ಬೆಂಗಳೂರು,ಡಿ.23- ಶಾಲಾಕಾಲೇಜುಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡುವುದಾದರೆ ನಮಗೂ ಕೇಸರಿ ಶಾಲು ಹಾಕಲು ಅವಕಾಶ ನೀಡಿ ಎಂದು ಹಿಂದೂಪರ ಸಂಘಟನೆಗಳು ಸರ್ಕಾರದ ವಿರುದ್ಧ ಕಾನೂನು ಸಮರ ಸಾರಲು ಮುಂದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರ ಶಾಲಾ ಕೊಠಡಿಯೊಳಗೆ ನಿಷೇಧಿಸಿದ್ದ ಹಿಜಾಬ್ ಆದೇಶವನ್ನು ಹಿಂಪಡೆಯುವುದಾಗಿ ಹೇಳಿರುವುದು ಹಿಂದೂ ಸಂಘಟನೆಗಳನ್ನು ಕೆರಳುವಂತೆ ಮಾಡಿದೆ. ನೀವು ಮುಸ್ಲಿಂ ವಿದ್ಯಾರ್ಥಿನಿಯರು ಶಾಲಾ ಕೊಠಡಿಯೊಳಗೆ ಹಿಜಾಬ್ ಧರಿಸಲು ಅವಕಾಶ ಕೊಟ್ಟರೆ ನಮ್ಮದೇನು ಅಭ್ಯಂತರವಿಲ್ಲ. ಅದೇ ರೀತಿ ನಮಗೂ ಕೇಸರಿ ಶಾಲು ಹೊದಿಸಲು ಅವಕಾಶ ಕೊಡಿ ಎಂದು ಹಿಂದೂ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿವೆ.
ಶಾಲೆಗಳಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ ಸಮವಸ್ತ್ರ ನೀತಿಯನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ಸರ್ಕಾರ ಈಗ ಆದೇಶವನ್ನು ಹಿಂಪಡೆಯಲು ಮುಂದಾಗಿರುವುದಕ್ಕೆ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ನಾವು ಯಾರ ಸಮವಸ್ತ್ರವನ್ನೂ ವಿರೋಸುವುದಿಲ್ಲ. ಪ್ರತಿಯೊಬ್ಬರಿಗೂ ಅವರವರ ಉಡುಗೆ-ತೊಡುಗೆ ಆಚಾರವಿಚಾರ ಅನುಸರಿಸಲು ಅವಕಾಶ ಇರುವಂತೆ ನಾವು ಕೇಸರಿ ಶಾಲು ಹಾಕಿದರೆ ತಪ್ಪೇನು ಎಂಬ ಪ್ರಶ್ನೆಯನ್ನು ಅನೇಕರು ಮುಂದಿಟ್ಟಿದ್ದಾರೆ.
ಯಾವುದೇ ವಿದ್ಯಾರ್ಥಿಗಳಲ್ಲಿ ಮೇಲುಕೀಳು ಬರಬಾರದು ಎಂಬ ಕಾರಣಕ್ಕೆ 1964ರಲ್ಲಿ ಸಮವಸ್ತ್ರದ ಕಾಯ್ದೆಯನ್ನು ಜಾರಿಗಳಿಸಲಾಗಿತ್ತು. ಮಕ್ಕಳಲ್ಲಿ ಬಡವ, ಬಲ್ಲಿದ ಹಿಂದೂ ಮುಸ್ಲಿಂ ಎಂಬ ಬೇಧ ಉಂಟಾಗಬಾರದು. ಎಲ್ಲರೂ ಸಮಾನರು ಎಂಬ ಭಾವನೆ ಮೂಡಿಸಲು ಈ ಕಾಯ್ದೆ ಜಾರಿಗೊಳಿಸಲಾಗಿತ್ತು. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗಳಿಗೆ ಬಂದರೆ ಬೇರೆ ವಿದ್ಯಾರ್ಥಿಗಳು ಕೇಸರಿ ಶಾಲು, ಹಳದಿ ಅಥವಾ ನೀಲಿ ಶಾಲು ಹೊದ್ದು ಬಂದರೆ ಸರ್ಕಾರ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ : ಬಿಜೆಪಿ
