ಬೆಂಗಳೂರು, ಡಿ.3- ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡುವುದು ಪಕ್ಕ. ಆದರೆ 30 ತಿಂಗಳ ನಂತರವೋ ಅಥವಾ ಅದಕ್ಕೂ ಮೊದಲೋ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳುವ ಮೂಲಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.
ಅಧಿಕಾರ ಹಂಚಿಕೆಯ ಗೊಂದಲಗಳು ಈಗಲೂ ರಾಜ್ಯ ಮತ್ತು ದೇಶದ ಜನರಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ಗುಟ್ಟು ಬಿಟ್ಟುಕೊಡದೆ ಕದನ ಕುತೂಹಲ ಕೆರಳಿಸಿದೆ. ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಮತ್ತಷ್ಟು ರಹಸ್ಯ ಕಾಪಾಡಿಕೊಂಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಸತೀಶ್ ಜಾರಕಿಹೊಳಿ, ನಾಯಕತ್ವ ಬದಲಾವಣೆ ಪಕ್ಕಾ ಎಂದಿದ್ದಾರೆ. ಮುಖ್ಯಮಂತ್ರಿ ಹುದ್ದೆಯನ್ನು ಬಿಡಲೇಬೇಕು. ಬಿಡುವುದಂತೂ ಖಚಿತವಾಗಿದೆ. 30 ತಿಂಗಳ ನಂತರವಾದರೂ ಬಿಡಲೇಬೇಕಾಗಿದೆ. ಈ ಅವಧಿಯಲ್ಲಿ ಅಧಿಕಾರ ಬಿಟ್ಟುಕೊಡಬಹುದು ಎಂದು ಹೇಳಿದ್ದಾರೆ.
ಆದರೂ ತಮ ಹೇಳಿಕೆಯನ್ನು ತಿಳಿಗೊಳಿಸಲು ಯತ್ನಿಸಿರುವ ಸತೀಶ್ ಜಾರಕಿಹೊಳಿ, ಅಧಿಕಾರ ಹಂಚಿಕೆಯ ಸಂಬಂಧ ಪಟ್ಟಂತೆ ಎಲ್ಲವೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದೆ. ವರಿಷ್ಠರು ಹೇಳಿದಂತೆ ಸಿಎಂ, ಡಿಸಿಎಂ ನಡೆದುಕೊಳ್ಳುತ್ತಾರೆ ಎಂದಿದ್ದಾರೆ.
ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಸಿದ್ದರಾಮಯ್ಯ ಅವರ ಈ ಹೇಳಿಕೆ ಹೊಸದು ಅಲ್ಲ, ತ್ಯಾಗದ ಮನಸ್ಥಿತಿಯೂ ಇಲ್ಲ. 10 ಬಾರಿ ಮುಖ್ಯಮಂತ್ರಿಯಾದರು ಯಾವತ್ತಾದರೂ ಒಂದು ದಿನ ಅಧಿಕಾರ ಬಿಡಲೇ ಬೇಕಿದೆ. ಅದು ಯಾವಾಗ ಎಂಬುದು ವರಿಷ್ಠರಿಗೆ ಮಾತ್ರ ಗೊತ್ತಿದೆ ಎಂದರು.ಎಲ್ಲವೂ ಸುಖಾಂತ್ಯವಾಗಿ ನಡೆಯಬೇಕು. ಹೈಕಮಾಂಡ್ ಇದನ್ನು ಯಾವ ರೀತಿ ಬಗೆಹರಿಸುತ್ತದೆ ಎಂದು ಶಾಸಕರು ಕಾದು ನೋಡುತ್ತಿದ್ದಾರೆ. ಪಕ್ಷದಲ್ಲಿ ಒಳ್ಳೆಯ ವಾತಾವರಣ ಇರಬೇಕು ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ಸ್ಪಷ್ಟಪಡಿಸಿದ್ದರು.
ನಾನು ಮತ್ತು ಗೃಹ ಸಚಿವ ಪರಮೇಶ್ವರ್ ನಿನ್ನೆ ಸಭೆ ನಡೆಸಿದ್ದೇವೆ. ಆದರೆ ಈ ಸಂದರ್ಭದಲ್ಲಿ ದಲಿತ ಮುಖ್ಯಮಂತ್ರಿಯ ಬಗ್ಗೆ ಚರ್ಚೆಯಾಗಿಲ್ಲ ಎಂದರು.ನಮ ಸಭೆಗಳು ನಿರಂತರ. ಈ ಅವಧಿಗೆ ದಲಿತ ಮುಖ್ಯಮಂತ್ರಿಯಾಗಲು ಅವಕಾಶ ಇಲ್ಲ. ಪರಮೇಶ್ವರ್ ಅವರು ಹಿರಿಯ ನಾಯಕರಿದ್ದಾರೆ, ಅವರಿಗೆ ಅವಕಾಶ ಸಿಗಬೇಕು ಎಂದು ನಾನು ಕೂಡ ಹೇಳಿಕೆ ನೀಡಿದ್ದೇನೆ ಎಂದರು.
