ಕಲ್ಬುರ್ಗಿ,ಡಿ.20- ಸಂಸತ್‍ನ ಭದ್ರತಾ ಲೋಪದ ಪ್ರಕರಣದಲ್ಲಿ ಬಾಕಿ ಉಳಿದ ಇಬ್ಬರಿಗೆ ಪಾಸ್ ನೀಡಿದ್ದು, ಬಿಜೆಪಿಯ ಸಂಸದರು ಎಂಬ ಮಾಹಿತಿ ಇದ್ದು, ವಾಸ್ತವಾಂಶವನ್ನು ಬಹಿರಂಗಪಡಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಜನರನ್ನು ಬಂಧಿಸಲಾಗಿದೆ. ಅವರಲ್ಲಿ ಸಂಸತ್ ಪ್ರವೇಶಿಸಿದ ನಾಲ್ವರ ಪೈಕಿ ಇಬ್ಬರಿಗೆ ಪಾಸ್ ನೀಡಿದವರು ಮೈಸೂರಿನ ಲೋಕಸಭೆ ಸದಸ್ಯ ಪ್ರತಾಪ್ ಸಿಂಹ ಆದರೆ, ಬಾಕಿ ಉಳಿದ ಇನ್ನಿಬ್ಬರಿಗೆ ಪಾಸ್ ನೀಡಿದ್ದು ಯಾರು ಎಂಬುದನ್ನು ಬಹಿರಂಗಪಡಿಸಬೇಕು. ಕೆಲ ಮಾಹಿತಿಗಳ ಪ್ರಕಾರ, ಅವರಿಗೂ ಕೂಡ ಬಿಜೆಪಿ ಸಂಸದರೇ ಪಾಸ್ ನೀಡಿದ್ದರು ಎಂದು ಹೇಳಲಾಗುತ್ತಿದೆ ಎಂದರು.
ಪ್ರತಿ ವಿಷಯಕ್ಕೂ ಹೇಳಿಕೆ ನೀಡುವ ಪ್ರತಾಪ್ ಸಿಂಹ ಸಂಸತ್ ನುಗ್ಗಿದವರಿಗೆ ಪಾಸ್ ಕೊಟ್ಟ ಬಗ್ಗೆ ಈವರೆಗೆ ಸದನದ ಒಳಗಾಗಲಿ, ಹೊರಗಾಗಲಿ ಏಕೆ ಮಾತನಾಡುತ್ತಿಲ್ಲ. ಇಷ್ಟಕ್ಕೂ ಅವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಪ್ರತಾಪ್ ಸಿಂಹ ಅವರನ್ನು ವಿಚಾರಣೆಗೊಳಪಡಿಸುವ ಅಗತ್ಯವಿಲ್ಲ ಎಂದು ವಾದಿಸುವ ಕಲ್ಬುರ್ಗಿಯ ಸಂಸದ ಉಮೇಶ್ ದಾದವ್ ಅವರಿಗೆ ಬುದ್ಧಿ ಹಾಗೂ ಜವಾಬ್ದಾರಿ ಇಲ್ಲ. ಇದೊಂದು ಗಂಭೀರ ಪ್ರಕರಣ ಎಂದು ಖುದ್ದು ಪ್ರಧಾನಿಯವರೇ ಸ್ಪಷ್ಟಪಡಿಸಿದ್ದಾರೆ.
ಸಂಸತ್‍ನಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗದ್ದಲಗಳಾಗಿ 141 ಮಂದಿ ಸಂಸದರು ಅಮಾನತುಗೊಂಡಿದ್ದಾರೆ. ಹಾಗಿದ್ದರೂ ಪ್ರತಾಪ್ ಸಿಂಹ ಅವರನ್ನು ವಿಚಾರಣೆಗೊಳಪಡಿಸುವ ಅಗತ್ಯವಿಲ್ಲ ಎಂದು ಹೇಳುತ್ತಿರುವುದು ಬೇಜವಾಬ್ದಾರಿತನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಹುದ್ದೆಗೆ ಎಐಸಿಸಿ ಅಧ್ಯಕ್ಷರ ಹೆಸರು ಪ್ರಸ್ತಾಪವಾಗಿರುವುದಕ್ಕೆ ನಿನ್ನೆಯೇ ಮಲ್ಲಿಕಾರ್ಜುನ ಖರ್ಗೆಯವರು ಸ್ಪಷ್ಟನೆ ನೀಡಿದ್ದಾರೆ. ಮೊದಲು ನಾವು ಚುನಾವಣೆ ಗೆಲ್ಲಬೇಕು, ನಂತರ ಉಳಿದ ವಿಷಯಗಳ ಕುರಿತು ಚರ್ಚೆ ಮಾಡಬಹುದು ಎಂದಿದ್ದಾರೆ. ಹೀಗಾಗಿ ನಮ್ಮ ಮುಂದಿರುವುದು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ 250 ಸಂಸದರನ್ನು ಮತ್ತು ಇತರ ಪಕ್ಷಗಳಿಂದ ಹೆಚ್ಚು ಸದಸ್ಯರನ್ನು ಸಂಸತ್‍ಗೆ ಕಳುಹಿಸುವುದ್ದಾಗಿದೆ ಎಂದರು.
