Wednesday, December 3, 2025
Homeರಾಜ್ಯಸಿದ್ದು-ಡಿಕೆಶಿ ಬೆಂಬಲಿಗರ ಘೋಷಣೆ : ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾದ ಮಂಗಳೂರಿನ ವೈಚಾರಿಕ ಸಮಾವೇಶ

ಸಿದ್ದು-ಡಿಕೆಶಿ ಬೆಂಬಲಿಗರ ಘೋಷಣೆ : ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾದ ಮಂಗಳೂರಿನ ವೈಚಾರಿಕ ಸಮಾವೇಶ

Mangaluru

ಮಂಗಳೂರು, ಡಿ.3- ಕರಾವಳಿ ಜಿಲ್ಲೆ ಮಂಗಳೂರಿನಲ್ಲಿಂದು ವೈಚಾರಿಕ ನೆಲೆಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಪರಸ್ಪರ ರಾಜಕೀಯ ಬಲಪ್ರದರ್ಶನ ಹಾಗೂ ಜಿದ್ದಾಜಿದ್ದಿಗೆ ವೇದಿಕೆಯಾಗಿ ಬದಲಾಗಿತ್ತು.

ಶಿವಗಿರಿ ಮಠ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹಶ್ರೀ ನಾರಾಯಣ ಗುರು ಅಧ್ಯಯನ ಪೀಠ ಆಯೋಜಿಸಿದ್ದ ಶತಮಾನದ ಮಹಾಪ್ರಸ್ಥಾನ ಅಂಗವಾಗಿ ಗುರು-ಗಾಂಧಿ ಸಂವಾದ ಶತಮಾನೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಕಾಂಗ್ರೆಸ್ಸಿನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌, ಸಚಿವರಾದ ಡಾ.ಜಿ.ಪರಮೇಶ್ವರ್‌, ದಿನೇಶ್‌ ಗುಂಡೂರಾವ್‌, ಸತೀಶ್‌ ಜಾರಕಿಹೊಳಿ, ಲಕ್ಷ್ಮೀಹೆಬ್ಬಾಳ್ಕರ್‌ ಮತ್ತಿತರರು ಉಪಸ್ಥಿತರಿದ್ದರು.

ಈ ವೇಳೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಕೆ.ಸಿ.ವೇಣುಗೋಪಾಲ್‌ ಅವರನ್ನು ಸ್ವಾಗತಿಸಲು ಕಾಂಗ್ರೆಸ್‌‍ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ವೇಣುಗೋಪಾಲ್‌ ಆಗಮಿಸುತ್ತಿದ್ದಂತೆ ಡಿಕೆ..ಡಿಕೆ.. ಎಂಬ ಘೋಷಣೆಗಳು ಮೊಳಗಿದವು. ಇನ್ನು ಕೆಲವರು ಸಿದ್ದರಾಮಯ್ಯ ಅವರ ಪರವಾಗಿ ಘೋಷಣೆ ಕೂಗಿದರು. ಇದರಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕಾಂಗ್ರೆಸ್‌‍ ಹೈಕಮಾಂಡ್‌ ದೊಡ್ಡ ಮನಸ್ಸು ಮಾಡಿ ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್‌‍ ನಾಯಕರಾದ ಮಿಥುನ್‌ ರೈ ಮತ್ತಿತರರು ಒತ್ತಾಯಿಸಿದರು. ಗುರು-ಗಾಂಧಿ ಕಾರ್ಯಕ್ರಮ ಸಂಪೂರ್ಣ ವೈಚಾರಿಕ ಹಿನ್ನೆಲೆ ಹೊಂದಿತ್ತು. ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯ ಗೊಂದಲಗಳು ಕೇಳಿ ಬರುವ ಮೊದಲೇ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳು ಮುದ್ರಣವಾಗಿ ಹಂಚಿಕೆಯಾಗಿದ್ದವು.

ಹಿಂದುಳಿದ ಸಮುದಾಯಗಳ ಆಶೋತ್ತರ ಬ್ರಹಶ್ರೀ ನಾರಾಯಣ ಗುರುಗಳ ಧ್ಯೇಯವಾಗಿತ್ತು. ಹಾಗಾಗಿ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಮತ್ತು ಇತರ ಹಿಂದುಳಿದ ವರ್ಗಗಳ ನಾಯಕರನ್ನು ಆಹ್ವಾನಿಸಲಾಗಿತ್ತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಆಹ್ವಾನಿಸಿರಲಿಲ್ಲ ಎಂಬುದು ದೊಡ್ಡ ಚರ್ಚೆಯಾಗಿದೆ. ಅದಕ್ಕೆ ತಕ್ಕಂತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿನ ವಿಮಾನ ನಿಲ್ದಾಣ ಮತ್ತು ಮಂಗಳೂರಿನ ಸರ್ಕ್ಯೂಟ್‌ ಹೌಸ್‌‍ ನಲ್ಲಿ ಕೆ.ಸಿ.ವೇಣುಗೋಪಾಲ್‌ ಅವರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.

RELATED ARTICLES

Latest News