ಬೆಂಗಳೂರು,ಡಿ.20- ಪೊಲೀಸರ ಸೋಗಿನಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಮೇಲೆ ಹಲ್ಲೆ ನಡೆಸಿ 60 ಲಕ್ಷ ನಗದು ಸೇರಿದಂತೆ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಎಂಟು ಮಂದಿ ಡಕಾಯಿತರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಚ್‍ಎಂಟಿ ಲೇಔಟ್‍ನ ಎಸ್‍ಎನ್‍ಆರ್ ಪಾಲಿಫಿಲಮ್ಸ್ ಪ್ಯಾಕೇಜಿಂಗ್ ಕಂಪನಿ ಮಾಲೀಕರಾದ ಮನೋಹರ್ ಅವರ ಮನೆ ಬಳಿ ಡಿ.4ರಂದು ರಾತ್ರಿ 7.30ರ ಸುಮಾರಿನಲ್ಲಿ ಡಕಾಯಿತರ ತಂಡ ಬಂದು ಬಾಗಿಲು ತಟ್ಟಿದೆ. ಮನೆಯಲ್ಲಿದ್ದ ಮನೋಹರ್ ಅವರ ಪತ್ನಿ ಸುಜಾತ ಮತ್ತು ಮಗ ರೂಪೇಶ್ ಬಾಗಿಲು ತೆಗೆದಾಗ ಒಬ್ಬಾತ ಪೊಲೀಸ್ ಎಂದು ಪರಿಚಯಿಸಿಕೊಂಡು ಒಳಗೆ ಹೋಗಿದ್ದಾನೆ.
ಮನೋಹರ್ ಅವರ ಕುಟುಂಬದಲ್ಲಿ ಸಂಬಂಧಿಗಳ ನಡುವೆ ವ್ಯಾಜ್ಯವಿತ್ತು. ಅದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಪೆಪೊಲೀಸರು ಬಂದಿರಬಹುದು ಎಂದು ರೂಪೇಶ್ ಭಾವಿಸಿದ್ದರು. ಆದರೆ ಬಾಗಿಲು ತೆರೆಯುತ್ತಿದ್ದಂತೆಯೇ ಸುಮಾರು ಐದಾರು ಮಂದಿ ಒಮ್ಮಿಂದೊಮ್ಮೆಗೆ ಮಾರಕಾಸ್ತ್ರಗಳೊಂದಿಗೆ ಮನೆಯೊಳಗೆ ನುಗ್ಗಿ ರೂಪೇಶ್ ಮೇಲೆ ಹಲ್ಲೆ ಮಾಡಿ ಕುಟುಂಬದಲ್ಲಿದ್ದವರನ್ನು ಕಿರುಚಾಡದಂತೆ ಬೆದರಿಸಿ ಹಲ್ಲೆ ಮಾಡಿದ್ದರಿಂದ ಸುಜಾತ ಗಾಯಗೊಂಡರು.
ಆ ವೇಳೆ ಡಕಾಯಿತರು ಮನೆಯನ್ನು ಸಂಪೂರ್ಣವಾಗ ಜಾಲಾಡಿ ಕೈಗೆ ಸಿಕ್ಕಿದ ಸುಮಾರು 700 ಗ್ರಾಂ ಚಿನ್ನಾಭರಣ ಹಾಗೂ 60 ಲಕ್ಷ ಹಣ ದರೋಡೆ ಮಾಡಿದ್ದಾರೆ. ಅಲ್ಲದೇ ಮನೆಯಿಂದ ಹೊರ ಹೋಗುವ ಮೊದಲು ಸಾಕ್ಷಿ ನಾಶ ಮಾಡಲು ಮನೆಯಲ್ಲಿನ ಸಿಸಿಟಿವಿ ಡಿವಿಆರ್‍ನ್ನು ಕೂಡಾ ದೋಚಿ ಪರಾರಿಯಾಗಿದ್ದರು. ದರೋಡೆ ಸಂಬಂಧ ಉದ್ಯಮಿ ಮನೋಹರ ಅವರು ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಂಸತ್‍ನ ಭದ್ರತಾ ಲೋಪದ ವಾಸ್ತವಾಂಶವನ್ನು ಬಹಿರಂಗಕ್ಕೆ ಪ್ರಿಯಾಂಕ್ ಖರ್ಗೆ ಆಗ್ರಹ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೆಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ವೇಳೆ ದೊರೆತ ಕೆಲವು ಸುಳಿವುಗಳನ್ನು ಆಧರಿಸಿದ್ದಾರೆ. ಉದ್ಯಮಿ ಮನೆಯ ಅಕ್ಕಪಕ್ಕದ ನಿವಾಸಗಳಲ್ಲಿದ್ದ ಸಿಸಿಟಿವಿಗಳನ್ನು ಪರಿಶೀಲಿಸಿದ್ದಾಗ ಡಕಾಯಿತರ ಚಹರೆ ಮತ್ತು ಅವರು ಬಂದಿದ್ದ ವಾಹನಗಳ ಮಾಹಿತಿಯನ್ನು ಬಿಟ್ಟುಕೊಟ್ಟಿತ್ತು. ಈ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಎಂಟು ಮಂದಿ ಡಕಾಯಿತರನ್ನು ಖೆಡ್ಡಾಕ್ಕೆ ಬೀಳಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.