ಚಿಕ್ಕಮಗಳೂರು,ಡಿ.3- ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಮಹಿಳೆಯ ಮೇಲೆ ದಾಳಿ ನಡೆಸಿ ನಂತರ ಚಾಕುವಿನಿಂದ ಆಕೆಯ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ಅಲೂರು ಸಮೀಪದ ಅರೆನೂರು ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮೃತ ದುರ್ದೈವಿ ಸಂಧ್ಯಾ (32) ಎಂದು ಗುರುತಿಸಲಾಗಿದೆ.
ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಕೃತ್ಯಎಸಗಲಾಗಿದೆ ಎಂದು ತಿಳಿದು ಬಂದಿದೆ. ಕೊಲೆ ಮಾಡಿದ ಹಂತಕ ಘಟನೆಯ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಕೊಲೆಯ ಭೀಕರತೆ ಎಷ್ಟಿತ್ತೆಂದರೆ, ಜೀವ ಉಳಿಸಿಕೊಳ್ಳವ ಸಲುವಾಗಿ ಸಂಧ್ಯಾ ಅವರು ಮನೆಯ ತುಂಬಾ ಓಡಾಡಿದ್ದು, ರಕ್ತ ಚೆಲ್ಲಾಡಿದೆ.
ಗೋಡೆ ಹಿಡಿದು ಏಳಲು ಪ್ರಯತ್ನಿಸಿದ ಸಂಧ್ಯಾ ಅವರ ರಕ್ತಮಿಶ್ರಿತ ಹಸ್ತದ ಗುರುತುಗಳು ಗೋಡೆಯ ಮೇಲೆ ಮೂಡಿರುವುದು ಘಟನೆಯ ಕ್ರೌರ್ಯವನ್ನು ಸೂಚಿಸುತ್ತದೆ.ಸಂಧ್ಯಾ ಅವರು ಪತಿಯನ್ನು ಬಿಟ್ಟು ತವರು ಮನೆ ಸೇರಿದ್ದರು. ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಇವರ ಬಗ್ಗೆ ಅಲೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಸಹ ದಾಖಲಾಗಿತ್ತು.
ನಿನ್ನೆ ಸಂಜೆ ಅರೆನೂರು ಗ್ರಾಮದ ಮನೆಗೆ ವಾಪಸ್ ಬಂದಿದ್ದ ಸಂಧ್ಯಾ ಅವರು ಇಂದು ಬರ್ಭರವಾಗಿ ಹತ್ಯೆಗೀಡಾಗಿದ್ದಾರೆ. ಈ ಸಂಬಂಧ ಸಂಧ್ಯಾ ಅವರ ಸಹೋದರ ಸತೀಶ್ ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆಲ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
