ಚಿಕ್ಕಮಗಳೂರು,ಡಿ.3- ದತ್ತ ಪೀಠದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರಿ ದಾಖಲೆ ಪರಿಶೀಲಿಸಿ ನ್ಯಾಯದ ಪರಿಪಾಲಕರಾಗಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿನಂತಿಸಿದರು.
ದತ್ತ ಜಯಂತಿ ಎರಡನೇ ದಿನವಾದ ಇಂದು ಬೆಳಿಗ್ಗೆ ದತ್ತ ಮಾಲಾಧಾರಿಗಳೊಂದಿಗೆ ನಗರದ ನಾರಾಯಣಪುರ ಮತ್ತು ರಾಘವೇಂದ್ರ ಸ್ವಾಮಿ ಮಠದ ರಸ್ತೆಯಲ್ಲಿರುವ ಮನೆಗಳಿಗೆ ತೆರಳಿ ಭಿಕ್ಷಾಟನೆ ಮಾಡಿ ಪಡಿ ಸಂಗ್ರಹಿಸಿ ನಂತರ ಮಾತನಾಡಿದ ಅವರು, ನಾವು ಪೂರ್ಣ ಪ್ರಮಾಣದಲ್ಲಿ ನ್ಯಾಯ ಕೇಳುತ್ತಿದ್ದೇವೆ. ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯದ ಬೇಡಿಕೆ ಇಟ್ಟಿದ್ದೇವೆ.
ಅದು ಆಗಿಲ್ಲ. ಹಾಗಾಗಿ ಮುಖ್ಯಮಂತ್ರಿಗಳಿಗೆ ವಿನಂತಿ ಮಾಡುತ್ತೇವೆ. ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ಸರ್ಕಾರಿ ದಾಖಲೆಗಳನ್ನು ಪರಿಶೀಲಿಸಿ ದತ್ತಪೀಠ ಬೇರೆ, ಬಾಬಾಬುಡನ್ ದರ್ಗಾ ಬೇರೆ, ಎಂದು ನಾವು ಹೇಳುತ್ತಾ ಬಂದಿದ್ದೇವೆ. ಎರಡು ಒಂದೇ ಎಂದು ಭಾವಿಸಿರುವದೇ ವಿವಾದಕ್ಕೆ ಕಾರಣವಾಗಿದೆ ಎಂದರು.
ಐದು ದಶಕದಿಂದ ಹೋರಾಟ ಮಾಡುತ್ತಿದ್ದೇವೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ತಕ್ಷಣ ನ್ಯಾಯ ಪಡೆಯುವುದು ಕಷ್ಟ . ನಿರಂತರ ಹೋರಾಟ ಮಾಡಿಯೇ ನ್ಯಾಯ ಪಡೆಯಬೇಕು. ಹಾಗಾಗಿ ಅದರ ಹೊರತಾಗಿಯೂ ಸರ್ಕಾರ ನ್ಯಾಯ ಕೊಡಲು ಸಾಧ್ಯ. ತಕ್ಷಣ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ನೇಮಕ ಮಾಡಿ ಎಂದರು.
ದತ್ತಾತ್ರೇಯ ಪೀಠ ಹಾಗೂ ಬಾಬಾಬುಡನ್ ದರ್ಗಾ ಎರಡು ಒಂದೇ ಎಂದು ಭಾವಿಸುವುದು ಅನ್ಯಾಯ ಪಶ್ಚಿಮ ಘಟ್ಟ ಸಾಲಿನಲ್ಲಿ ಬರುವ ನಾಗೇನಹಳ್ಳಿ ಯಲ್ಲಿ ಬಾಬಾಬುಡನ್ ದರ್ಗಾ ಇದೆ ಹಾಗಾಗಿ ನ್ಯಾಯದ ಪರಿಪಾಲಕರಾಗಿ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಪಡಿ ಸಂಗ್ರಹಿಸುವ ಕಾರ್ಯಕ್ರಮದಲ್ಲಿ ಸಿ.ಟಿ.ರವಿಯೊಂದಿಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಬಿಜೆಪಿ ಮುಖಂಡರಾದ ಕೋಟೆ ರಂಗನಾಥ್, ಸಚಿನ್ ಗೌಡ ಮೊದಲದವರಿದ್ದರು. ಶೋಭಾ ಯಾತ್ರೆ ಹೋಗುವ ದಾರಿಯುದ್ದಕ್ಕೂ ಬಿಗಿ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿತ್ತು. ನಾಳೆ ದತ್ತಪೀಠದಲ್ಲಿ ದತ್ತ ಜಯಂತಿ ಕಾರ್ಯಕ್ರಮ ನಡೆಯಲಿದೆ.