ಸಮವಸ್ತ್ರದ ಮೂಲಕ ಯಾವುದೇ ವಿದ್ಯಾರ್ಥಿ ತನ್ನ ಐಡೆಂಟಿಟಿಯನ್ನು ಗುರುತಿಸಿಕೊಳ್ಳುವ ಅವಶ್ಯಕತೆ ಇಲ್ಲ. ಒಂದು ವೇಳೆ ಸರ್ಕಾರ ನಮಗೆ ಅವಕಾಶ ಕಲ್ಪಿಸದಿದ್ದರೆ ನಾವು ಹಿಂದೂ ವಿದ್ಯಾರ್ಥಿಗಳ ಪರವಾಗಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.ಹೈಕೋರ್ಟ್ ತೀರ್ಪಿನ ಕುರಿತು ವಿಚಾರಣೆ ಈಗಲೂ ನಡೆಯುತ್ತಿದೆ. ಸರ್ಕಾರ ತೀರ್ಪು ಬರುವ ಮುನ್ನವೇ ಆದೇಶವನ್ನು ಹಿಂಪಡೆಯುತ್ತಿರುವುದು ಕೇವಲ ಒಂದು ಸಮುದಾಯದ ಮತ ಗಳಿಕೆಗಾಗಿ. ನೀವು ರಾಜಕಾರಣ ಮಾಡುವುದಾದರೆ ನಾವು ಕೂಡ ಅದನ್ನೇ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಹೊಸ ಅಸ್ತ್ರ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರತಿಪಕ್ಷ ಬಿಜೆಪಿಗೆ ಅನಗತ್ಯವಾಗಿ ಅಸ್ತ್ರ ನೀಡಿದಂತಾಗಿದೆ. ಬರುವ ದಿನಗಳಲ್ಲಿ ಇದನ್ನು ರಾಜ್ಯಾದ್ಯಂತ ಕೊಂಡೊಯ್ಯಲು ಮುಂದಾಗಿರುವ ಬಿಜೆಪಿ, ಈ ಮೂಲಕ ಹಿಂದೂಗಳ ಮತ ಧ್ರುವೀಕರಣಕ್ಕೆ ಕೈ ಹಾಕಿದೆ. ಬಿಜೆಪಿ ಅವಧಿಯಲ್ಲಿ ಹಿಜಾಬ್ ನಿಷೇಧದ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಹಲವು ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣವನ್ನು ತೊರೆದಿದ್ದರು. ಉಡುಪಿ ಜಿಲ್ಲೆಯಲ್ಲಿ ಆರಂಭವಾಗಿದ್ದ ಹಿಜಾಬ್ ಗಲಾಟೆ ರಾಜ್ಯಾಧ್ಯಂತ ವ್ಯಾಪಿಸಿತ್ತು. ಕಾಲೇಜು ಆವರಣಗಳಲ್ಲಿ ಪ್ರತಿಭಟನೆ ಹಾಗೂ ವಿದ್ಯಾರ್ಥಿಗಳ ನಡುವಿನ ಗಲಾಟೆಗೂ ಕಾರಣವಾಗಿತ್ತು.
ಈ ನಡುವೆ ರಾಜ್ಯ ಸರ್ಕಾರದ ತೀರ್ಮಾನವನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಆದರೆ ಈ ತೀರ್ಪಿನ ಬೆನ್ನಲ್ಲೇ ಹಲವು ವಿದ್ಯಾರ್ಥಿನಿಯರು ಕಾಲೇಜು ತೊರೆದಿದ್ದರು. ವಿದ್ಯಾರ್ಥಿಗಳ ನಡುವೆಯೂ ಇದು ಕಂದಕ ಸೃಷ್ಟಿಗೆ ಕಾರಣವಾಗಿತ್ತು. ಹಿಜಾಬ್ ನಿಷೇಧದ ಅರ್ಜಿ ಸುಪ್ರಿಂಕೋರ್ಟ್‍ನಲ್ಲಿದೆ. 2022 ರಲ್ಲಿ ಸುಪ್ರೀಂ ಕೋರ್ಟ್ ಹಿಜಾಬ್ ನಿಷೇಧದ ಸಿಂಧುತ್ವದ ಬಗ್ಗೆ ಭಿನ್ನ ತೀರ್ಪು ನೀಡಿ, ಪ್ರಕರಣವನ್ನು ವಿಸ್ತ್ರತ ಪೀಠಕ್ಕೆ ವರ್ಗಾಯಿಸಿತ್ತು. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ನಾವು ಹಿಜಾಬ್ ನಿಷೇಧದ ಆದೇಶವನ್ನು ವಾಪಸ್ ಪಡೆದುಕೊಳ್ಳುತ್ತೇವೆ. ಇನ್ನು ಮುಂದೆ ಹಿಜಾಬ್ ಧರಿಸಬಹುದು ಎಂದು ಹೇಳಿದ್ದರು. ಉಡುಪು ಆಹಾರ ಪದ್ಧತಿ ನಿಮ್ಮ ಆಯ್ಕೆ. ನಾನೇಕೆ ಇವುಗಳಿಗೆ ಅಡ್ಡಿಯಾಗಲಿ? ಎಂದು ಪ್ರಶ್ನಿಸಿದ್ದಾರೆ.
