ಬೆಂಗಳೂರು,ಸೆ.30- ಲಿಂಗಾಯಿತ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ, ಹೀಗಾಗಿ ಸಮಾಜ ಕಂಗಾಲಾಗಿದೆ ಎಂದು ಕಾಂಗ್ರೆಸ್ನ ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ವೀರಶೈವ ಲಿಂಗಾಯಿತ ಸಮುದಾಯದ ಸಮಾವೇಶದಲ್ಲಿ ಹಾನಗಲ್ ಕುಮಾರಸ್ವಾಮಿಯವರ ಪ್ರಶಸ್ತಿ ಸ್ವೀಕರಿಸಿ ಮಾತನಾಡುವ ವೇಳೆ ವೀರಶೈವ ಲಿಂಗಾಯಿತ ಸಮುದಾಯದ ಅಧ್ಯಕ್ಷರೂ ಆಗಿರುವ ಶ್ಯಾಮನೂರು ಶಿವಶಂಕರಪ್ಪ ತಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ಸಮುದಾಯಕ್ಕೆ ನ್ಯಾಯ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಬಳಿಕ ಸುದ್ದಿಗಾರರೊಂದಿಗೆ ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡ ಶ್ಯಾಮನೂರು ಶಿವಶಂಕರಪ್ಪ, ವೀರಶೈವ ಲಿಂಗಾಯಿತ ಸಮುದಾಯಕ್ಕೆ ಅನ್ಯಾಯ ವಾಗಿದೆ ಎಂದು ಹೇಳಿರುವುದು ನಿಜ. ಸಮುದಾಯದ ಬಹಳಷ್ಟು ಮಂದಿ ಅಧಿಕಾರಿಗಳಿಗೆ ಸರಿಯಾದ ಹುದ್ದೆ ಕೊಟ್ಟಿಲ್ಲ. ಸರ್ಕಾರದಿಂದಾಗಿ ಸಮುದಾಯಕ್ಕೆ ಅನ್ಯಾಯವಾಗಿದೆಯೇ ಹೊರತು ಅನುಕೂಲವಾಗಿಲ್ಲ ಎಂದು ದೂರಿದರು.
ಶೀಘ್ರದಲ್ಲೇ ಪತನವಾಗಲಿದೆ ಗ್ಯಾರಂಟಿ ಸರ್ಕಾರ : ಕುತೂಹಲ ಕೆರಳಿಸಿದ ಹೆಚ್ಡಿಕೆ ಹೇಳಿಕೆ
ಹಿಂದೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರ ಕಾಲದಲ್ಲಿ ನಾವು ಆಡಳಿತ ನಡೆಸಿದ್ದವು. ಅವರು ನಮ್ಮವರನ್ನು ಚೆನ್ನಾಗಿಟ್ಟುಕೊಂಡಿದ್ದರು. ಈಗ ವೀರಶೈವ ಲಿಂಗಾಯಿತ ಸಮುದಾಯ ಕಂಗಾಲಾಗಿದೆ. ಮುಖ್ಯಮಂತ್ರಿಯವರು ಒಂದು ಜಾತಿಗೆ ಆದ್ಯತೆ ನೀಡುವುದನ್ನು ಬಿಡಬೇಕು ಎಂದು ಹೇಳಿದರು.
