ಬೆಂಗಳೂರು,ಡಿ.2- ಲಿವಿಂಗ್- ಟು-ಗೆದರ್‌ನಲ್ಲಿದ್ದ ಸಂಗಾತಿ ಯನ್ನು ಕೊಲೆ ಮಾಡಿ ಪ್ರಿಯಕರನೂ ಆತಹತ್ಯೆ ಮಾಡಿಕೊಂಡಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಹೈದರಾಬಾದ್ ಮೂಲದ ಗದಗ ಲಲಿತಾ (49) ಎಂಬಾಕೆ ಯನ್ನು ಕೊಲೆ ಮಾಡಿ ಲಕ್ಷ್ಮೀ ನಾರಾಯಣ (51) ಎಂಬಾತ ಆತಹತ್ಯೆ ಮಾಡಿಕೊಂಡ ವ್ಯಕ್ತಿ.
ಗದಗ ಲಲಿತಾಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದು,ಯಾವುದೋ ಕಾರಣಕ್ಕೆ ಕುಟುಂಬದಿಂದ ಬೇರೆಯಾಗಿ ನಗರದ ರಬ್ಬರ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡು ವಾಸವಾಗಿದ್ದರು. ಕೊರಟಗೆರೆ ಮೂಲದ ಲಕ್ಷ್ಮೀನಾರಾಯಣನಿಗೂ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ. ಆತನೂ ಸಹ ಸಂಸಾರ ಬಿಟ್ಟು ಬಂದು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ತದ ನಂತರದ ದಿನಗಳಲ್ಲಿ ಇವರಿಬ್ಬರಿಗೂ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ ಪ್ರೀತಿಯಾಗಿದೆ. ಇವರಿಬ್ಬರೂ 8 ತಿಂಗಳಿನಿಂದ ದೊಡ್ಡ ಕೈಗಾರಿಕಾ ಪ್ರದೇಶದ ಇಂದಿರಾ ಪ್ರಿಯದರ್ಶಿನಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಸಹ ಜೀವನ (ಲಿವಿಂಗ್-ಟು-ಗೆದರ್) ನಡೆಸುತ್ತಿದ್ದರು.
ಪ್ರತಿ ನಿತ್ಯ ಎಂದಿನಂತೆ ಇಬ್ಬರು ಬೆಳಗ್ಗೆ ತಮ ತಮ ಕಾರ್ಖಾನೆಗಳಿಗೆ ಕೆಲಸಕ್ಕೆ ಹೋಗುತ್ತಿದ್ದರು. ರಾತ್ರಿ ಇವರಿಬ್ಬರೂ ಮದ್ಯಸೇವಿಸಿದ್ದು, ಯಾವುದೋ ವಿಚಾರಕ್ಕೆ ಜಗಳವಾಗಿದೆ. ಇದು ಅಕ್ಕಪಕ್ಕದ ಮನೆಯವರಿಗೂ ಕೇಳಿಸಿದೆ.ಇವರಿಬ್ಬರ ಗಲಾಟೆ ವಿಕೋಪಕ್ಕೆ ತಿರುಗಿದಾಗ ಕೋಪದ ಕೈಗೆ ಬುದ್ದಿಕೊಟ್ಟು ಲಲಿತಾ ಧರಿಸಿದ್ದ ವೇಲ್‌ನ್ನು ಕಿತ್ತುಕೊಂಡ ಲಕ್ಷ್ಮೀನಾರಾಯಣ ಅದರಿಂದಲೇ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ನಂತರ ಅದೇ ವೇಲ್‌ನಿಂದ ಮನೆಯ ತೀರಿಗೆ ನೇಣು ಬಿಗಿದುಕೊಂಡು ಆತ ಆತಹತ್ಯೆ ಮಾಡಿಕೊಂಡಿದ್ದಾನೆ.ಇಂದು ಬೆಳಗ್ಗೆ ಇವರ ಮನೆಯ ಬಾಗಿಲು ತೆರೆದಿಲ್ಲ. ರಾತ್ರಿ ಇವರ ಮನೆಯಲ್ಲಿ ಗಲಾಟೆಯಾಗಿರುವುದನ್ನು ಕೇಳಿಸಿಕೊಂಡಿದ್ದ ನೆರೆಹೊರೆಯವರಿಗೆ ಅನುಮಾನ ಬಂದು ಅವರ ಮನೆಯ ಬಳಿ ಹೋಗಿ ಕಿಟಕಿ ಮೂಲಕ ನೋಡಿದಾಗ ಇಬ್ಬರು ಸಾವನ್ನಪ್ಪಿರುವುದು ಕಂಡು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಮಹಿಳೆ ಕೊಲೆಯಾಗಿರುವುದು ಹಾಗೂ ವ್ಯಕ್ತಿ ಆತಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಇಬ್ಬರ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆ ಹಾಗೂ ಆತಹತ್ಯೆಗೆ ಕಾರಣ ನಿಗೂಢವಾಗಿದ್ದು, ತನಿಖೆ ಮುಂದುವರೆದಿದೆ.
