Wednesday, December 3, 2025
Homeರಾಜ್ಯಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಜಾ

ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಜಾ

Life imprisonment convict Prajwal Revanna's bail plea dismissed

ಬೆಂಗಳೂರು,ಡಿ.3- ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಎಚ್‌.ಡಿ.ಪ್ರಜ್ವಲ್‌ ರೇವಣ್ಣ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ನ್ಯಾಯಾಲಯದ ಈ ಆದೇಶದಿಂದಾಗಿ ಬಿಡುಗಡೆ ಭಾಗ್ಯ ಎದುರು ನೋಡುತ್ತಿದ್ದ ಪ್ರಜ್ವಲ್‌ ರೇವಣ್ಣನಿಗೆ ಪರಪ್ಪನ ಅಗ್ರಹಾರ ಜೈಲು ಶಿಕ್ಷೆ ಖಾಯಂ ಎಂಬಂತಾಗಿದೆ.

ವಾದ-ಪ್ರತಿವಾದ ಆಲಿಸಿ ಆದೇಶವನ್ನು ಕಾಯ್ದಿರಿಸಿದ್ದ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಕೆ.ಎಸ್‌‍.ಮುದಗಲ್‌ ಮತ್ತು ವೆಂಕಟೇಶ್‌ ನಾಯಕ್‌ ಅವರನ್ನೊಳಗೊಂಡ ವಿಭಾಗೀಯ ಪೀಠ ಪ್ರಜ್ವಲ್‌ ರೇವಣ್ಣ ಪರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿತು.

ದಾಖಲೆಗಳನ್ನು ಪರಿಗಣಿಸಿ, ಅಪರಾಧದ ಗಂಭೀರತೆ, ಪ್ರಜ್ವಲ್‌ ಬಿಡುಗಡೆ ಮಾಡಿದರೆ ಅದು ಇತರರ ಮೇಲೆ ಉಂಟು ಮಾಡುವ ಪರಿಣಾಮವನ್ನು ಪರಿಗಣಿಸಿ, ಪ್ರಜ್ವಲ್‌ಗೆ ವಿಧಿಸಿರುವ ಆಜೀವ ಶಿಕ್ಷೆ ಬದಿಗೆ ಸರಿಸಿ ಜಾಮೀನು ಮಂಜೂರು ಮಾಡುವುದು ಸೂಕ್ತವಲ್ಲ ಎಂದು ಹೇಳಿದೆ.
ವಿಚಾರಣಾಧೀನ ನ್ಯಾಯಾಲಯದಲ್ಲಿ ಈಗಾಗಲೇ ವಿಚಾರಣೆ ನಡೆದಿದ್ದು, ಮತ್ತೆ ಹೈಕೋರ್ಟ್‌ನಲ್ಲಿ ಸಾಕ್ಷಿಯ ವಿಚಾರಣೆ ನಡೆಸಲಾಗದು. ತೀರ್ಪಿನಲ್ಲಿ ಅಲ್ಲೊಂದು ಇಲ್ಲೊಂದು ಇರುವ ಲೋಪಗಳನ್ನು ನೋಡಲಾಗದು ಎಂದಿದೆ.

ಡಿಸೆಂಬರ್‌ 1ರಂದು ನಡೆದ ಅರ್ಜಿ ವಿಚಾರಣೆ ವೇಳೆ ಪ್ರಜ್ವಲ್‌ ರೇವಣ್ಣ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ವಾದ ಮಂಡಿಸಿದ್ದರು. ಪ್ರಜ್ವಲ್‌ 2024 ರ ಏಪ್ರಿಲ್‌ 24ರಂದು ದೇಶ ತೊರೆಯುವಾಗ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಪ್ರಜ್ವಲ್‌ ವಿರುದ್ದ ಏಪ್ರಿಲ್‌ 28ರಂದು ಪ್ರಕರಣ ದಾಖಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ನನ್ನ ಕಕ್ಷಿದಾರ ದೇಶ ತೊರೆಯುವುದಿಲ್ಲ. ಐಪಿಸಿ ಸೆಕ್ಷನ್‌ 201ರ ಅಡಿ ಸಾಕ್ಷ್ಯ ನಾಶಪಡಿಸಿರುವುದಕ್ಕೆ ಪೊ. ರವಿವರ್ಮ ಕುಮಾರ್‌ ಅವರು ಪ್ರಾಸಿಕ್ಯೂಟ್‌ ಮಾಡಿದ್ದಾರೆಯೇ? ಜಿಯೊ ಮ್ಯಾಪ್‌ ಅನ್ನು ವಿಚಾರಣಾಧೀನ ನ್ಯಾಯಾಧೀಶರು ಪರಿಗಣಿಸಿದ್ದಾರೆ. ಇದನ್ನು ಹೊರತುಪಡಿಸಿ ಇನ್ನೂ ಮೂರು ಪ್ರಕರಣಗಳು ನನ್ನ ಕ್ಷಕಿದಾರ ವಿರುದ್ಧ ಇವೆ. ಯಾವುದೇ ರೀತಿಯಲ್ಲೂ ನನ್ನ ಕಕ್ಷಿದಾರ ದೇಶ ತೊರೆಯುವುದಿಲ್ಲ ಎಂದು ಪ್ರಜ್ವಲ್‌ ಪರ ವಕೀಲರು ವಾದಿಸಿದ್ದರು.

