿರೋ ತೂಗುಗತ್ತಿಗೆ ಸಿಲುಕಿರುವ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಮತ್ತು ವಿಶ್ವನಾಥ್ಗೆ ಪಕ್ಷ ಉಚ್ಛಾಟನೆ, ಅಮಾನತ್ತು ಇಲ್ಲವೇ ನೋಟಿಸ್ ಮೂಲಕ ಬಾಯಿ ಮುಚ್ಚಿಸುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ.
ಅಂತಿಮವಾಗಿ ಇದರಲ್ಲಿ ವಿಶ್ವನಾಥ್ ಬಿಜೆಪಿ ಬಿಟ್ಟು ಹೋಗಲಿ ಎಂದು ಬಹುತೇಕರು ಕಾಯುತ್ತಿದ್ದು, ಕೊನೆ ಕ್ಷಣದವರೆಗೆ ಹೆಬ್ಬಾರ್ ಮತ್ತು ಸೋಮಶೇಖರ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಯತ್ನವನ್ನು ಬಿಜೆಪಿ ಮಾಡಲಿದೆ. ಅಂತಿಮವಾಗಿ ಇವರ ನಡವಳಿಕೆಯೇ ಮೇಲೆಯೇ ಮುಂದಿನ ಭವಿಷ್ಯ ನಿಂತಿದೆ.