ತಾವು ಬಹಳ ಹಿಂದಿನಿಂದಲೂ ಈ ಬಗ್ಗೆ ಹೇಳುತ್ತಲೇ ಬಂದಿದ್ದೇನೆ. ತಾವು ಶಾಸಕರು ಮಾತ್ರ ಸಂಪುಟದಲ್ಲಿಲ್ಲ. ಈ ಬಗ್ಗೆ ಸಂಪುಟದ ಸಚಿವರಾಗಿರುವ ತಮ್ಮ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ ಯಾರ ಬಳಿಯೂ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಮರುಕಳಿಸಲಿದೆಯೇ ಇತಿಹಾಸ :
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಸಮುದಾಯಗಳ ಸಹಭಾಗಿತ್ವವೂ ಕಾಂಗ್ರೆಸ್ಗಿತ್ತು. ಹೀಗಾಗಿ ಬಹುಮತ ಗಳಿಸಲು ಸಾಧ್ಯವಾಯಿತು ಎಂಬ ವ್ಯಾಖ್ಯಾನಗಳಿವೆ. ಪ್ರಮುಖವಾಗಿ ವೀರಶೈವ, ಒಕ್ಕಲಿಗ, ಹಿಂದುಳಿದ, ಅಲ್ಪಸಂಖ್ಯಾತ, ಪರಿಶಿಷ್ಟ ಸಮುದಾಯಗಳು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದವು. ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಅಗೌರವವಾಗಿ ಕೆಳಗಿಳಿಸಲಾಯಿತು ಎಂಬ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್, ಸುದೀರ್ಘ ಕಾಲ ಸಮುದಾಯದ ಬೆಂಬಲ ಕಳೆದುಕೊಂಡಿತ್ತು.
ಆದರೆ ಕಳೆದ ನಾಲ್ಕು ತಿಂಗಳಿನಿಂದಲೂ ಚುನಾವಣೆಯ ವೇಳೆ ಬಿಜೆಪಿಯಲ್ಲಾದ ಬದಲಾವಣೆಗಳು ಮತ್ತು ಅಲ್ಲಿದ್ದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಯಂತಹ ಅನೇಕ ನಾಯಕರು ಕಾಂಗ್ರೆಸ್ನತ್ತ ವಲಸೆ ಬಂದಿದ್ದರಿಂದ ಲಿಂಗಾಯಿತ ಸಮುದಾಯ ಕಾಂಗ್ರೆಸ್ ಕೈ ಹಿಡಿದಿತ್ತು. ಆದರೆ ಸರ್ಕಾರ ರಚನೆಯಾದ ಮೂರೂವರೆ ತಿಂಗಳಿನಲ್ಲೇ ಮತ್ತೆ ಅಪಸ್ವರಗಳು ಕೇಳಿಬರಲಾರಂಭಿಸಿವೆ.
ಹಿಂದುಳಿದ ವರ್ಗಗಳ ಪ್ರಭಾವಿ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ್ದರು. ಇದೂ ಕೂಡ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಖುದ್ದು ಸಿದ್ದರಾಮಯ್ಯನವರೇ ಹಿಂದುಳಿದ ವರ್ಗಗಳ ಮುಂಚೂಣಿ ನಾಯಕರಾಗಿದ್ದರು.
ಒಂದು ಸಮುದಾಯ ಹೊರತುಪಡಿಸಿದರೆ ಇತರೆ ಸಣ್ಣಪುಟ್ಟ ಜಾತಿಗಳಿಗೆ ಆದ್ಯತೆ ಸಿಗುತ್ತಿಲ್ಲ ಎಂಬ ಟೀಕೆಗಳು ಕೇಳಿಬಂದಿದ್ದವು. ಈಗ ಶ್ಯಾಮನೂರು ಅವರ ಹೇಳಿಕೆ ಮತ್ತಷ್ಟು ಗಾಢ ಪರಿಣಾಮ ಬೀರುವ ಸಾಧ್ಯತೆಯಿದೆ. ಲೋಕಸಭೆ ಚುನಾವಣೆ ವೇಳೆ ಈ ಹೇಳಿಕೆ ಗಂಭೀರ ಪರಿಸ್ಥಿತಿಯನ್ನು ನಿರ್ಮಿಸುವ ಆತಂಕವೂ ಇದೆ. 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಹೊರಟಿರುವ ಕಾಂಗ್ರೆಸ್ಗೆ ಆ ಪಕ್ಷದ ನಾಯಕರೇ ಮಗ್ಗಲು ಮುಳ್ಳಾಗುತ್ತಿದ್ದಾರೆ.