ದಾಖಲೆಯಲ್ಲಿದ್ದ ವಸ್ತುಗಳನ್ನು ಆಧರಿಸಿ ವಿಚಾರಣಾಧೀನ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಪ್ರಜ್ವಲ್‌ ಅವರು ವಿಚಾರಣಾಧೀನ ನ್ಯಾಯಾಲಯದಲ್ಲಿ ಅಶ್ಲೀಲ ವಿಡಿಯೋಗಳ ನಿರ್ಬಂಧಕ್ಕೆ ಆದೇಶ ಪಡೆದಿದ್ದಾರೆ. ಹಾಸನದಲ್ಲಿ ಪ್ರಜ್ವಲ್‌, ಚುನಾವಣಾ ಏಜೆಂಟ್‌ ಸಹ ದೂರು ನೀಡಿದ್ದಾರೆ. ಪ್ರಜ್ವಲ್‌ ಮಾಜಿ ಕಾರು ಡ್ರೈವರ್‌ ವಿರುದ್ಧವೂ ನ್ಯಾಯಾಲಯದಲ್ಲಿ ದೂರು ನೀಡಿದ್ದಾರೆ. ಆದರೆ ಈ ಪ್ರಕರಣದ ವಿಚಾರಣೆಯೇ ನಡೆದಿಲ್ಲ. ಇದು ಪ್ರತೀಕಾರವಲ್ಲವೇ ಎಂದು ವಕೀಲ ವಕೀಲ ಲೂಥ್ರಾ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ: ಆಗಸ್ಟ್‌ 2ರಂದು ವಿಚಾರಣಾಧೀನ ನ್ಯಾಯಾಲಯವು ಪ್ರಜ್ವಲ್‌ಗೆ ಆಜೀವ ಸೆರೆವಾಸ ಶಿಕ್ಷೆಯ ಜೊತೆಗೆ 11.60 ಲಕ್ಷ ರೂ. ದಂಡವನ್ನು ವಿಧಿಸಿತ್ತು. ಇದರಲ್ಲಿ ಸಂತ್ರಸ್ತೆಗೆ 11.25 ಲಕ್ಷವನ್ನು ಪರಿಹಾರದ ರೂಪದಲ್ಲಿ, ಬಾಕಿ ಹಣವನ್ನು ಸರ್ಕಾರದ ಖಾತೆಗೆ ಜಮೆ ನೀಡಲು ಆದೇಶಿಸಿದೆ.

ಐಪಿಸಿ ಸೆಕ್ಷನ್‌ಗಳಾದ 376(2)(ಎನ್‌) (ಪದೇ ಪದೇ ಅತ್ಯಾಚಾರ) ಅಡಿ ಅಪರಾಧಕ್ಕೆ ಜೀವನ ಪರ್ಯಂತ ಶಿಕ್ಷೆ ಮತ್ತು 5 ಲಕ್ಷ ದಂಡ; 376(2)(ಕೆ) (ಪ್ರಭಾವಿ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ) ಅಡಿ ಅಪರಾಧಕ್ಕೆ ಜೀವಾವಧಿ ಶಿಕ್ಷೆ, 5 ಲಕ್ಷ ದಂಡ, 354(ಬಿ) (ವಿವಸ್ತ್ರಗೊಳಿಸುವಾಗ ಆಕೆಯ ಮೇಲೆ ಹಲ್ಲೆ)ರಡಿ ಅಪರಾಧಕ್ಕೆ 7 ವರ್ಷ ಶಿಕ್ಷೆ 50,000 ದಂಡ, 354-ಎ (ಮಹಿಳೆಯ ಘನತೆಗೆ ಚ್ಯುತಿ) ಅಡಿ ಅಪರಾಧಕ್ಕೆ 3 ವರ್ಷ ಜೈಲು-25,000 ರೂ.ದಂಡ, 354(ಸಿ) (ವಿವಸ್ತ್ರಗೊಳಿಸಿರುವ ಮಹಿಳೆಯನ್ನು ನೋಡಿ ಆನಂದಿಸುವುದು) ಅಡಿ ಅಪರಾಧಕ್ಕೆ 3 ವರ್ಷ ಜೈಲು, 25,000 ದಂಡ, 201 (ಅಪರಾಧ ಕೃತ್ಯದ ಸಾಕ್ಷಿ ನಾಶ) ಅಡಿ ಅಪರಾಧಕ್ಕೆ 3 ವರ್ಷ ಶಿಕ್ಷೆ, 25,000 ದಂಡ; ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಇ (ಖಾಸಗಿತನದ ಉಲ್ಲಂಘಿಸಿ ವಿಡಿಯೋ ಮಾಡಿ, ಪ್ರಸಾರ ಮಾಡಿರುವುದು) ಅಡಿ ಅಪರಾಧಕ್ಕೆ 3 ವರ್ಷ ಶಿಕ್ಷೆ, 25,000 ರೂ.ದಂಡ, 506 (ಕ್ರಿಮಿನಲ್‌ ಬೆದರಿಕೆ) 2 ವರ್ಷ ಶಿಕ್ಷೆ, 10,000 ರೂ.ದಂಡ ವಿಧಿಸಿತ್ತು. ಈ ತೀರ್ಪನ್ನು ಬದಿಗೆ ಸರಿಸುವಂತೆ ಪ್ರಜ್ವಲ್‌ ಕೋರಿದ್ದರು.

RELATED ARTICLES

Latest News