ಬೇಲೂರು,ಡಿ.3– ಕಾಫಿಗೆ ಉತ್ತಮ ಧಾರಣೆ ಬಂದಿರುವ ಹಿನ್ನೆಲೆಯಲ್ಲಿ ಬೇಲೂರಿನಲ್ಲಿ ಕಾಫಿ ಬೀಜ ಕಳ್ಳರ ಕಾಟ ಹೆಚ್ಚಾಗಿದ್ದು, ತಾಲೂಕಿನ ಅರೇಹಳ್ಳಿ ಹಾಗೂ ಬಿಕ್ಕೋಡು ಸಮೀಪದ ಮಳವಳ್ಳಿ (ಕೌರಿ) ಗ್ರಾಮದಲ್ಲಿ ಕಳವಾಗಿದ್ದು, ಬೆಳೆಗಾರರಲ್ಲಿ ಆತಂಕ ಮನೆಮಾಡಿದೆ.
ತಾಲೂಕಿನ ಅರೇಹಳ್ಳಿ-ಬಿಕ್ಕೋಡು ಹೋಬಳಿಗಳಲ್ಲಿನ ಕಾಡಾನೆಗಳ ಉಪಟಳದ ನಡುವೆಯೂ ಬೆಳೆ ಬೆಳೆದಿರುವ ಬೆಳೆಗಾರರಿಗೆ ಒಂದೆಡೆ ಕಾಡಾನೆಗಳ ಉಪಟಳವಾದರೆ ಮತ್ತೊಂದು ಕಡೆ ಕಳ್ಳರ ಕಾಟ ಕಾಡತೊಡಗಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಬೆಲೆ ನಿಗದಿಯಾಗಿದ್ದು, ಕಳ್ಳಕಣ್ಣು ಕೊಯ್ಲು ಮಾಡಿಟ್ಟಿರುವ ತೋಟ ಹಾಗೂ ಮನೆಯ ಅಂಗಳದಲ್ಲಿ ಒಣಗಲು ಹಾಕಿರುವ ಕಾಫಿಯ ಮೇಲೆ ಬಿದ್ದಿದೆ.
ಈ ಕಾರಣಗಳಿಂದಾಗಿ ತಾಲೂಕಿನ ಅರೇಹಳ್ಳಿಯ ಮುನೀರ್‌ಎಂಬುವವರ ಕಣದಲ್ಲಿದ್ದ ಕಾಫಿ ಹಾಗೂ ಧನಂಜಯಮೂರ್ತಿಯವರು ಕೊಯ್ಲು ಮಾಡಿ ತೋಟದಲ್ಲಿದ್ದ 20 ಕ್ಕೂ ಹೆಚ್ಚು ಚೀಲಗಳಲ್ಲಿದ್ದ ಕಾಫಿಯನ್ನು ಕಳ್ಳರು ಕದ್ದಿರುವುದು ಕಂಡು ಬಂದಿರುವುದು ಬೆಳೆಗಾರರ ಮತ್ತು ಸಣ್ಣ ರೈತರ ಆತಂಕಕ್ಕೆ ಕಾರಣವಾಗಿದ್ದು ಕಾಫಿ ಕಳ್ಳರ ಕೈಚಳಕಕ್ಕೆ ಕಡಿವಾಣ ಹಾಕಬೇಕಿದೆ.
ಪೊಲೀಸರು ಇನ್ನಾದರೂ ರಾತ್ರಿ ಸಮಯ ಗ್ರಾಮಗಳಿಗೆ ಬೀಟ್ ಹೆಸರಲ್ಲಿ ಬಂದು ಹೋದರೆ ಮತ್ತು ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡರೆ ಕಳ್ಳತನಕ್ಕೆ ಕಡಿವಾಣ ಹಾಕಬಹುದಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕಿದೆ. ಜತೆಗೆ ಕಾಫಿ ಕಳ್ಳತನ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
