ಬೆಂಗಳೂರು,ಸೆ.30- ಸರ್ಕಾರ ಪತನಗೊಳಿಸುವ ಯತ್ನ ನಡೆಸಿದರೆ 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಕೈಕಟ್ಟಿ ಕೂರುವುದಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಯಾವ ಶಾಸಕರು ಕುಮಾರಸ್ವಾಮಿ ಬಳಿ ಹೋಗಿಲ್ಲ.
ಈ ಹಿಂದೆ ಬಿಜೆಪಿ ನೂರು ಶಾಸಕರನ್ನು ಹೊಂದಿತ್ತು. ಆದರೆ ಆಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡಿದರು. ಈಗ 135 ಜನ ಶಾಸಕರಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವುದು ಅಷ್ಟು ಸುಲಭವಲ್ಲ ಎಂದರು.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್ನಲ್ಲಿ ಎಷ್ಟು ಜನ ವಿಚಲಿತರಾಗಿದ್ದಾರೆ. ಅವರನ್ನು ಹೇಗೆ ಸಮಾಧಾನ ಪಡಿಸಬೇಕೆಂಬುದನ್ನು ಕುಮಾರಸ್ವಾಮಿ ಗಮನಿಸಲಿ. ಆಮೇಲೆ ಬೇರೆ ವಿಚಾರದ ಬಗ್ಗೆ ಮಾತನಾಡಲಿ ಎಂದು ಹೇಳಿದರು.
ಶೀಘ್ರದಲ್ಲೇ ಪತನವಾಗಲಿದೆ ಗ್ಯಾರಂಟಿ ಸರ್ಕಾರ : ಕುತೂಹಲ ಕೆರಳಿಸಿದ ಹೆಚ್ಡಿಕೆ ಹೇಳಿಕೆ
ಮೈತ್ರಿಯ ಬಗ್ಗೆ ಜೆಡಿಎಸ್ನಲ್ಲೂ ಸಮಾಧಾನ ಇಲ್ಲ. ಬಿಜೆಪಿಯವರೂ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ತಮ್ಮ ಕಾರ್ಯಕರ್ತರು ಹಾಗೂ ಮುಖಂಡರನ್ನು ತೃಪ್ತಿಪಡಿಸಲು ಕುಮಾರಸ್ವಾಮಿ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.
ನಾನು ಜೆಡಿಎಸ್ನಲ್ಲಿದ್ದಾಗ ಅನುಭವವನ್ನು ಹೇಳುವುದಾದರೆ, ಕುಮಾರಸ್ವಾಮಿ ಎಂದಿಗೂ ಪೂರ್ಣ ಪ್ರಮಾಣದ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಹೇಳಿಲ್ಲ. ಹಾಗೆಯೇ ಬೇರೆಯವರೂ ಮುಖ್ಯಮಂತ್ರಿಯಾಗಿರುವುದನ್ನು ಸಹಿಸುವುದಿಲ್ಲ. ಹೀಗಾಗಿ ಇಂತಹ ಹೇಳಿಕೆ ನೀಡುತ್ತಾರೆ ಎಂದಿದ್ದಾರೆ.