ಈಗಾಗಲೇ ಉಪಹಾರಕೂಟಗಳ ಮೂಲಕ ಎಲ್ಲವೂ ಬಗೆಹರಿದಿದೆ. ಪದೇ ಪದೇ ಅದೇ ವಿಚಾರ ಚರ್ಚೆ ಮಾಡಿ ಗೊಂದಲ ಮೂಡಿಸುವುದು ಬೇಡ ಎಂದು ಹೇಳಿದರು.ಮಂಗಳೂರಿನ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆಸುವ ಇರಾದೆ ಇಲ್ಲ. ನಾರಾಯಣಗುರು ಮತ್ತು ಮಹಾತ ಗಾಂಧೀಜಿಯವರ ಸಂವಾದ ಐತಿಹಾಸಿಕವಾದದ್ದು, ಈ ಕಾರಣಕ್ಕೆ ನಾವು ಅದರಲ್ಲಿ ಭಾಗವಹಿಸುತ್ತಿದ್ದೇವೆ. ರಾಜಕೀಯ ಕುರಿತು ಚರ್ಚಿಸುವ ಯಾವ ಉದ್ದೇಶವೂ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ರಾಜಕೀಯ ಶಾಶ್ವತ ಅಲ್ಲ, ಹೈಕಮಾಂಡ್ ಹೇಳಿದಾಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಸಿದ್ದರಾಮಯ್ಯ ನಿನ್ನೆ ನೀಡಿರುವ ಹೇಳಿಕೆಗಳನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ಸತೀಶ್ ಜಾರಕಿಹೊಳಿ ಯೂ ಟರ್ನ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುವುದು ಪಕ್ಕ ಎಂದು ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.ಸಿದ್ದರಾಮಯ್ಯ ಅವರ ಪರಮಾಪ್ತ ಬಣ್ಣದಲ್ಲಿರುವ ಸತೀಶ್ ಜಾರಕಿಹೊಳಿ ಅಧಿಕಾರ ಹಂಚಿಕೆಯ ಗೊಂದಲವನ್ನು ಬಗೆಹರಿಸಲು ಮತ್ತು ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಲು ನಡೆಯುತ್ತಿದ್ದ ರಣತಂತ್ರಗಳ ಮುಂದಾಳುವಾಗಿದ್ದಾರೆ.
ಸಚಿವರಾದ ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ ಕೆ.ಎಂ.ರಾಜಣ್ಣ ಸೇರಿದಂತೆ ಹಲವು ನಾಯಕರ ಜೊತೆ ಸತೀಶ್ ಜಾರಕಿಹೊಳಿ ಪದೇ ಪದೇ ಭೋಜನಕೂಟಗಳನ್ನು ನಡೆಸುವ ಮೂಲಕ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದರು.
ಈ ಅವಧಿಗೆ ಸಿದ್ದರಾಮಯ್ಯ ಪೂರ್ಣಾವಧಿಯ ಮುಖ್ಯಮಂತ್ರಿ, ಮಧ್ಯಭಾಗದಲ್ಲಿ ಬದಲಾವಣೆಗೆ ಅವಕಾಶ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹಲವಾರು ಬಾರಿ ಹೇಳಿದ್ದರು.ಆದರೆ ಡಿ.ಕೆ.ಶಿವಕುಮಾರ್ ಅವರ ಪ್ರತಿತಂತ್ರ ಮತ್ತು ರಾಜಕೀಯ ಚದುರಂಗದಾಟದ ಮುಂದೆ ಸಿದ್ದರಾಮಯ್ಯ ಬೆಂಬಲಿಗರು ಪೇಚಿಗೆ ಸಿಲುಕಿದ್ದಾರೆ.
ಈ ಅವಧಿಯಲ್ಲೂ ಕುರ್ಚಿ ಬಿಟ್ಟು ಕೊಡುವುದು ಅನಿವಾರ್ಯ ಎಂಬ ಮಾತುಗಳನ್ನಡಲಾರಂಭಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಉಪಹಾರಕೂಟದ ಬಳಿಕ ಅಧಿಕಾರ ಹಂಚಿಕೆಯ ಬಗ್ಗೆ ಸ್ಪಷ್ಟ ಹೇಳಿಕೆ ನೀಡದೆ, ಎಲ್ಲವೂ ಹೈಕಮಾಂಡ್ ಮರ್ಜಿಗೆ ಬಿಡಲಾಗಿದೆ ಎಂದು ಜಾರಿಕೊಳ್ಳುತ್ತಿದ್ದರು.
ಡಿ.ಕೆ.ಶಿವಕುಮಾರ್ ಯಾವಾಗ ಮುಖ್ಯಮಂತ್ರಿಯಾಗುತ್ತಾರೆ ಎಂಬ ಪ್ರಶ್ನೆಗೆ ನಿನ್ನೆ ಸಿದ್ದರಾಮಯ್ಯ ಅವರು ಹೈಕಮಾಂಡ್ ಹೇಳಿದಾಗ ಎನ್ನುವ ಮೂಲಕ ಕುತೂಹಲಕ್ಕೆ ಕೆರಳಿಸಿದ್ದರು. ಉಪಹಾರ ಕೂಟದ ಮಾರನೇ ದಿನವೇ ಸಿದ್ದರಾಮಯ್ಯ ಅವರ ಪರಮಾಪ್ತರಾದ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅಧಿಕಾರ ಹಂಚಿಕೆ ಮತ್ತು ನಾಯಕತ್ವ ಬದಲಾವಣೆಯ ಸುಳಿವನ್ನು ನೀಡಿದೆ. ಡಿ.ಕೆ.ಶಿವಕುಮಾರ್ ಬಣದಲ್ಲಿ ಇದು ಹರ್ಷ ಮೂಡಿಸಿದ್ದು, ಆರಂಭಿಕ ಜಯ ಎಂದು ಬಿಂಬಿಸಲಾಗುತ್ತಿದೆ.