ಪ್ರತಿಬಾರಿ ಖರ್ಗೆಯವರ ಹೆಸರು ಪ್ರಸ್ತಾಪವಾದಾಗ ದಲಿತರು ಎಂದು ಜಾತಿ ಬಣ್ಣ ಲೇಪಿಸುವುದೇಕೆ, ಅದೇ ಮೋದಿಯವರು ಪ್ರಧಾನಿಯಾಗುವಾಗ ಜಾತಿಯನ್ನು ಪ್ರಸ್ತಾಪಿಸಲಾಗಿತ್ತೇ, ಸಾಮಥ್ರ್ಯ ಇದೆ ಎಂದು ಬಿಂಬಿಸಿರಲಿಲ್ಲವೇ, ಹತ್ತು ವರ್ಷಗಳಿಂದ ಅವರ ಸಾಮಥ್ರ್ಯವೇನು ಎಂದು ಜನ ನೋಡಿದ್ದಾರೆ. ಆದರೆ, ಖರ್ಗೆಯವರ ಹೆಸರು ಬಂದಾಗ ದಲಿತರು ಎನ್ನುತ್ತಾರೆ. ಇಲ್ಲಿ ಜಾತಿ ಬದಲಾಗಿ ಸಾಮಥ್ರ್ಯದ ವಿಚಾರ ಏಕೆ ಚರ್ಚೆಯಾಗುವುದಿಲ್ಲ ಎಂದು ಪ್ರಶ್ನಿಸಿದರು.
ಮಿಮಿಕ್ರಿ ಮಾಡಿ ಉಪರಾಷ್ಟ್ರಪತಿಗಳಿಗೆ ಕಾಂಗ್ರೆಸ್ ಅಪಮಾನ, ಪ್ರಧಾನಿ ಮೋದಿ ಬೇಸರ
ರಾಜ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್, ಆರ್.ಅಶೊಕ್, ಬಿ.ವೈ.ವಿಜಯೇಂದ್ರ ಪ್ರತಿಯೊಬ್ಬರೂ ತಮ್ಮ ಗುಂಪು ಕಟ್ಟಿಕೊಂಡು ಬಣ ರಾಜಕೀಯ ಮಾಡುತ್ತಿದ್ದಾರೆ. ವಿಧಾನಮಂಡಲದ ಅವೇಶನದಲ್ಲಿ ಒಬ್ಬರು ಸಭಾತ್ಯಾಗ ಎಂದರೆ, ಮತ್ತೊಬ್ಬರು ಧರಣಿ ನಡೆಸುವುದಾಗಿ ಹೇಳುತ್ತಿದ್ದರು. ವಿರೋಧ ಪಕ್ಷದ ನಾಯಕನನ್ನೇ ಒಪ್ಪುವುದಿಲ್ಲ. ನಾನೇ ವಿಪಕ್ಷ ನಾಯಕ ಎಂದು ಕೆಲವರು ಪ್ರಸ್ತಾಪಿಸಿದರೆ, ಇನ್ನೂ ಕೆಲವರು ಬಿಜೆಪಿಯ ನಾಯಕತ್ವವನ್ನೇ ಕ್ಕರಿಸಿ ಮಾತನಾಡುತ್ತಿರುವುದು ಕಂಡುಬಂದಿತ್ತು ಎಂದು ಹೇಳಿದರು.
ಕೋವಿಡ್ ನಿಯಂತ್ರಣ ಕುರಿತಂತೆ ಜಿಲ್ಲೆಯಲ್ಲಿ ಈಗಾಗಲೇ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ. ಕೋವಿಡ್ ಉಪತಳಿಯ ಸೋಂಕು ಅಪಾಯಕಾರಿಯಲ್ಲ ಎಂದು ಹೇಳಲಾಗುತ್ತಿದೆ. ಆದರೂ ನಾವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸುತ್ತೇವೆ ಎಂದರು. ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿ ಮಾದಕ ವಸ್ತು ಸೇರಿದಂತೆ ನಿಯಮ ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮಾದಕ ವ್ಯಸನಿಗಳ ವಿರುದ್ಧ ಈಗಾಗಲೇ ಕೋಕಾ ಕಾಯಿದೆಯನ್ನು ಹಾಕಲಾಗುತ್ತಿದೆ. ಲೋಪಗಳಿದ್ದರೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.