ಬೆಂಗಳೂರು,ಸೆ.23- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದಲೇ ಶೌಚಾಲಯ ಸ್ವಚ್ಚಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯ ಶಿಕ್ಷಕಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಂದ್ರಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮಿದೇವಮ್ಮ ಬಂತರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಲಕ್ಷಿ ದೇವಮ್ಮ ಅವರನ್ನು ಅಮಾನತುಗೊಳಿಸಿದೆ.
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿರುವ ಅಂದ್ರಹಳ್ಳಿಯ ಶಾಲೆಯಲ್ಲಿ ಮಕ್ಕಳಿಂದಲೇ ಶಿಕ್ಷಕರು ಶಾಲೆಯ ಶೌಚಾಲಯವನ್ನು ಬ್ಲೀಚಿಂಗ್ ಪೌಡರ್ ಹಾಗೂ ಆ್ಯಸಿಡ್ ಹಾಕಿಸಿ ಸ್ವಚ್ಛಗೊಳಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ವಿಷಯ ತಿಳಿದ ಮಕ್ಕಳ ಪೋಷಕರು ಶಾಲೆ ಮುಂದೆ ಜಮಾಯಿಸಿ ಶಿಕ್ಷಕರ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗಿಳಿದರು.
“ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸುವ ಕೆಲಸಕ್ಕೆ ಸ್ವತಃ ಸಿಎಂ ಅವರೇ ಕೈ ಹಾಕಿರುವುದು ದುರದೃಷ್ಟ”
ಸುದ್ದಿ ತಿಳಿಯುತ್ತಿದ್ದಂತೆ ಬಿಇಒ ಆಂಜನಪ್ಪ ಅವರು ಸ್ಥಳಕ್ಕಾಗಮಿಸಿ ಪ್ರತಿಭಟನಾಕರರ ಮನವೊಲಿಸಿ ನಂತರ ಬ್ಯಾಡರಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಎಫ್‍ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಶಾಲಾ ಮುಖ್ಯ ಶಿಕ್ಷಕಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇತ್ತೀಚೆಗೆ ಕೋಲಾರದ ಮಾಲೂರಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಚಗೊಳಿಸಲಾಗಿದ್ದ ಪ್ರಕರಣ ಮಾಸುವ ಮುನ್ನವೇ ಸಿಲಿಕಾನ್ ಸಿಟಿಯಲ್ಲಿ ಶಾಲಾ ಮಕ್ಕಳಿಂದಲೇ ಶೌಚಾಲಯ ಸ್ವಚ್ಚಗೊಳಿಸಿರುವುದು ಬೇಸರದ ಸಂಗತಿ.