ನೀವು ಬಯಸಿದ ಉಡುಪನ್ನು ಧರಿಸಿ, ನಿಮಗೆ ಬೇಕಾದನ್ನು ತಿನ್ನಿ, ನನಗೆ ಬೇಕೆನಿಸಿದ್ದನ್ನು ನಾನು ತಿನ್ನುವೆ. ಉಡುಪು ಆಹಾರ ಅವರರವ ಇಷ್ಟ ಎಂದು ಹೇಳಿದ್ದರು. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಡೆಯ ಹಿಂದೆ ರಾಜಕೀಯ ಉದ್ದೇಶವೂ ಇದೆ. ಕಳೆದ ಚುನಾವಣೆಯಲ್ಲಿ ಮುಸ್ಲಿಂ ಮತಗಳ ಕ್ರೋಢೀಕರಣದ ರೀತಿಯಲ್ಲಿ ಲೋಕಸಭೆ ಚುನಾವಣೆಯಲ್ಲೂ ಇದೇ ತಂತ್ರಗಾರಿಕೆಯನ್ನು ಪ್ರಯೋಗ ಮಾಡುವ ಉದ್ದೇಶ ಇದೆ ಎಂಬ ವ್ಯಾಖ್ಯಾನಗಳು ವ್ಯಕ್ತವಾಗುತ್ತಿದೆ. ಈ ಮೂಲಕ ಬಿಜೆಪಿಯ ಹಿಂದುತ್ವ ಪ್ರಯೋಗಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ ಪ್ರಯೋಗ ಮಾಡಿದೆ. ಈ ಮೂಲಕ ಲೋಕಸಭೆ ಚುನಾವಣೆಗೆ ಹಿಜಾಬ್ ಕೂಡಾ ಒಂದು ಚುನಾವಣಾ ಅಸ್ತ್ರವಾಗಲಿದೆ.
60 ಸಿಮ್‍ಕಾರ್ಡ್‍ಗಳೊಂದಿಗೆ ಸಿಕ್ಕಿಬಿದ್ದ ತೈವಾನ್ ಪ್ರಜೆ ವಿಚಾರಣೆ
ಕಳೆದ ಆರು ತಿಂಗಳಿಂದ ಕಾಂಗ್ರೆಸ್ ಸರಕಾರ ಗೊಂದಲದಲ್ಲಿದೆ. ತಮ್ಮ ವೈಫಲ್ಯವನ್ನು ಮರೆಮಾಚಲು ಸಿಎಂ ಇಂತಹ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯ ಸರಕಾರ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ. ಸರಕಾರ ಹಿಜಾಬ್ ಹಿಂಪಡೆದರೆ ಜೇನುಗೂಡಿಗೆ ಕಲ್ಲು ಹೊಡೆದಂತೆ ಆಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಧಾರ್ಮಿಕ ನೆಲೆಯಲ್ಲಿ ಬಿರುಕು ಮೂಡಿಸುತ್ತದೆ. ನಿರ್ಧಾರದ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಲು ನಾವು ಸಿದ್ಧರಿದ್ದೇವೆ ಎಂದು ಶಾಸಕರು ಹೇಳಿದ್ದಾರೆ.